ADVERTISEMENT

ಅಂಬಾ... ಗೋವಿನ ಹೊಸ ಕಥೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 19:59 IST
Last Updated 4 ಏಪ್ರಿಲ್ 2013, 19:59 IST

ಹುಟ್ಟಿದಾಕ್ಷಣ ತಾಯಿ ಕಳೆದುಕೊಂಡ ಹುಡುಗನಿಗೆ ಮನೆಯಲ್ಲಿದ್ದ ಹಸು ತಾಯಿಯಾಗುತ್ತದೆ. ಅದರ ಹಾಲು ಕುಡಿಯುತ್ತಲೇ ಬೆಳೆದು ದೊಡ್ಡವನಾಗುವ ಯುವಕ, ತಂದೆಯ ಸಾಲಕ್ಕೆ ಹಸು ಜಫ್ತಿಯಾದಾಗ ಸಂಕಟಪಡುತ್ತಾನೆ. ನೋವು ತಾಳಲಾಗದೇ ಅದರ ಹಿಂದೆ ಅಲೆಯುತ್ತಾನೆ. ಹುಡುಗನ ಕತೆ ಕೇಳಿ, ಗೋವು ತಂದ ಮಾಲೀಕ ಕರಗುತ್ತಾನೆ. ಗೋವನ್ನೂ ಅದರೊಂದಿಗೆ ಇತರೆ ಹಸುಗಳನ್ನೂ ಬಿಟ್ಟುಬಿಡುತ್ತಾನೆ. ಈ ಕಥೆಗೆ ದೃಶ್ಯದ ರೂಪ ಕೊಟ್ಟಿದ್ದಾರೆ ನಿರ್ದೇಶಕರಾದ ಶಕ್ತಿ-ಶ್ವೇತಾ.

ಹದಿನೈದು ನಿಮಿಷದ `ಅಂಬಾ' ಗೋವಿನ ಮಹತ್ವ ಹೇಳಲು ಮೀಸಲಾದ ಕಿರುಚಿತ್ರ. ಮಹೇಂದ್ರ ಮುನ್ನೋತ್ ಇದರ ನಿರ್ಮಾಪಕರು. ಗೋವು ಸಂರಕ್ಷಣೆಗಾಗಿ ಅವರ ಹೋರಾಟ ಬೇರೆ ಬೇರೆ ನೆಲೆಗಳಲ್ಲಿ ನಡೆದಿದೆಯಂತೆ. ನಿರ್ದೇಶಕ ಶಕ್ತಿ ಅವರೊಂದಿಗೆ ಈ ಕಿರುಚಿತ್ರ ರೂಪಿಸಿದ್ದಾರೆ.

ಗೋವಿನ ರಕ್ಷಣೆಯ ಬಗ್ಗೆ ಮಾತನಾಡಿದ ಮಹೇಂದ್ರ, `ಸಿನಿಮಾ ಮನರಂಜನೆ ಮಾತ್ರವಲ್ಲ, ಜನರ ವ್ಯಕ್ತಿತ್ವ ವಿಕಸನಕ್ಕೂ ಈ ಮಾಧ್ಯಮವನ್ನು ಬಳಸಬಹುದು' ಎಂದರು. ಅವರ `ಅಂಬಾ' ವ್ಯಕ್ತಿತ್ವ ವಿಕಸನದ ಕೆಲಸ ಮಾಡುತ್ತದಂತೆ.

ನಿರ್ದೇಶಕ ಶಕ್ತಿ ಬೇರೊಂದು ಕತೆಯನ್ನು ಚರ್ಚಿಸಲು ನಿರ್ಮಾಪಕರ ಬಳಿ ಹೋಗಿದ್ದವರು, ಗೋವುಗಳನ್ನು ರಕ್ಷಿಸುವಂಥ ಕಿರುಚಿತ್ರ ನಿರ್ದೇಶಿಸುವ ಜವಾಬ್ದಾರಿ ಹೊತ್ತಿದ್ದಾರೆ. `ಇದು ನನಗೆ ಸವಾಲು ಎನಿಸಿತು. ಆ ಸವಾಲನ್ನು ಸ್ವೀಕರಿಸಿದೆ. ನನ್ನ ಪ್ರತೀ ಹೆಜ್ಜೆಯಲ್ಲೂ ಶ್ವೇತಾ ನೆರವಾದರು' ಎಂದರು.

ಹಿರಿಯ ಸಂಶೋಧಕ ಚಿದಾನಂದ ಮೂರ್ತಿ ಅವರು ಕಿರುಚಿತ್ರ ನೋಡಿ ಪುಳಕಿತರಾಗಿದ್ದರು. `ಗೋವು ನಾಶವಾದರೆ ಭಾರತದ ಸಂಸ್ಕೃತಿ ನಾಶವಾದಂತೆ' ಎಂದು ಹೇಳಿ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ಒತ್ತಾಯಿಸಿದರು. ಸಾಹಿತಿ ಸಾ.ಶಿ.ಮರುಳಯ್ಯ ಅವರೂ ಚಿಮೂ ಅವರ ಒತ್ತಾಯಕ್ಕೆ ದನಿ ಸೇರಿಸಿದರು. ಸಮಾರಂಭದಲ್ಲಿ ಕೊನೆಯಲ್ಲಿ ಹಾಜರಾದ ನಟ ರವಿಚಂದ್ರನ್ ಚಿತ್ರದ ಡಿವಿಡಿಗಳನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ಶಶಿಧರ ಕೋಟೆ ಸಂಗೀತ, ಪ್ರಮೋದ್ ಎಸ್.ಪಿ.ಆರ್. ಛಾಯಾಗ್ರಹಣ, ಎಸ್.ಆರ್.ಮೇಹು ಚಿತ್ರದ ತಂತ್ರಜ್ಞರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.