ADVERTISEMENT

ಅಂಬರದಲ್ಲಿ ಕಾರ್ಮೋಡ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2012, 22:00 IST
Last Updated 6 ಡಿಸೆಂಬರ್ 2012, 22:00 IST
ಯೋಗೀಶ್
ಯೋಗೀಶ್   

ಮಾತಿನ ಭಾಗದ ಚಿತ್ರೀಕರಣ ಪೂರ್ಣಗೊಳಿಸಿದ ಬಳಿಕ ಮತ್ತೆ ಸುದ್ದಿಮಿತ್ರರನ್ನು ಎದುರುಗೊಂಡ `ಅಂಬರ' ಚಿತ್ರತಂಡದಲ್ಲಿ ದುಃಖ ಮಡುಗಟ್ಟಿತ್ತು. ಹರಿದ್ವಾರದಲ್ಲಿ ಎರಡು ವಾರಗಳ ಹಿಂದೆ ಕಣ್ಣೆದುರೇ ನಡೆದ ಅವಘಡದ ನೆನಪು ಅವರೆಲ್ಲರನ್ನು ಕಾಡುತ್ತಿತ್ತು.

ಗಂಗಾ ನದಿಯಲ್ಲಿ ಚಿತ್ರೀಕರಣ ನಡೆಸಲು ತೆರಳುವಾಗ ಸಹಾಯಕ ನಿರ್ದೇಶಕರಾಗಿದ್ದ ಸದಾಶಿವಯ್ಯ ದೋಣಿಯಿಂದ ಕಾಲು ಜಾರಿ ನೀರಿಗೆ ಬಿದ್ದಿದ್ದರು. ಅವರನ್ನು ರಕ್ಷಿಸುವ ಪ್ರಯತ್ನ ನಡೆಸಿದರೂ ನೀರಿನ ರಭಸದ ಸೆಳವಿನಲ್ಲಿ ಅದು ಸಾಧ್ಯವಾಗಿರಲಿಲ್ಲ. ಅವರ ಸಾವಿನ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ಸಂತಾಪ ಸಭೆಯಾಗಿ ಮಾರ್ಪಟ್ಟಿತ್ತು. ಮೂರ್ನಾಲ್ಕು ಜನರ ಕೆಲಸಗಳನ್ನು ಒಬ್ಬರೇ ಮಾಡುತ್ತಿದ್ದ ಅವರ ಉತ್ಸಾಹ ಮತ್ತು ಬದ್ಧತೆಯನ್ನು ಚಿತ್ರತಂಡ ಸ್ಮರಿಸಿಕೊಂಡಿತು.

ಘಟನೆ ಬಳಿಕ ಹರಿದ್ವಾರದಿಂದ ವಾಪಸಾದ ಚಿತ್ರತಂಡ ನೋವಿನ ನೆನಪಿನ ನಡುವೆಯೂ ಬಾಕಿ ಉಳಿದ ಮಾತಿನ ಸನ್ನಿವೇಶಗಳನ್ನು ಶ್ರೀರಂಗಪಟ್ಟಣ ಸಮೀಪ ಚಿತ್ರೀಕರಿಸಿಕೊಂಡಿತು. ನಾಲ್ಕು ಹಾಡುಗಳ ಚಿತ್ರೀಕರಣ ನಡೆಸಬೇಕಿದ್ದು, ಅದಕ್ಕಾಗಿ ಮುಂದಿನ ತಿಂಗಳು ವಿದೇಶಿ ನೆಲಕ್ಕೆ ಹಾರಲು ಚಿತ್ರತಂಡ ಚಿಂತನೆ ನಡೆಸಿದೆ.
ನಿರ್ದೇಶಕ ಸೇನ್ ಪ್ರಕಾಶ್ ತಾವು ನಟ ಯೋಗೀಶ್ ಅಭಿಮಾನಿ ಎಂದು ಹೇಳಿಕೊಂಡರು.

ಯೋಗಿಯನ್ನು ಮನದಲ್ಲಿಟ್ಟುಕೊಂಡೇ ಅವರು ಕಥೆ ಹೆಣೆದಿದ್ದಾರಂತೆ. ಅಲ್ಲದೆ ಅವರನ್ನು ವಿಭಿನ್ನ ಗೆಟಪ್‌ನಲ್ಲಿ ತೋರಿಸುವ ಇರಾದೆಯೂ ಅವರಲ್ಲಿತ್ತು. ಅದು `ಅಂಬರ'ದ ಮೂಲಕ ಈಡೇರುತ್ತಿದೆಯಂತೆ. ಯೋಗೀಶ್ ಪಾತ್ರದಲ್ಲಿ ಮೂರು ವಿಭಿನ್ನ ಛಾಯೆಗಳಿವೆಯಂತೆ.

ಅವರ ಪ್ರಕಾರ `ಅಂಬರ' ಮುದ್ದಾದ ಪ್ರೇಮಕಥೆಯುಳ್ಳ ಚಿತ್ರ.ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಎಂಬ ಖುಷಿ ನಟ ಯೋಗೀಶ್ ಅವರದು. ಕಾಲೇಜಿನ ವಿದ್ಯಾರ್ಥಿ ದೆಸೆ ಹಾಗೂ ನಂತರ ರಿಯಲ್ ಎಸ್ಟೇಟ್ ವ್ಯವಹಾರದ ಕೊಂಡಿಗಳು ಅವರ ಪಾತ್ರಕ್ಕೆ ಅಂಟಿಕೊಂಡಿವೆಯಂತೆ.

ಮಲಯಾಳಿ ಬೆಡಗಿ ಭಾಮಾಗೆ ಚಿತ್ರದ ಕಥೆ ಮತ್ತು ನಿರ್ದೇಶಕರ ಶ್ರಮ ವಿಪರೀತ ಮೆಚ್ಚುಗೆಯಾಗಿದೆ. ಸಾಮಾನ್ಯ ಪ್ರೇಕ್ಷಕ ಬಯಸುವ ಅಂಶಗಳೆಲ್ಲವೂ ಚಿತ್ರದಲ್ಲಿಅಡಕವಾಗಿದೆ ಎಂದರು ಭಾಮಾ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.