ADVERTISEMENT

ಚುನಾವಣಾ ಪರೀಕ್ಷೆಯಲ್ಲಿ ‘ಭಾರತ’ ಗೆಲ್ಲಿಸಿ: ಮಾಳವಿಕಾ ಅವಿನಾಶ್‌ ಮನವಿ

‘ಪ್ರಬುದ್ಧರ ಗೋಷ್ಠಿ’

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2019, 12:42 IST
Last Updated 25 ಮಾರ್ಚ್ 2019, 12:42 IST
ದಾವಣಗೆರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರದ ಪ್ರಬುದ್ಧರ ಗೋಷ್ಠಿಯಲ್ಲಿ ಪಕ್ಷದ ರಾಜ್ಯ ಸಹ ವಕ್ತಾರೆ ಮಾಳವಿಕಾ ಅವಿನಾಶ್‌ ಮಾತನಾಡಿದರು.
ದಾವಣಗೆರೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರದ ಪ್ರಬುದ್ಧರ ಗೋಷ್ಠಿಯಲ್ಲಿ ಪಕ್ಷದ ರಾಜ್ಯ ಸಹ ವಕ್ತಾರೆ ಮಾಳವಿಕಾ ಅವಿನಾಶ್‌ ಮಾತನಾಡಿದರು.   

ದಾವಣಗೆರೆ: ಭಾರತೀಯ ನಾಗರಿಕರಿಗೆ ಲೋಕಸಭಾ ಚುನಾವಣೆ ಮೂಲಕ ಪರೀಕ್ಷೆ ಬರೆಯುವ ಕಾಲ ಬಂದಿದೆ. ‘ಭಾರತ’ವನ್ನು ಅತ್ಯುನ್ನತ ಶ್ರೇಣಿಯಲ್ಲಿ ಪಾಸು ಮಾಡಲು ‘ಮತ್ತೊಮ್ಮೆ ಮೋದಿ’ ಕೂಗಿನೊಂದಿಗೆ ‘ಮತ ಶಕ್ತಿ’ ಬಳಸಿಕೊಳ್ಳಿ ಎಂದು ಬಿಜೆಪಿ ರಾಜ್ಯ ಸಹ ವಕ್ತಾರೆ ಮಾಳವಿಕಾ ಅವಿನಾಶ್‌ ಮನವಿ ಮಾಡಿದರು.

ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಪ್ರಬುದ್ಧರ ಗೋಷ್ಠಿಯಲ್ಲಿ ಕೇಂದ್ರ ಸರ್ಕಾರದ ಸಾಧನೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟ ಅವರು, ‘ನಾಲ್ಕು ಮುಕ್ಕಾಲು ವರ್ಷಗಳ ಕಾಲ ಹಗರಣರಹಿತ, ಸಂಪೂರ್ಣ ಪಾರದರ್ಶಕ ಆಡಳಿತವನ್ನು ಎನ್‌ಡಿಎ ಸರ್ಕಾರ ನೀಡಿದೆ. ದೇಶ ಕಟ್ಟುವ ಕೆಲಸ ಆರಂಭಿಸಿದೆ. ಹಲವು ವಲಯಗಳಲ್ಲಿ ಭಾರತ ದಾಪುಗಾಲು ಇಡುತ್ತಿದೆ. ಹೀಗಾಗಿ ಈ ಬಾರಿಯ ಪರೀಕ್ಷೆಯಲ್ಲಿ ಕೇವಲ ಶೇ 35 ಅಂಕಗಳೊಂದಿಗೆ ಪಾಸಾದರೆ ಸಾಲದು; ಶೇ 90 ಅಂಕಗಳೊಂದಿಗೆ ಪಾಸಾಗುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ಯುಪಿಎ ಒಂಬತ್ತು ವರ್ಷಗಳ ಕಾಲ ಆಡಳಿತ ನಡೆಸಿದ ಬಳಿಕ 2013ರಲ್ಲಿ ದೇಶದ ಎಲ್ಲಾ ಕಡೆ ಕತ್ತಲೆ, ದಿಗ್ಭ್ರಮೆಯ ವಾತಾವರಣ ನೆಲೆಸಿತ್ತು. ಮುಂದೇನು ಎಂಬ ಚಿಂತೆಯಲ್ಲಿ ಜನ ಕುಸಿದು ಕುಳಿತಿದ್ದರು. ಭ್ರಷ್ಟಾಚಾರದಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನಕ್ಕೆ ಬಂದಿತ್ತು. ಮುಂಬೈನ ತಾಜ್ ಹೋಟೆಲ್‌ ಮೇಲೆ ಉಗ್ರರು ದಾಳಿ ನಡೆಸಿದರೂ ಪಾಕಿಸ್ತಾನಕ್ಕೆ ಪ್ರತ್ಯುತ್ತರ ನೀಡಲಿಲ್ಲ. ಒಮ್ಮೆ ನೀಡಲು ಮುಂದಾಗಿದ್ದರೂ ಆಗ ಉಳಿದ ರಾಷ್ಟ್ರಗಳು ಸಮ್ಮನೆ ಇರುವ ವಾತಾವರಣ ಇರಲಿಲ್ಲ’ ಎಂದು ಸ್ಮರಿಸಿದರು.

ADVERTISEMENT

‘ಇಂಥ ಸಂದರ್ಭದಲ್ಲೇ ಆಶಾಕಿರಣದಂತೆ ಬಂದ ಆಗಿನ ಗುಜರಾತ್‌ ಮುಖ್ಯಮಂತ್ರಿ ನರೇಂದ್ರ ಮೋದಿ ದೆಹಲಿಗೆ ಸೇತುವೆ ಕಟ್ಟಿದರು. ನಾವೆಲ್ಲ ಅಳಿಲು ಸೇವೆ ಸಲ್ಲಿಸಿದ್ದೆವು. ಅವರು ಅಧಿಕಾರಕ್ಕೆ ಬಂದ ಬಳಿಕ ವಿರಮಿಸದೇ ಕೆಲಸ ಮಾಡಿದರು. ವಿದೇಶಗಳನ್ನು ಸುತ್ತಿ ಭಾರತಕ್ಕೆ ವಿಶ್ವ ಮನ್ನಣೆ ತಂದುಕೊಟ್ಟರು. ಪಾಕಿಸ್ತಾನದ ಬಾಲಾಕೋಟ್‌ ಮೇಲಿನ ಉಗ್ರರ ಶಿಬಿರದ ಮೇಲೆ ಭಾರತ ಈಚೆಗೆ ವಾಯು ದಾಳಿ ನಡೆಸಿದರೂ ಎಲ್ಲಾ ರಾಷ್ಟ್ರಗಳು ಭಾರತಕ್ಕೆ ಬೆಂಬಲ ನೀಡಿತು’ ಎಂದು ಪ್ರತಿಪಾದಿಸಿದರು.

ರಾಹುಲ್‌ ಗಾಂಧಿ ನಾಯಕತ್ವ ಯಶಸ್ವಿ ಕಾಣದಿರುವುದರಿಂದ ಕಾಂಗ್ರೆಸ್‌ನವರು ಪ್ರಿಯಾಂಕ ಗಾಂಧಿಯನ್ನು ಕರೆ ತಂದರು. ಬ್ರಹ್ಮಾಸ್ತ್ರ ಎಂಬುವಂತೆ ಬಿಂಬಿಸಿದರು. ಆದರೆ, ಮೊನ್ನೆ ಅವರು ಬರಿ ಆರು ನಿಮಿಷ ಮಾತನಾಡಿದರು. 2 ಕೋಟಿ ಉದ್ಯೋಗ ಸೃಷ್ಟಿಸಿಲ್ಲ; ಜನರ ಬ್ಯಾಂಕ್‌ ಖಾತೆಗೆ ₹ 15 ಲಕ್ಷ ಹಾಕಿಲ್ಲ ಎಂಬುನ್ನು ಪ್ರಸ್ತಾಪಿಸಿದ್ದು ಬಿಟ್ಟರೆ ಹೊಸದನ್ನೇನೂ ಹೇಳಲಿಲ್ಲ. ‘ಮುದ್ರಾ’ ಯೋಜನೆಯಡಿ 12.34 ಕೋಟಿ ಜನರಿಗೆ ಸ್ವಂತ ಉದ್ಯಮ ಸ್ಥಾಪಿಸಲು ಸಾಲ ಸೌಲಭ್ಯ ಕಲ್ಪಿಸಲಾಗಿದೆ. ನೌಕರಿ ಕೊಡುವುದು ಮಾತ್ರ ಉದ್ಯೋಗ ಸೃಷ್ಟಿಯೇ ಎಂದು ಕಾಂಗ್ರೆಸ್‌ ನಾಯಕರ ಟೀಕೆಗೆ ತಿರುಗೇಟು ನೀಡಿದರು.

ಬಿಜೆಪಿ ಉತ್ತರ ವಿಧಾನಸಭಾ ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷ ಭಾಗ್ಯಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಎಸ್‌.ಎ. ರವೀಂದ್ರನಾಥ, ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷ ಜಯಮ್ಮ, ಮುಖಂಡರಾದ ಆರ್‌. ಲಕ್ಷ್ಮಣ್‌, ಸವಿತಾ ರವಿಕುಮಾರ್‌, ಶಿವರಾಜ್‌ ಪಾಟೀಲ ಹಾಜರಿದ್ದರು. ಲೋಕಸಭಾ ಚುನಾವಣಾ ಉಸ್ತುವಾರಿ ಎಚ್‌.ಎಂ. ರುದ್ರಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾಗ್ಯ ಪಿಸಾಳೆ ಪ್ರಾರ್ಥಿಸಿದರು.

ಕಣ್ಣೀರು ಹಾಕುವ ‘ವಿಕ್ಸ್‌ ಪ್ಯಾಮಿಲಿ’

ರೈತರ ಕಣ್ಣೀರು ಒರೆಸುವ ಬದಲು ಈ ‘ವಿಕ್ಸ್‌ ಫ್ಯಾಮಿಲಿ’ಯ ಕುಟುಂಬದ ಸದಸ್ಯರೆಲ್ಲರೂ ತಾವೇ ಕಣ್ಣೀರು ಹಾಕುತ್ತಿದ್ದಾರೆ ಎಂದು ಮಾಳವಿಕಾ ಅವಿನಾಶ್‌ ದೇವೇಗೌಡ ಕುಟುಂಬವನ್ನು ಟೀಕಿಸಿದರು.

‘ರೈತರ ₹ 45 ಸಾವಿರ ಕೋಟಿ ಸಾಲಮನ್ನಾ ಮಾಡುತ್ತೇವೆ ಎಂದು ಭರವಸೆ ನೀಡಿದರು. ಆದರೆ, ಇದುವರೆಗೆ ಕೇವಲ ₹ 1,160 ಕೋಟಿ ಸಾಲ ಮಾತ್ರ ಮನ್ನಾ ಆಗಿದೆ. ಇವರು ರೈತರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿಲ್ಲ’ ಎಂದು ವಾಗ್ದಾಳಿ ನಡೆಸಿದರು.

2004ರಲ್ಲಿಯೇ ಸ್ವಾಮಿನಾಥನ್‌ ಆಯೋಗ ರಚಿಸಲಾಗಿತ್ತು. ಆದರೆ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಅನುಷ್ಠಾನಗೊಳಿಸಲು ಮೋದಿ ಸರ್ಕರವೇ ಬರಬೇಕಾಯಿತಾ ಎಂದು ಪ್ರಶ್ನಿಸಿದರು.

ಗಂಗಾ ಸ್ವಚ್ಛತೆ, ನದಿ ಜೋಡಣೆ ಹಂಬಲ

ಪ್ರಬುದ್ಧರ ಗೋಷ್ಠಿಯ ಸಂವಾದದಲ್ಲಿ ಅರಣ್ಯ ಇಲಾಖೆ ನಿವೃತ್ತ ಅಧಿಕಾರಿ ಕೆ. ಬಸವರಾಜಪ್ಪ, ‘ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ರೈತರಿಗೆ ನೀರು ಕಲ್ಪಿಸುವುದು ರಾಷ್ಟ್ರದ ಭದ್ರತೆಯಷ್ಟೇ ಪ್ರಮುಖ ವಿಷಯ. ದೇಶದ ಐದು ನದಿಗಳು ನೀರು ಪಾಕಿಸ್ತಾನಕ್ಕೆ ಹರಿದು ಹೋಗುತ್ತಿದ್ದು, ಅದನ್ನು ನಿಲ್ಲಿಸಬೇಕು. ನದಿಗಳನ್ನು ಜೋಡಿಸುವ ಕೆಲಸ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

‘ಈ ಮೊದಲು ನಾನು ಔಷಧಕ್ಕೆ ತಿಂಗಳಿಗೆ ₹ 2,000 ಖರ್ಚು ಮಾಡುತ್ತಿದ್ದೆ. ಜನೌಷಧ ಕೇಂದ್ರ ಆರಂಭಿಸಿದ ಬಳಿಕ ಇದು ಕೇವಲ ₹ 500ಕ್ಕೆ ಬಂದು ನಿಂತಿದೆ. ಎಲ್ಲಾ ಬಗೆಯ ಔಷಧಗಳೂ ಅಲ್ಲಿ ಸಿಗುವಂತೆ ನೋಡಿಕೊಳ್ಳಬೇಕು’ ಎಂದು ಎಸ್‌.ಟಿ. ಶಿವಪ್ಪ ಒತ್ತಾಯಿಸಿದರು.

‘ನದಿ ಜೋಡಣೆ ವಾಜಪೇಯಿ ಕನಸಾಗಿತ್ತು. ಆದರೆ, ಪ್ರಧಾನಿ ಮೋದಿ ಇದರ ಬಗ್ಗೆ ಮಾತನಾಡುತ್ತಿಲ್ಲ’ ಎಂದು ಹಿರಿಯ ನಾಗರಿಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ಗಂಗಾ ನದಿಯನ್ನು ಸ್ವಚ್ಛವಾಗಿಡಲು ಅದರ ಅಕ್ಕಪಕ್ಕದಲ್ಲಿ ಹೆಣ ಸುಡುವುದಕ್ಕೆ ಅವಕಾಶ ನೀಡಬಾರದು ಎಂದು ನಿವೃತ್ತ ನೌಕರ ಡಾ. ಈಶ್ವರಪ್ಪ ಸಲಹೆ ನೀಡಿದರು.

‘ಕೇವಲ ಸಾವಿರಾರು ಕೋಟಿ ಹಣ ಖರ್ಚು ಮಾಡುವುದರಿಂದ ಗಂಗಾ ನದಿ ಸ್ವಚ್ಛವಾಗುವುದಿಲ್ಲ. ಅದನ್ನು ಸ್ವಚ್ಛವಾಗಿಡಬೇಕು ಎಂಬ ಬಗ್ಗೆ ಜನರಲ್ಲಿ ಮೊದಲು ಅರಿವು ಮೂಡಿಸಬೇಕು’ ಎಂದು ನಿವೃತ್ತ ಪ್ರಾಚಾರ್ಯ ಆರ್‌.ಎಚ್‌. ಕರೂರ್‌ ಅಭಿಪ್ರಾಯಪಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಮಾಳವಿಕ, ‘ಗಂಗಾ ನದಿ ಸಾವಿರಾರು ಕಿ.ಮೀ. ಹರಿಯುತ್ತಿದೆ. ಹೀಗಾಗಿ ಹಲವು ರಾಜ್ಯಗಳ ಸರ್ಕಾರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕಾಗಿದೆ. ಕಾರ್ಖಾನೆಗಳ ತ್ಯಾಜ್ಯ ನದಿಗೆ ಸೇರುವುದನ್ನು ತಡೆಯಲಾಗಿದೆ. ಸ್ವಚ್ಛಗೊಳಿಸುವ ಹಾದಿಯಲ್ಲಿ ಹೆಜ್ಜೆ ಇಟ್ಟಿದ್ದೇವೆ. ಅದರಲ್ಲಿ ಸಾಧನೆ ಮಾಡುತ್ತೇವೆ ಎಂಬ ವಿಶ್ವಾಸ ಇದೆ’ ಎಂದರು.

‘ನದಿ ಜೋಡಣೆ ವಿಷಯವನ್ನು ಪಕ್ಷದ ವರಿಷ್ಠರ ಗಮನಕ್ಕೆ ತರಲಾಗುವುದು. ಈ ಬಾರಿಯ ಪ್ರಣಾಳಿಕೆಯಲ್ಲಿ ಈ ವಿಚಾರವನ್ನೂ ಸೇರಿಸಿಕೊಳ್ಳಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬುದ್ಧಿಜೀವಿ ಬೇಡ ಪ್ರಬುದ್ಧರು ಬೇಕು’

‘ಪುಲ್ಮಾಮ ದಾಳಿ ನಡೆದ ಬಳಿಕ ಬುದ್ಧಿಜೀವಿಗಳು ಮೃತಪಟ್ಟಿ ಯೋಧರ ಜಾತಿ ಯಾವುದು ಎಂದು ಎಣಿಸುತ್ತ ಕುಳಿತಿದ್ದರು. ಮೋದಿಯನ್ನು ದ್ವೇಷಿಸಬೇಕು ಎಂಬ ಒಂದೇ ಕಾರಣಕ್ಕೆ ಯೋಧರ ಜಾತಿಯನ್ನೂ ಹುಡುಕು ಕೆಲಸ ಮಾಡಿದ್ದಾರೆ. ಅಂಥ ಬುದ್ಧಿಜೀವಿಗಳು ಆ ಕಡೆಯೇ ಇರಲಿ. ನಮ್ಮ ಪಕ್ಷಕ್ಕೆ ಪ್ರಬುದ್ಧರು ಬರಲಿ ಎಂಬ ಕಾರಣಕ್ಕೆ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಪ್ರಬುದ್ಧರ ಗೋಷ್ಠಿ ಏರ್ಪಡಿಸುತ್ತಿದ್ದೇವೆ’ ಎಂದು ಮಾಳವಿಕ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.