ADVERTISEMENT

‘ಸಾಹೊ’ ಹಿಂದಿ ಡಬ್ಬಿಂಗ್ ಹಕ್ಕು ₹120 ಕೋಟಿ?

ಶ್ರದ್ಧಾಕಪೂರ್, ಪ್ರಭಾಸ್ ನಟನೆಯ ತೆಲುಗು ಚಿತ್ರ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2018, 12:06 IST
Last Updated 29 ಏಪ್ರಿಲ್ 2018, 12:06 IST
‘ಸಾಹೋ’ ಚಿತ್ರದಲ್ಲಿ ಪ್ರಭಾಸ್
‘ಸಾಹೋ’ ಚಿತ್ರದಲ್ಲಿ ಪ್ರಭಾಸ್   

‘ಬಾಹುಬಲಿ’ ಖ್ಯಾತಿಯ ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ಸಾಹೊ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ಚಿತ್ರದ ಬಗ್ಗೆ ತೆಲುಗು, ತಮಿಳು ಮತ್ತು ಹಿಂದಿ ಚಿತ್ರರಂಗಗಳು ಸೇರಿದಂತೆ ದೇಶದಾದ್ಯಾಂತ ಅಭಿಮಾನಿಗಳು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಆ್ಯಕ್ಷನ್‌ ಥ್ರಿಲ್ಲರ್ ಚಿತ್ರವನ್ನು ಪ್ರಭಾಸ್‌ ವರ್ಚಸ್ಸಿಗೆ ತಕ್ಕಂತೆ ತೆರೆಕಾಣಿಸಲು ನಿರ್ದೇಶಕ ಸುಜೀತ್ ಶ್ರಮಿಸುತ್ತಿದ್ದಾರೆ. ಈಚೆಗಷ್ಟೆ ಚಿತ್ರದ ಕೆಲವು ಹೋರಾಟ ಸನ್ನಿವೇಶಗಳನ್ನು ದುಬೈನ ಅಬುದಾಭಿಯಲ್ಲಿ ಶೂಟ್ ಮಾಡಲಾಗಿದೆ.

ಚಿತ್ರ ಇನ್ನೂ ಚಿತ್ರೀಕರಣದ ಹಂತದಲ್ಲಿ ಇರುವಾಗಲೇ ಹಿಂದಿ ಡಬ್ಬಿಂಗ್ ಹಕ್ಕು ಖರೀದಿಗಾಗಿ ಹಲವು ಸಂಸ್ಥೆಗಳು ಸ್ಪರ್ಧೆಗೆ ಇಳಿದಿವೆ. ಹಣ ಎಷ್ಟಾದರೂ ಖರೀದಿಸಲೇಬೇಕು ಎಂದು ತುದಿಗಾಲಲ್ಲಿ ನಿಂತಿವೆ. ಹೀಗಾಗಿ ಯಾರೂ ಊಹಿಸಲಾಗದಷ್ಟು ಹಣವನ್ನು ಡಬ್ಬಿಂಗ್ ರೈಟ್ಸ್‌ ಮೂಲಕವೇ ಸಾಹೊ ನಿರ್ಮಾಪಕರಿಗೆ ಲಭಿಸಲಿದೆ ಎಂದು ಟಾಲಿವುಡ್‌ನ ಅಂಗಳದಲ್ಲಿ ಪಿಸುಮಾತುಗಳು ಹರಿದಾಡುತ್ತಿವೆ.

ಸುಮಾರು ₹120 ಕೋಟಿಗೆ ಸಾಹೊ ಹಿಂದಿ ಅವತರಣಿಕೆಯೆ ಹಕ್ಕುಗಳು ಮಾರಾಟ ಆಗಲಿವೆ ಎಂದು ಹೇಳಲಾಗುತ್ತಿದೆ. ಈಚೆಗಷ್ಟೇ ಬಾಲಿವುಡ್‌ನ ಖ್ಯಾತ ಚಲನಚಿತ್ರ ನಿರ್ಮಾಣ ಸಂಸ್ಥೆ ಯುವಿ ಕ್ರಿಯೇಷನ್ಸ್‌ ಈ ಬಗ್ಗೆ ಆಲೋಚಿಸುತ್ತಿದೆ ಎಂಬ ಮಾತುಗಳು ಕೇಳಿಬಂದಿವೆ. ತೆಲುಗು ಚಿತ್ರವೊಂದರ ಡಬ್ಬಿಂಗ್ ಹಕ್ಕುಗಳು ಈವರೆಗೆ ಇಷ್ಟೊಂದು ಪ್ರಮಾಣದಲ್ಲಿ ಮಾರಾಟವಾದ ಉದಾಹರಣೆಗಳು ಇಲ್ಲ. ಹೀಗಾಗಿ ತೆರಕಾಣುವ ಮುನ್ನವೇ ಸಾಹೊ ಹೊಸ ದಾಖಲೆ ಬರೆಯಲಿದೆ ಎಂದು ಹೇಳಲಾಗುತ್ತಿದೆ.

ADVERTISEMENT

ಈಗಾಗಲೇ ಚಿತ್ರದ ಬಜೆಟ್‌ ₹150 ಕೋಟಿ ಮೀರಿದ್ದು, ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಬಾಲಿವುಡ್‌ ಬೆಡಗಿ ಶ್ರದ್ಧಾಕಪೂರ್ ಚಿತ್ರದಲ್ಲಿ ಪ್ರಭಾಸ್‌ಗೆ ನಾಯಕಿಯಾಗಿದ್ದಾರೆ. ತೆರೆಕಾಣುವ ಮುನ್ನವೇ ಅಪಾರ ನಿರೀಕ್ಷೆ ಹುಟ್ಟು ಹಾಕಿರುವ ಈ ಚಿತ್ರ ಎಷ್ಟರ ಮಟ್ಟಿಗೆ ರಂಜಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.

</p></p>

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.