ADVERTISEMENT

`ಅಂಗಾರಕ'ನ ಬಿಸಿಬಿಸಿ ಸಂವಾದ!

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST

ಬೆಂಗಳೂರಿನ ಬಳಿ ಇರುವ ರಾಮೋಹಳ್ಳಿಯ ಮನೆಯೊಂದರಲ್ಲಿ ತಂದೆ-ಮಗನ ನಡುವೆ ಜೋರು ಚರ್ಚೆ. ಮಾತಿನಲ್ಲಿ ಪ್ರೀತಿ ತುಂಬಿದ್ದರೂ ಇಬ್ಬರೂ ತಮ್ಮ ದೃಷ್ಟಿಕೋನವನ್ನು ಬಿಟ್ಟು ಕದಲುತ್ತಿರಲಿಲ್ಲ. ಅವರ ವಾಗ್ವಾದದ ನಡುವೆ ಆಕ್ಷನ್- ಕಟ್ ಎಂಬ ಶಬ್ದಗಳು ಕೇಳಿಬರುತ್ತಿದ್ದವು. ಅದು `ಅಂಗಾರಕ' ಚಿತ್ರೀಕರಣ ಸಂದರ್ಭ.

ಅಪ್ಪ-ಮಗನ ನಡುವಿನ ಈ ಸನ್ನಿವೇಶಗಳನ್ನು ನಿರ್ದೇಶಕ ಶ್ರೀನಿವಾಸ ಕೌಶಿಕ್ ಉಸ್ತುವಾರಿಯಲ್ಲಿ ಛಾಯಾಗ್ರಾಹಕ ಬಿ.ಎಲ್. ಬಾಬು ಸೆರೆ ಹಿಡಿಯುತ್ತಿದ್ದರು. ಅಪ್ಪನ ಪಾತ್ರಧಾರಿ ಅವಿನಾಶ್. ಮಗನಾಗಿ ಪ್ರಜ್ವಲ್ ಅಭಿನಯಿಸುತ್ತಿದ್ದರು.

`ಅಂಗಾರಕ' ತ್ರಿಕೋನ ಪ್ರೇಮಕತೆ. ಜೊತೆಗೆ ಕಾಮಿಡಿಯೂ ಇದೆಯಂತೆ. ಪ್ರಜ್ವಲ್‌ಗೆ ನಾಯಕಿಯರಾಗಿ ಪ್ರಣೀತಾ ಮತ್ತು ಹಾರ್ದಿಕಾ ಶೆಟ್ಟಿ ನಟಿಸುತ್ತಿದ್ದಾರೆ. ಪ್ರಣೀತಾಗೆ ಸೀರೆ ತೊಡುವ ಸಾಂಪ್ರದಾಯಿಕ ಹೆಣ್ಣಿನ ಪಾತ್ರ ಸಿಕ್ಕಿದೆ. ಹಾರ್ದಿಕಾಗೆ ಆಧುನಿಕ ಯುವತಿಯ ಪಾತ್ರ. ಇದು `ಗಲಾಟೆ' ನಂತರ ಪ್ರಜ್ವಲ್ ಜೊತೆ ಅವರು ನಟಿಸುತ್ತಿರುವ ಎರಡನೇ ಚಿತ್ರ.

`ಹತ್ತು ವರ್ಷದ ಕೆಳಗೆ ಈ ಚಿತ್ರದ ಕತೆಯನ್ನು ಸಿದ್ಧಪಡಿಸಿದ್ದೆ. ಇದೀಗ ಸಿನಿಮಾ ಮಾಡುವ ಅವಕಾಶ ಸಿಕ್ಕಿದೆ. ಚಿತ್ರದ ಕತೆಯಲ್ಲಿ ಅಪ್ಪ ಮತ್ತು ಮಗನ ನಡುವೆ ನಡೆಯುವ ಚರ್ಚೆಯದೇ ಮೇಲುಗೈ. ಅವರಿಬ್ಬರ ನಡುವೆ ಆಗಾಗ್ಗೆ ವಾದ ವಿವಾದಗಳು ನಡೆಯುತ್ತಿರುತ್ತವೆ. ಅವರಿಬ್ಬರ ಗುರಿ ಬೇರೆ ಇರುವುದೇ ಅದಕ್ಕೆ ಕಾರಣ. ಅದೇನೆಂದು ಹೇಳಲಾರೆ' ಎಂದರು ನಿರ್ದೇಶಕರು.

ಅಂಗಾರಕ ಎಂದರೆ ಮಂಗಳ ಗ್ರಹ ಅಥವಾ ಕುಜ ಎಂಬ ಅರ್ಥವಿದ್ದರೂ, ಚಿತ್ರದಲ್ಲಿ ಅದಕ್ಕಿರುವ ಅರ್ಥ ಬೇರೆಯದೇ ಅಂತೆ. `ಅದು ಕೂಡ ಸಸ್ಪೆನ್ಸ್' ಎಂದ ಅವರು ಚಿತ್ರದ ಮಧ್ಯದಲ್ಲಿಯೇ ಆ ಗುಟ್ಟನ್ನು ರಟ್ಟು ಮಾಡುವುದಾಗಿ ತಿಳಿಸಿದರು. ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಕೂಡ ಕೌಶಿಕ್ ಅವರದೇ. ಚಾಮರಾಜನಗರ, ಬಿಳಿಗಿರಿರಂಗನ ಬೆಟ್ಟ, ಮೈಸೂರು, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗುತ್ತದೆಯಂತೆ.

ಪ್ರಜ್ವಲ್‌ಗೆ ಅವಿನಾಶ್ ಅವರೊಂದಿಗೆ ನಟಿಸುತ್ತಿರುವುದು ಖುಷಿಯ ವಿಚಾರ. ತಮಿಳಿನಲ್ಲಿ ಸಾಕಷ್ಟು ಚಿತ್ರಗಳಿಗೆ ಹಣ ಹೂಡಿದ್ದ ನಿರ್ಮಾಪಕಿ ಜಯಸುಧಾ ರಾಜೇಂದ್ರ ಅವರು `ಅಂಗಾರಕ'ನನ್ನು ತಮಿಳಿಗೆ ಡಬ್ ಅಥವಾ ರೀಮೇಕ್ ಮಾಡುವುದಾಗಿ ಹೇಳಿದರು. ಐದು ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.