ADVERTISEMENT

‘ಜಟ್ಟ’ ನಕ್ಕಾಗ...

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2013, 19:30 IST
Last Updated 7 ನವೆಂಬರ್ 2013, 19:30 IST

ಕಾಡೆಂದರೆ ನನಗೆ ನಾಡಿಗಿಂತ ಪ್ರೀತಿ’–  ನಟ ಕಿಶೋರ್ ತಮ್ಮ ಕಾಡಿನ ಒಲವನ್ನು ಒಂದೇ ಸಾಲಿನಲ್ಲಿ ತೆರೆದಿಟ್ಟರು. ನಾಡಿಗಿಂತ ಕಾಡೇ ಚೆನ್ನ ಎನ್ನುವುದು ಅವರ ಅನುಭವದ ಮಾತು. ಹೀಗಾಗಿ ‘ಜಟ್ಟ’ ಚಿತ್ರ ಅವರಿಗೆ ಹೆಚ್ಚು ಆಪ್ತ. ಅರಣ್ಯ ಕಾಯುವ, ಮರಗಿಡಗಳನ್ನು ಪ್ರೀತಿಸುವ ಮುಗ್ಧನಾಗಿ ಕಿಶೋರ್‌ ‘ಜಟ್ಟ’ ಚಿತ್ರದಲ್ಲಿ ಪಾತ್ರದ ಆಳಕ್ಕೆ ಇಳಿದಿದ್ದರು. ಮೆೇಲಿನ ಪ್ರೀತಿಯೇ ಆ ಪಾತ್ರದಲ್ಲಿ ಅಷ್ಟು ತಲ್ಲೀನನಾಗಲು ಕಾರಣ ಎಂಬ ವಿವರಣೆ ಅವರದು.

ವಿಶಿಷ್ಟ ದನಿಯ ‘ಜಟ್ಟ’ ಇಪ್ಪತ್ತೈದು ದಿನ ಪೂರೈಸಿದ ಸಂಭ್ರಮದ ಗಳಿಗೆಯದು. ಸ್ಟಾರ್‌ ಕಲಾವಿದರಿಲ್ಲದ, ಕಮರ್ಷಿಯಲ್‌ ಅಂಶಗಳಿಲ್ಲದ, ಪ್ರಚಾರವಿಲ್ಲದ ಸಿನಿಮಾ ಗೆಲುವು ಕಂಡ ಅಪರೂಪದ ಸಂದರ್ಭ ಕೂಡ. ಪರಭಾಷಾ ಸಿನಿಮಾಗಳಲ್ಲಿಯೂ ನಟಿಸುತ್ತಿರುವ ಕಿಶೋರ್‌ ಕನ್ನಡದಲ್ಲಿ ತಯಾರಾ­ಗುತ್ತಿರುವ ಗುಣಾತ್ಮಕ ಚಿತ್ರಗಳ ಬಗ್ಗೆ ಆತ್ಮವಿಶ್ವಾಸ­ದಿಂದ ಹೇಳಿ­ಕೊಳ್ಳುವಂಥ ಹೆಮ್ಮೆಯನ್ನು ‘ಜಟ್ಟ’ ನೀಡಿದೆ ಎಂದರು. ‘ಇದು ಕ್ರೌಡಿಂಗ್‌ ಸಿನಿಮಾ ಅಲ್ಲ, ಕ್ರೌಡ್‌ ಪಬ್ಲಿಸಿಟಿ ಸಿನಿಮಾ’ ಎಂದು ವಿಶ್ಲೇಷಿಸಿದರು ಕಿಶೋರ್‌.

ನಿರ್ದೇಶಕ ಗಿರಿರಾಜ್‌ ಅವರ ಕಥೆ ಮತ್ತು ನೀಡಿದ ಪಾತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು ಬಿ. ಸುರೇಶ್‌. ಕಥನದೊಳಗೆ ಹುದುಗಿರುವ ಗಂಭೀರ ಸಂಗತಿಗಳನ್ನು ಆಯ್ಕೆ ಮಾಡಿರುವ ಕಾರಣಗಳನ್ನು ತೆರೆಯ ಮೇಲೆಯೇ ವಿವರಿಸುವುದು ಗಿರಿರಾಜ್‌ ಉದ್ದೇಶವಾಗಿತ್ತಂತೆ. ಆದರೆ ಅದು ದೀರ್ಘವಾಗುತ್ತದೆ ಎನ್ನುವ ಸಲುವಾಗಿ ಕತ್ತರಿ ಹಾಕುವ ಅನಿವಾರ್ಯತೆ ಅವರಿಗೆ ಎದುರಾಯಿತು.

‘ಈ ಬಗೆಯ ಪಾತ್ರ ಮತ್ತೆ ನನ್ನ ವೃತ್ತಿಜೀವನದಲ್ಲಿ ಸಿಗಲಾರದು’ ಎಂಬ ಅಭಿಪ್ರಾಯ ನಟಿ ಪಾವನಾರದ್ದು. ಅವರಿಗೆ ಅರಿವಿಲ್ಲದಂತೆಯೇ ಪಾತ್ರದೊಳಗೆ ಪ್ರವೇಶಿಸಿದ್ದರಂತೆ. ವಿಮರ್ಶೆಗಳನ್ನು ಓದಿದಾಗ ನಿಜಕ್ಕೂ ಅಚ್ಚರಿಯಾಯಿತು. ಕಲಾವಿದ ದೊಡ್ಡವನಲ್ಲ. ಆತ ಮಾಡುವ ಪಾತ್ರ ದೊಡ್ಡದು ಎಂಬುದನ್ನು ಅವರು ಮನದಲ್ಲಿಟ್ಟುಕೊಂಡು ಕ್ಯಾಮೆರಾ ಎದುರಿಸಿದರಂತೆ.

ಈ ಚಿತ್ರ ‘ಮೀಡಿಯಾ ಬ್ಲಾಕ್‌ ಬಸ್ಟರ್‌’ ಎಂದರು ನಿರ್ಮಾಪಕ ರಾಜ್‌ಕುಮಾರ್‌ ಎನ್.ಎಸ್‌. ಗೆದ್ದ ಸಂಭ್ರಮ ಅವರ ಮುಖದಲ್ಲಿ ತುಳುಕಾಡುತ್ತಿತ್ತು. ‘ಜಟ್ಟನದು ಅತಿದೊಡ್ಡ ಗೆಲುವು ಅಲ್ಲದಿದ್ದರೂ ಯಾವುದೇ ನಷ್ಟವಾಗಿಲ್ಲ. ಹೂಡಿದ ಬಂಡವಾಳದ ನಿಟ್ಟಿನಲ್ಲಿ ನಾನು ಸುರಕ್ಷಿತ’ ಎಂಬ ಸಂತಸ ಹಂಚಿಕೊಂಡರು ಅವರು. ಮಲ್ಟಿಪ್ಲೆಕ್ಸ್‌ ಚಿತ್ರಮಂದಿರಗಳಿಂದ ಚಿತ್ರವನ್ನು ಎತ್ತಂಗಡಿ ಮಾಡಲಾಗಿತ್ತು ಎಂಬ ಮಾತನ್ನು ನಿರಾಕರಿಸಿದರು ಚಿತ್ರದ ಹಂಚಿಕೆದಾರರಾದ ಬಾಷಾ. z

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.