ADVERTISEMENT

ಜೋಶಿ v/s ವಿನಯ ಕುಲಕರ್ಣಿ ಚುನಾವಣೆಯಾಗಲಿ: ಕಾಂಗ್ರೆಸ್ ಅಭ್ಯರ್ಥಿ ಬಹಿರಂಗ ಸವಾಲು

ಆದರ್ಶ ಗ್ರಾಮವನ್ನೇ ಅಭಿವೃದ್ಧಿ ಮಾಡಲಾಗಿಲ್ಲ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2019, 10:05 IST
Last Updated 5 ಏಪ್ರಿಲ್ 2019, 10:05 IST
ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಯಿತು. ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ, ಶಾಸಕ ಪ್ರಸಾದ್ ಅಬ್ಬಯ್ಯ ಇದ್ದಾರೆ–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಯಿತು. ಧಾರವಾಡ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ, ಶಾಸಕ ಪ್ರಸಾದ್ ಅಬ್ಬಯ್ಯ ಇದ್ದಾರೆ–ಪ್ರಜಾವಾಣಿ ಚಿತ್ರ   

ಹುಬ್ಬಳ್ಳಿ: ‘ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರಿಗೆ ಶಕ್ತಿ ಇದ್ದರೆ ಜೋಶಿ ವರ್ಸಸ್ ವಿನಯ ಕುಲಕರ್ಣಿ ಎಂದು ಚುನಾವಣೆ ಎದುರಿಸಲಿ’ ಎಂದು ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಬಹಿರಂಗ ಸವಾಲು ಹಾಕಿದರು.

ಶುಕ್ರವಾರ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅವರು, ರಾಹುಲ್ ಗಾಂಧಿ ಹೆಸರಲ್ಲಿ ವಿನಯ ಕುಲಕರ್ಣಿ ಚುನಾವಣೆ ಎದುರಿಸಲಿ ಎಂಬ ಜೋಶಿ ಅವರ ಹೇಳಿಕೆ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಯಿಸಿದರು.

‘ನರೇಂದ್ರ ಮೋದಿ ಅವರು ನಾಲ್ಕು ಬಾರಿ ಮುಖ್ಯಮಂತ್ರಿ ಹಾಗೂ ಒಂದು ಅವಧಿಗೆ ಪ್ರಧಾನಿಯಾಗಿದ್ದಾರೆ. ಸೋನಿಯಾ ಗಾಂಧಿ ಕುಟುಂಬ 20 ವರ್ಷಗಳಿಂದ ಅಧಿಕಾರದಿಂದ ದೂರವಿದೆ. ಪ್ರಧಾನಿ ಆಗುವ ಅವಕಾಶ ಇದ್ದರೂ, ರಾಹುಲ್ ಗಾಂಧಿ ನಿರಾಕರಿಸಿದರು’ ಎಂದರು.

ADVERTISEMENT

‘ಕಾರ್ಪೋರೇಟರ್ ವಾರ್ಡ್ ಫಂಡ್‌ನಲ್ಲಿ ಗಟರ್‌ ಕಾಮಗಾರಿ ಆರಂಭಿಸಿದರೂ ಜೋಶಿ ಅಲ್ಲಿಗೆ ಹೋಗಿ ಫೋಟೊ ತೆಗೆಸಿಕೊಳ್ಳುತ್ತಾರೆ. ವಾಸ್ತವವಾಗಿ ಹದಿನೈದು ವರ್ಷಗಳಲ್ಲಿ ಹೇಳಿಕೊಳ್ಳುವಂತಹ ಒಂದೇ ಒಂದು ಕೆಲಸವನ್ನು ಮಾಡಿಲ್ಲ. ಗ್ರಾಮೀಣ ಭಾಗಕ್ಕೆ ಅವರು ತಂದಿರುವ ಅನುದಾನ ಎಷ್ಟು ಎಂಬುದರ ಬಗ್ಗೆ ಪುಸ್ತಕ ಹೊರತರಲಿ’ ಎಂದರು.

‘ಗ್ರಾಮೀಣ ಜನರ ಜೀವನದ ಬಗ್ಗೆ ಜೋಶಿ ಅವರಿಗೆ ಅನುಭವವೇ ಇಲ್ಲ. ನಾನು ಹಳ್ಳಿಯಲ್ಲೇ ಹುಟ್ಟಿ ಬೆಳೆದವನು. ಆಲ್ಲಿನ ಪರಿಸ್ಥಿತಿ ಏನು ಎಂಬ ಅರಿವು ಇದೆ. ಅಧಿಕಾರ ಅವಧಿಯ ನಾಲ್ಕು ವರ್ಷಗಳಲ್ಲಿ ಸಿಆರ್‌ಎಫ್ ಅನುದಾನ ಬರಲಿಲ್ಲ. ಆದರೆ ಕೊನೆಯ ವರ್ಷ ಮಾತ್ರ ಹಣ ನೀಡಿದ್ದಾರೆ’ ಎಂದರು.

ಪ್ರಹ್ಲಾದ್ ಜೋಶಿ ತಾವೇ ಆಯ್ಕೆ ಮಾಡಿಕೊಂಡಿರುವ ಆದರ್ಶ ಗ್ರಾಮವನ್ನೇ ಅಭಿವೃದ್ಧಿಪಡಿಸಿಲ್ಲ, ಯಾರಾದರೂ ಆಗ್ರಾಮಕ್ಕೆ ಬಂದು ಅಲ್ಲಿನ ಸ್ಥಿತಿ ಹೇಗಿದೆ ಎಂದು ನೋಡಬಹುದು ಎಂದು ವಿನಯ ಕುಲಕರ್ಣಿ ಹೇಳಿದರು.

ಐಐಟಿ ಬರಲು ಸಿದ್ದರಾಮಯ್ಯ ಕಾರಣ

ಐಐಟಿಯನ್ನು ನಾನು ತಂದೆ ಎಂದು ಜೋಶಿ ಹೇಳಿಕೊಂಡು ತಿರುಗುತ್ತಾರೆ. ವಾಸ್ತವವಾಗಿ ರಾಯಚೂರಿಗೆ ಅದು ಮಂಜೂರಾಗಿತ್ತು. ನಾನು ಹಾಗೂ ಕಾಂಗ್ರೆಸ್‌ನ ಈ ಭಾಗದ ಹಿರಿಯ ಮುಖಂಡರು ಸೇರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹಾಕಿ ಅದನ್ನು ಧಾರವಾಡಕ್ಕೆ ನೀಡುವಂತೆ ಕೇಂದ್ರಕ್ಕೆ ಶಿಫಾರಸು ಮಾಡಿಸಿದೆವು ಎಂದು ವಿನಯ ಕುಲಕರ್ಣಿ ಹೇಳಿದರು.

ಧಾರವಾಡ ಐಐಟಿಗೆ 470 ಎಕರೆ ಜಮೀನನ್ನು ರಾಜ್ಯ ಸರ್ಕಾರ ಉಚಿತವಾಗಿ ನೀಡಿದೆ. ಆದ್ದರಿಂದ ಧಾರವಾಡ ಐಐಟಿಯ ಶ್ರೇಯಸ್ಸು ನಮಗೂ ಸಿಗಬೇಕು ಎಂದು ಅವರು ಪ್ರತಿಪಾದಿಸಿದರು.

ಸಿಆರ್‌ಎಫ್ ಹಣ ರಾಜ್ಯದ್ದೇ ಹೊರತು ಕೇಂದ್ರದಲ್ಲ

ಕೇಂದ್ರ ರಸ್ತೆ ನಿಧಿಯನ್ನು ಕೇಂದ್ರ ಸರ್ಕಾರ ರಾಜ್ಯಕ್ಕೆ ನೀಡಿದೆ ಎಂದು ಬಿಜೆಪಿಯವರು ಹೇಳುತ್ತಾರೆ. ಆದರೆ ವಾಸ್ತವವಾಗಿ ಆ ಹಣ ರಾಜ್ಯದ್ದೇ ಆಗಿದೆ. ಡೀಸೆಲ್ ಮೇಲೆ ವಿಧಿಸುವ ಸೆಸ್‌ನಿಂದ ವಾರ್ಷಿಕ ಸುಮಾರು ₹600 ಕೋಟಿ ಸಂಗ್ರಹವಾಗುತ್ತದೆ. ಅದೇ ಹಣವನ್ನು ಷರತ್ತಿನ ಮೇಲೆ ರಾಜ್ಯಗಳಿಗೆ ನೀಡಲಾಗುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.