ADVERTISEMENT

ವಿಜಯಪುರ ಲೋಕಸಭಾ ಕ್ಷೇತ್ರ: ಯಾರೊಬ್ಬರಿಗೂ ದಕ್ಕದ ‘ಹ್ಯಾಟ್ರಿಕ್’ ಗೆಲುವು..!

ಬಿ.ಕೆ.ಗುಡದಿನ್ನಿಗೆ ಮೂರು ಬಾರಿ ಒಲಿದ ಕ್ಷೇತ್ರ

ಡಿ.ಬಿ, ನಾಗರಾಜ
Published 15 ಏಪ್ರಿಲ್ 2019, 20:00 IST
Last Updated 15 ಏಪ್ರಿಲ್ 2019, 20:00 IST
ಬಿ.ಕೆ.ಗುಡದಿನ್ನಿ
ಬಿ.ಕೆ.ಗುಡದಿನ್ನಿ   

ವಿಜಯಪುರ:ವಿಜಯಪುರ ಲೋಕಸಭಾ ಕ್ಷೇತ್ರ ಇದೂವರೆಗೂ ಹದಿನಾರು ಸಾರ್ವತ್ರಿಕ ಚುನಾವಣೆ ಹಾಗೂ ಒಂದು ಉಪ ಚುನಾವಣೆಗೆ ಸಾಕ್ಷಿಯಾಗಿದೆ.

ಹದಿನೇಳು ಬಾರಿ ಸಂಸದರ ಆಯ್ಕೆ ನಡೆದಿದೆ. ಇದೂವರೆಗೂ ಒಮ್ಮೆಯೂ ಯಾರೊಬ್ಬರು ‘ಹ್ಯಾಟ್ರಿಕ್‌’ ಗೆಲುವು ಸಾಧಿಸಿಲ್ಲ. ಸತತ ಎರಡು ಬಾರಿ ವಿಜಯಿಯಾದವರೇ ಹೆಚ್ಚಿದ್ದಾರೆ.

ಕಾಂಗ್ರೆಸ್‌ ಪ್ರಭಾವವಿದ್ದ ಕಾಲ ಘಟ್ಟದಲ್ಲೂ ಒಬ್ಬರೇ ಸತತ ಮೂರು ಬಾರಿ ಸಂಸದರಾಗಿ ಆಯ್ಕೆಯಾದ ಇತಿಹಾಸ ಕ್ಷೇತ್ರದಲ್ಲಿಲ್ಲ. ನೆಹರೂ ಆಪ್ತ ರಾಜಾರಾಮ ದುಬೆ ಪ್ರಥಮ ಸಂಸದರಾಗಿ ಆಯ್ಕೆಯಾದರೂ; ಈ ಸಾಧನೆಗೈದಿಲ್ಲ.

ADVERTISEMENT

ವಿಜಯಪುರ ಲೋಕಸಭಾ ಕ್ಷೇತ್ರದಿಂದ ಅತಿ ಹೆಚ್ಚು ಬಾರಿ ಒಬ್ಬರಿಗೆ ಸಂಸದರಾಗಿ ಕೆಲಸ ನಿರ್ವಹಿಸುವ ಅವಕಾಶ ಸಿಕ್ಕಿರುವುದು ಬಿ.ಕೆ.ಗುಡದಿನ್ನಿ ಅವರಿಗೆ. ಗುಡದಿನ್ನಿ ಒಟ್ಟು ಮೂರು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.

1967ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸ್ವತಂತ್ರ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜಿ.ಡಿ.ಪಾಟೀಲ, ನೆಹರೂ ಆಪ್ತ ರಾಜಾರಾಮ ದುಬೆ ಅವರಿಗೆ ಸೋಲುಣಿಸುವ ಮೂಲಕ, ದುಬೆ ಅವರ ರಾಜಕಾರಣಕ್ಕೆ ಇತಿಶ್ರೀ ಹಾಕಿದರು. ತಮ್ಮ ಅಧಿಕಾರದ ಅವಧಿಯಲ್ಲೇ ಅಕಾಲ ಮರಣಕ್ಕೆ ಸಂಸದ ಪಾಟೀಲ ತುತ್ತಾಗಿದ್ದರಿಂದ 1968ರಲ್ಲಿ ಉಪ ಚುನಾವಣೆ ಘೋಷಣೆಯಾಯ್ತು.

ಕ್ಷೇತ್ರವನ್ನು ಮರಳಿ ಕೈ ವಶಪಡಿಸಿಕೊಳ್ಳಲಿಕ್ಕಾಗಿ ಶಿಕ್ಷಕರಾಗಿದ್ದ ಬಿ.ಕೆ.ಗುಡದಿನ್ನಿ ಅವರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡಿ ಅಖಾಡಕ್ಕಿಳಿಸಿತು. ಗುಡದಿನ್ನಿ ಈ ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಪ್ರಥಮ ಬಾರಿಗೆ ಲೋಕಸಭೆ ಪ್ರವೇಶಿಸಿದರು.

ಈ ಅವಧಿಯಲ್ಲೇ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ವಿದ್ಯಮಾನ ನಡೆದವು. ಕಾಂಗ್ರೆಸ್‌ ಇಬ್ಭಾಗವಾಯ್ತು. ಗುಡದಿನ್ನಿ ಎಸ್.ನಿಜಲಿಂಗಪ್ಪ ಸಾರಥ್ಯದ ಸಂಸ್ಥಾ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡರು. ಚೌದ್ರಿ ಕುಟುಂಬ ಇಂದಿರಾ ಕಾಂಗ್ರೆಸ್‌ನಲ್ಲಿ ಸಕ್ರಿಯವಾಯ್ತು.

1971ರಲ್ಲಿ ನಡೆದ ಚುನಾವಣೆಗೆ ಗುಡದಿನ್ನಿ ಸಂಸ್ಥಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದರು. ಇಂದಿರಾ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ ಭೀಮಪ್ಪ ಎಲ್ಲಪ್ಪ ಚೌದ್ರಿ ವಿಜಯಿಯಾದರು. ಸೋತ ಗುಡದಿನ್ನಿ ರಾಷ್ಟ್ರ ರಾಜಕಾರಣದಿಂದ ದೂರ ಉಳಿದರು. ವಾಯವ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾಗಿ ಎರಡು ಅವಧಿ ಕಾರ್ಯ ನಿರ್ವಹಿಸಿದರು.

ಕೆ.ಬಿ.ಚೌದ್ರಿ 1977, 1980ರಲ್ಲಿ ಸತತ ಎರಡು ಬಾರಿ ಸಂಸದರಾಗಿ ಆಯ್ಕೆಯಾದರು. 1984ರ ಚುನಾವಣೆಯಲ್ಲಿ ಸ್ಪರ್ಧಿಸದಿದ್ದರಿಂದ ‘ಹ್ಯಾಟ್ರಿಕ್‌’ ಅವಕಾಶ ಕಳೆದುಕೊಂಡರು.

1989ರ ಚುನಾವಣೆಗೆ ಕಾಂಗ್ರೆಸ್‌ ಮತ್ತೆ ಬಿ.ಕೆ.ಗುಡದಿನ್ನಿ ಅವರನ್ನೇ ತನ್ನ ಹುರಿಯಾಳನ್ನಾಗಿಸಿತು. ಗುಡದಿನ್ನಿ ಹಾಲಿ ಸಂಸದ ಎಸ್.ಎಂ.ಗುರಡ್ಡಿಗೆ ಸೋಲುಣಿಸಿ ಎರಡನೇ ಬಾರಿಗೆ ಲೋಕಸಭೆ ಪ್ರವೇಶಿಸಿದರು. 1991ರಲ್ಲಿ ನಡೆದ ಚುನಾವಣೆಯಲ್ಲೂ ಮೂರನೇ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಆದರೆ ಹ್ಯಾಟ್ರಿಕ್ ವಿಜಯಿಯಾಗಲಿಲ್ಲ. ತಮ್ಮ ಅಧಿಕಾರ ಅವಧಿಯ ಕೊನೆಯಲ್ಲಿ ಕೊನೆಯುಸಿರೆಳೆದರು.

1999ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅಖಾಡಕ್ಕಿಳಿದ ಬಸನಗೌಡ ಪಾಟೀಲ ಯತ್ನಾಳ ಸಂಸದರಾಗಿ ಆಯ್ಕೆಯಾದರು. 2004ರಲ್ಲೂ ಮತ್ತೊಮ್ಮೆ ಪುನರಾಯ್ಕೆಯಾದರು. ಆದರೆ 2009ರಲ್ಲಿ ಲೋಕಸಭಾ ಕ್ಷೇತ್ರ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದರಿಂದ ಸ್ಪರ್ಧೆಯ ಅವಕಾಶ ದೊರಕಲಿಲ್ಲ. ಹ್ಯಾಟ್ರಿಕ್‌ ಗೆಲುವು ಸಾಧಿಸುವ ಕನಸು ಈಡೇರಲಿಲ್ಲ.

2009, 2014ರ ಚುನಾವಣೆಯಲ್ಲಿ ರಮೇಶ ಜಿಗಜಿಣಗಿ ಗೆಲುವು ಸಾಧಿಸಿದ್ದಾರೆ. ಈಗಲೂ ಅಖಾಡದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.