ADVERTISEMENT

ಸಾಮಾನ್ಯ ಪ್ರಜೆ ಪರಿಚಯಿಸುವ ‘ಪ್ರಜಾಕೀಯ’: ಉಪೇಂದ್ರ

'ರಾಜಕೀಯ ಬದಲಾವಣೆಯ ಕನಸು ಬಿಚ್ಚಿಟ್ಟ ನಟ'

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2019, 15:00 IST
Last Updated 15 ಏಪ್ರಿಲ್ 2019, 15:00 IST
ಶಿವಮೊಗ್ಗದಲ್ಲಿ ನಟ ಉಪೇಂದ್ರ ಪ್ರಜಾಕೀಯ ಅಭ್ಯರ್ಥಿ ವೆಂಕಟೇಶ್ ಅವರ ಪರ ಕರಪತ್ರ ವಿತರಿಸಿದರು.
ಶಿವಮೊಗ್ಗದಲ್ಲಿ ನಟ ಉಪೇಂದ್ರ ಪ್ರಜಾಕೀಯ ಅಭ್ಯರ್ಥಿ ವೆಂಕಟೇಶ್ ಅವರ ಪರ ಕರಪತ್ರ ವಿತರಿಸಿದರು.   

ಶಿವಮೊಗ್ಗ: ಚುನಾವಣಾ ಆಯೋಗ ಕಣಕ್ಕೆ ಇಳಿದ ಪ್ರತಿಯೊಬ್ಬ ಅಭ್ಯರ್ಥಿಗಳನ್ನೂ ಜನರಿಗೆ ಪರಿಚಯಿಸುವ ಕೆಲಸ ಮಾಡಬೇಕು. ಪ್ರಚಾರದ ಹಣವನ್ನು ಆಯೋಗವೇ ಭರಿಸುವ ಕೆಲಸ ಮಾಡಬೇಕು ಎಂದುನಟ ಉಪೇಂದ್ರ ಕೋರಿದರು.

ಚುನಾವಣೆಗೆ ಸ್ಪರ್ಧಿಸುವ ಎಷ್ಟೋ ಅಭ್ಯರ್ಥಿಗಳಿಗೆ ಠೇವಣಿ ಕಟ್ಟಲೂ ಹಣ ಇರುವುದಿಲ್ಲ. ಅಂಥವರೂ ಚುನಾವಣೆಗೆ ಸ್ಪರ್ಧಿಸಲು ಆ ಮೂಲಕ ಅವಕಾಶ ನೀಡಬೇಕು.ಪ್ರಜಾಪ್ರಭುತ್ವದಲ್ಲಿ ಸಾಮಾನ್ಯ ಪ್ರಜೆಯೂ ಚುನಾವಣೆಗೆ ನಿಲ್ಲಬಹುದು. ಅಂತಹ ಪ್ರಜೆಗಳನ್ನು ಜನರಿಗೆ ಪರಿಚಯಿಸುವ ಕೆಲಸ ‘ಪ್ರಜಾಕೀಯ’ ಮಾಡುತ್ತಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಪ್ರತಿಪಾದಿಸಿದರು.

ಪ್ರಜಾಕೀಯ ಎಂದರೆ ರಾಜಕೀಯವಲ್ಲ. ಚುನಾವಣೆಗೆ ನಿಲ್ಲಲು ಬಯಸುವ ಅಭ್ಯರ್ಥಿ ಪ್ರಜಾಕೀಯ ಸೇರಲು ಪರೀಕ್ಷೆ ಇದೆ. ಅವರು ಸಂದರ್ಶನ ಎದುರಿಸಬೇಕು. ನಂತರ ಅವರಿಗೆ ಪ್ರವೇಶ. ಬ್ರಿಟೀಶ್ ಆಳ್ವಿಕೆ ಮುಂದುವರಿದ ಪರಿಕಲ್ಪನೆ ಹೋಗಲಾಡಿಸಬೇಕು. ಬ್ರಿಟಿಷ್‌ ಆಳ್ವಿಕೆ ಮುಗಿದ ಮೇಲೆ ಅವರು ತೆರವು ಮಾಡಿದ ಸ್ಥಾನದಲ್ಲಿ ನಮ್ಮ ಜನ ಪ್ರತಿನಿಧಿಗಳು ಕುಳಿತ್ತಿದ್ದಾರೆ. ಈ ಕಲ್ಪನೆ ಬದಲಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.

ADVERTISEMENT

ಪ್ರಜಾಕೀಯ ಅಭ್ಯರ್ಥಿಗೆ ಸಂಬಳ ನೀಡುವ ಪದ್ಧತಿ ಜಾರಿಗೆ ತಂದಿದ್ದೇವೆ. ಹಣ ಹಾಕಿ ಹಣ ತೆಗೆಯುವುದು ರಾಜಕೀಯ. ಉತ್ತಮ ಆರೋಗ, ಶಿಕ್ಷಣ ಬೇಕು ಎಂದರೆ ಪ್ರಜಾಕೀಯಬೇಕು. ಶ್ರಮ, ಬುದ್ಧಿವಂತಿಕೆ, ಕಾರ್ಯಕ್ಷಮತೆ ಸೇರಿದರೆ ಅದ್ಭುತ ಸಾಧನೆ ಮಾಡಬಹುದು. ಹಾಗಾಗಿ, ನಮ್ಮ ಪಕ್ಷದ ಅಭ್ಯರ್ಥಿ ವೆಂಕಟೇಶ್ ಅವರನ್ನು ಜನರು ಗೆಲ್ಲಿಸಬೇಕು. ಸಾಮಾಜಿಕ ಜಾಲತಾಣ, ಮಾಧ್ಯಮಗಳ ಮೂಲಕ ಪ್ರಚಾರ ನಡೆಸಲಾಗುವುದು ಎಂದರು.

ನಮ್ಮದು ಖಾಲಿ ಪ್ರಣಾಳಿಕೆ. ಪ್ರಜಾಕೀಯ ಅಧಿಕಾರಕ್ಕೆ ಬಂದರೆ ದೊಡ್ಡ ದೊಡ್ಡ ಕೆಲಸ ಮಾಡುತ್ತೇವೆ ಎಂದು ಹೇಳಲ್ಲ . ಗೆಲವು, ಸೋಲು ರಾಜಕೀಯದಲ್ಲಿ ಸಾಮನ್ಯ. ಆದರೆ, ಪ್ರಜಾಕೀಯದಲ್ಲಿ ಗೆಲುವು ಸೋಲಿಲ್ಲ. ಮೊದಲು ಪಕ್ಷ ನೋಡಿ ಮತಹಾಕಲಾಗುತ್ತಿತ್ತು. ನಂತರ ವ್ಯಕ್ತಿ ನೋಡಿ ಮತಹಾಕಲಾಯಿತು. ಈಗ ವಿಚಾರ ನೋಡಿ ಜನರು ಮತ ಹಾಕಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯದಲ್ಲಿ 27 ಕಡೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಾಗಿದೆ. ಬಳ್ಳಾರಿಯಲ್ಲಿ ನಮಗೆ ಅಭ್ಯರ್ಥಿ ಸಿಗಲಿಲ್ಲ. ಬೆಂಗಳೂರು, ಮೈಸೂರು ಹಾಗೂ ತುಮಕೂರಿನಲ್ಲಿ ಮಹಿಳೆಯರಿಗೆ ಅವಕಾಶ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.