ADVERTISEMENT

Election FAQs | ಮತದಾರರ ಗುರುತಿನ ಚೀಟಿಯಲ್ಲಿ ವಿಳಾಸ ಬದಲಾಯಿಸುವುದು ಹೇಗೆ?

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2023, 16:19 IST
Last Updated 7 ಏಪ್ರಿಲ್ 2023, 16:19 IST
   

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಕಣ ರಂಗೇರಿದೆ. ಮೇ 10ಕ್ಕೆ ಮತದಾನ ನಿಗದಿಯಾಗಿದೆ. ಮತದಾನ ಪ್ರಮಾಣ ಹೆಚ್ಚಿಸಲು ಚುನಾವಣಾ ಆಯೋಗವು ಹಲವು ಪ್ರಯತ್ನಗಳನ್ನೂ ಮಾಡುತ್ತಿದೆ.

ಇನ್ನು ಮತದಾರ ಪಟ್ಟಿಯಲ್ಲಿ ಬದಲಾವಣೆ ಮಾಡಲು ಕೂಡ ಚುನಾವಣಾ ಆಯೋಗ ಅವಕಾಶ ನೀಡಿದೆ. ಮತದಾರರ ಗುರುತಿನ ಚೀಟಿಯಲ್ಲಿ ವಿಳಾಸ ಬದಲಾವಣೆ ಮಾಡುವ ವಿಧಾನ ಹೀಗಿದೆ.

ಆ್ಯಪ್ ಅಥವಾ ವೆಬ್‌ಸೈಟ್‌ ಮೂಲಕ ಗುರುತಿನ ಚೀಟಿಯಲ್ಲಿ ವಿಳಾಸ ಬದಲಿಸಬಹುದು.

ADVERTISEMENT

ವೆಬ್‌ಸೈಟ್‌ ಮೂಲಕ ಬದಲಿಸುವುದು ಹೇಗೆ?

ಮೊದಲನೆಯದಾಗಿ ವೋಟರ್ ಪೋರ್ಟಲ್‌ ವೆಬ್‌ಸೈಟ್‌ https://www.voterportal.eci.gov.in ಗೆ ಭೇಟಿ ನೀಡಿ, ಗುರುತಿನ ಚೀಟಿ ಸಂಖ್ಯೆ / ಮೊಬೈಲ್‌ ನಂಬರ್‌ ‌/ ಇ–ಮೇಲ್‌ ಐಡಿ ಮೂಲಕ ನೋಂದಾಯಿಸಿಕೊಳ್ಳಿ.

ಬಳಿಕ ‘Shift to other place’ ಎನ್ನುವ ಆಯ್ಕೆಗೆ ಕ್ಲಿಕ್‌ ಮಾಡಿ. ಅಲ್ಲಿ ಮತದಾರರ ಗುರುತಿನ ಚೀಟಿ ಸಂಖ್ಯೆ ನಮೂದಿಸಿ. ತಕ್ಷಣ ನಿಮ್ಮ ವಿವರಗಳು ಕಾಣಿಸಿಕೊಳ್ಳುತ್ತದೆ. ಯಾವ ವಿಧಾನಸಭಾ ಕ್ಷೇತ್ರಕ್ಕೆ ಬದಲಾಯಿಸಿಕೊಳ್ಳಬೇಕು ಎನ್ನುವುದನ್ನು ನಮೂದಿಸಿ. ನಂತರ ಹೊಸ ವಿಳಾಸ ನಮೂದಿಸಿ.

ಹೊಸ ವಿಳಾಸದ ದಾಖಲೆಯನ್ನು ಅಪ್ಲೋಡ್ ಮಾಡಬೇಕು. ಬಳಿಕ ಸಬ್ಮಿಟ್‌ ಬಟನ್ ಒತ್ತಿ. ರೆಫರೆನ್ಸ್‌ ಸಂಖ್ಯೆ ಕಾಣಿಸಿಕೊಳ್ಳುತ್ತದೆ. ಭವಿಷ್ಯದಲ್ಲಿ ನಿಮ್ಮ ಅರ್ಜಿಯ ಸ್ಥಿತಿಗತಿಯನ್ನು ತಿಳಿಯಲು ಈ ರೆಫರೆನ್ಸ್‌ ಸಂಖ್ಯೆ ಬೇಕಾಗುತ್ತದೆ.

ಒಂದು ವೇಳೆ ವಿಧಾನಸಭೆ ಕ್ಷೇತ್ರದ ಪರಿಧಿಯಲ್ಲೇ ವಿಳಾಸ ಬದಲಾಯಿಸುವುದಿದ್ದರೆ, Shifted within Assembly Constituency ಆಯ್ಕೆಯನ್ನು ಕ್ಲಿಕ್‌ ಮಾಡಬೇಕು.

ಆ್ಯಪ್‌ ಮೂಲಕ ಹೇಗೆ?

ಆ್ಯಪ್ ಮೂಲಕ ಈ ಪ್ರಕ್ರಿಯೆ ಮಾಡಲು ’Voter Helpline’ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು, ಅದರಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಮೂನೆ 8 (Form 8) ಆಯ್ಕೆ ಮಾಡಿಕೊಂಡು, ಅದರಲ್ಲಿ ವಿಳಾಸ ಬದಲಾವಣೆ ಮಾಡಿಕೊಳ್ಳಬಹುದು.

ನಿಮ್ಮ ದಾಖಲೆಗಳು ಮಾನ್ಯವಾಗಿದ್ದರೆ ಒಂದು ವಾರದಲ್ಲಿ ವಿಳಾಸ ಬದಲಾಗಲಿದೆ.

ಏನೆಲ್ಲಾ ದಾಖಲೆಗಳು ಬೇಕು?

ಒಂದು ಪಾಸ್‌ಪೋರ್ಟ್‌ ಅಳತೆಯ ಫೋಟೊ. ವಿಳಾಸದ ‍ಪುರಾವೆಯಾಗಿ ಯಾವುದಾದರೊಂದು ದಾಖಲಾತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.