ADVERTISEMENT

ಅಣ್ಣಾ ಬಾಂಡು ವದಂತಿ ಹಿಂಡು

ಅಮಿತ್ ಎಂ.ಎಸ್.
Published 23 ಫೆಬ್ರುವರಿ 2012, 19:30 IST
Last Updated 23 ಫೆಬ್ರುವರಿ 2012, 19:30 IST

`ಮೈಹುರಿ ಮಾಡಿಕೊಂಡಿದ್ದು ನಿಜ. ಆದರೆ ಅದು ಎಲ್ಲರೂ ಹೇಳುವಂತೆ ಸಿಕ್ಸ್‌ಪ್ಯಾಕ್ ಅಲ್ಲ~.
`ಅಣ್ಣಾ ಬಾಂಡ್~ ಚಿತ್ರಕ್ಕಾಗಿ ದೇಹಕ್ಕೆ ಸಾಕಷ್ಟು ಕಸರತ್ತು ನೀಡಿರುವ ನಟ ಪುನೀತ್ ರಾಜ್‌ಕುಮಾರ್, ಚಿತ್ರಕ್ಕಾಗಿ ಸಿಕ್ಸ್‌ಪ್ಯಾಕ್ ಮಾಡಿಕೊಂಡ್ದ್ದಿದಾರೆ ಎನ್ನುವ ಬಗ್ಗೆ ಹೇಳುವ ಮಾತಿದು. ಸಿನಿಮಾಕ್ಕೆ ಅಗತ್ಯವಾದ ರೀತಿಯಲ್ಲಿ ದೇಹವನ್ನು ಹೊಂದಿಸಿಕೊಂಡಿದ್ದೇನೆ ಅಷ್ಟೇ ಎನ್ನುವುದು ಅವರ ಸ್ಪಷ್ಟನೆ.

ಬಹುನಿರೀಕ್ಷೆಯ `ಅಣ್ಣಾ ಬಾಂಡ್~ ಚಿತ್ರದ ಮಾತಿನ ಚಿತ್ರೀಕರಣ ಭಾಗ ಮುಕ್ತಾಯವಾಗಿದೆ. ಡಬ್ಬಿಂಗ್ ಕಾರ್ಯ ಸಾಗುತ್ತಿದೆ. ಹರಿಕೃಷ್ಣ ಸಂಗೀತದಲ್ಲಿ ನಾಲ್ಕು ಹಾಡುಗಳು ಈಗಾಗಲೇ ಸಿದ್ಧವಾಗಿವೆ.

ಎರಡು ಗೀತೆಗಳ ಚಿತ್ರೀಕರಣಕ್ಕಾಗಿ ಶೀಘ್ರವೇ ಚಿತ್ರತಂಡ ಸ್ಪೇನ್‌ನತ್ತ ಹಾರಲಿದೆ. ಅಂದುಕೊಂಡಂತೆ ನಡೆದರೆ ಏಪ್ರಿಲ್‌ನಲ್ಲಿ ಚಿತ್ರಮಂದಿರಗಳಿಗೆ `ಅಣ್ಣಾ ಬಾಂಡ್~ ಕಾಲಿಡಲಿದ್ದಾನೆ. ಆದರೆ ಸಿನಿಪ್ರಿಯರು ಕಾತರದಿಂದ ಕಾಯುತ್ತಿರುವ ಚಿತ್ರದ ಬಗ್ಗೆ ಪುನೀತ್ ಹೆಚ್ಚು ಮಾತನಾಡಲು ಇಷ್ಟಪಡುವುದಿಲ್ಲ.
 
`ಸಿನಿಮಾದಲ್ಲಿ ಒಬ್ಬ ನಟನಾಗಿ ಕೆಲಸ ಮಾಡಿದ್ದೇನೆ. ಅದರ ಬಗ್ಗೆ ಹೆಚ್ಚೇನೂ ನಿರೀಕ್ಷೆ ಇಟ್ಟುಕೊಳ್ಳಲು ಹೋಗುವುದಿಲ್ಲ. ಸಿನಿಮಾ ಬಗ್ಗೆ ಮಾತನಾಡುವುದೂ ಇಲ್ಲ. ಏಕೆಂದರೆ ನಾನು ಮಾತನಾಡಿದರೆ ಅದು ಆಡಂಬರವಾಗುತ್ತದೆ~ ಎನ್ನುತ್ತಾರೆ.

ನಾನು ನಟಿಸಿದ ಚಿತ್ರಗಳ ಬಗ್ಗೆ ಎಂದಿಗೂ ಏನನ್ನೂ ಹೇಳಿಕೊಳ್ಳುವುದಿಲ್ಲ. ಅದು ನನ್ನ ಅಭ್ಯಾಸ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಕಥೆಯೂ ಚೆನ್ನಾಗಿದೆ. ಜನ ಇಷ್ಟಪಡಬೇಕು. ಇಷ್ಟಪಡುತ್ತಾರೆ. ಅಷ್ಟರಮಟ್ಟಿಗೆ ನನಗೆ ವಿಶ್ವಾಸವಿದೆ ಎನ್ನುವ ಪುನೀತ್ ತಮ್ಮ ಎಲ್ಲಾ ಚಿತ್ರಗಳಂತೆ ಇದೂ ಒಂದು ಚಿತ್ರ. ಇದರಲ್ಲಿ ಹೊಸ ವಿಶೇಷ ವಿಷಯವೇನಿಲ್ಲ ಎಂದು ಮಾತು ತೇಲಿಸುತ್ತಾರೆ.

`ಸೂರಿ ಜೊತೆಗಿನ ಅನುಭವಗಳು ಸಾಕಷ್ಟು ಖುಷಿ ನೀಡುತ್ತವೆ. ಅವರಿಂದ ಕಲಿಯುತ್ತಿದ್ದೇನೆ~ ಎಂದು ಪುನೀತ್ ನಿರ್ದೇಶಕ ಸೂರಿ ಕುರಿತು ಪ್ರಶಂಸೆಯ ಮಾತುಗಳನ್ನಾಡುತ್ತಾರೆ. ಬಾಲಿವುಡ್ ನಟ ಜಾಕಿಶ್ರಾಫ್ ಅವರೊಂದಿಗಿನ ಒಡನಾಟ ಪುನೀತ್‌ಗೆ ತುಂಬಾ ಖುಷಿಕೊಟ್ಟಿದೆಯಂತೆ.

`ಅಣ್ಣಾ ಬಾಂಡ್~ ಬಳಿಕ ಎರಡು ಚಿತ್ರಗಳು ಪುನೀತ್ ಕೈಯಲ್ಲಿವೆ. ಸ್ವಂತ ಪ್ರೊಡಕ್ಷನ್‌ನಲ್ಲಿ ನಿರ್ಮಾಣವಾಗಲಿರುವ ಚಿತ್ರದ ಬಗ್ಗೆ ರೂಪುರೇಷೆಗಳು ಸಿದ್ಧವಾಗುತ್ತಿವೆ. (ತಮಿಳಿನ `ಪೊರಲಿ~ಯನ್ನು ಕನ್ನಡಕ್ಕೆ ತರಲಾಗುತ್ತಿದೆ ಎಂಬ ಮಾತುಗಳೂ ಕೇಳಿಬಂದಿವೆ). ಆರ್.ಎಸ್.ಪ್ರೊಡಕ್ಷನ್‌ನ ಇನ್ನೊಂದು ಚಿತ್ರದಲ್ಲೂ ಪುನೀತ್ ನಟಿಸಲಿದ್ದಾರೆ. ಇವೆರಡೂ ಮನರಂಜನೆ ಮತ್ತು ಆ್ಯಕ್ಷನ್ ಕಥೆಯುಳ್ಳ ಚಿತ್ರಗಳು ಎಂದಷ್ಟೇ ಪುನೀತ್ ಹೇಳುತ್ತಾರೆ.
 

`ನಾಲ್ಕು ಗೋಡೆಯ ಮಧ್ಯೆ~

`10 ರೂಪಾಯಿ ಹಾಕಿ ಚಿತ್ರ ಮಾಡಲಿ, 10 ಕೋಟಿ ಹಾಕಿ ಮಾಡಲಿ. ಚಿತ್ರ ಚೆನ್ನಾಗಿದ್ದರೆ ಮಾತ್ರ ಜನ ನೋಡುತ್ತಾರೆ. ಗೆಲ್ಲಿಸುತ್ತಾರೆ. ಚಿತ್ರದ ಉಳಿದ ಬಿಜಿನೆಸ್‌ಗಳ ಬಗ್ಗೆ ಜನರಿಗೆ ಆಸಕ್ತಿ ಇರುವುದಿಲ್ಲ. ಚಿತ್ರ ಗೆದ್ದ ಬಳಿಕವಷ್ಟೇ ಅದರ ಕುರಿತು ಮಾತನಾಡಬಹುದು. ಇದೇನಿದ್ದರೂ ನಾಲ್ಕು ಗೋಡೆಗಳ ನಡುವಿನ ವಿಷಯ~- `ಅಣ್ಣಾ ಬಾಂಡ್~ ಚಿತ್ರದ ಹಕ್ಕುಗಳು ಈಗಾಗಲೇ ಕೋಟಿಗಟ್ಟಲೆ ಲಾಭ ತಂದುಕೊಟ್ಟಿವೆ ಎಂಬ ಸುದ್ದಿಯ ಬಗ್ಗೆ ನಿರ್ಮಾಪಕ ರಾಘವೇಂದ್ರ ರಾಜ್‌ಕುಮಾರ್ ನೀಡಿದ ಪ್ರತಿಕ್ರಿಯೆಯಿದು.

`ಅಣ್ಣಾ ಬಾಂಡ್~ ಬಗ್ಗೆ ವೈಯಕ್ತಿಕವಾಗಿ ಅಪಾರ ನಿರೀಕ್ಷೆಯಿದೆ. ಭಯವೂ ಇದೆ. ಚಿತ್ರ ಚೆನ್ನಾಗಿ ಮೂಡಿಬಂದಿದೆ. ಆದರೆ ಪ್ರೇಕ್ಷಕ ಅದನ್ನು ಒಪ್ಪಿಕೊಂಡರೆ ಮಾತ್ರ ಗೆಲುವು ಸಾಧ್ಯ ಎನ್ನುತ್ತಾರೆ ಅವರು. ಇದುವರೆಗೆ ಸುಮಾರು 20-30 ಸಾವಿರ ಚಿತ್ರಗಳು ಬಂದಿರಬಹುದು.

ಹೀಗಿರುವಾಗ ಈಗಿನ ಚಿತ್ರಗಳಲ್ಲಿ ಹೊಸತನ್ನು ನಿರೀಕ್ಷಿಸುವುದು ಕಷ್ಟ. ಏನನ್ನು ಕೊಡುತ್ತೇನೋ ಅದು ಚೆನ್ನಾಗಿರಬೇಕು. ಜನರಿಗೆ ಇಷ್ಟವಾಗಬೇಕು. ಅಷ್ಟೇ. ಈ ಚಿತ್ರಕ್ಕೆ ಹಿಂದಿನ ಚಿತ್ರಗಳಿಗಿಂತ ಹೆಚ್ಚು ಖರ್ಚಾಗಿರುವುದಂತೂ ಸತ್ಯ.

ನಿರ್ದೇಶಕ ಸೂರಿ ಹಾಟ್ ಕೇಕ್ ತರಹ. ಕೆಲಸದಲ್ಲಿ ಅತ್ಯಂತ ಶ್ರದ್ಧೆ. ಕಠಿಣ ಪರಿಶ್ರಮದಿಂದ ತೊಡಗಿಕೊಳ್ಳುತ್ತಾರೆ. ಸೂರಿ ಮತ್ತು ಯೋಗರಾಜ್ ಭಟ್‌ರಂತಹ ನಿರ್ದೇಶಕರಿಂದ ಒಂದ್ಲ್ಲಲಾ ಹತ್ತು ಚಿತ್ರಗಳು ಬಂದರೂ ನಿರ್ಮಿಸಲು ಸಿದ್ಧ ಎಂದು ಉತ್ಸಾಹದಿಂದ ಹೇಳುತ್ತಾರೆ ಅವರು.

`ಜಾಕಿ~ ಬಳಿಕ ಒಂದೂವರೆ ವರ್ಷದಿಂದ ಸೂರಿ ಬೇರೆ ಚಿತ್ರ ಮಾಡಿಲ್ಲ. ಚಿತ್ರರಂಗವನ್ನೇ ಸಂಪಾದನೆಗಾಗಿ ನಂಬಿದ ವ್ಯಕ್ತಿಯೊಬ್ಬ ತನ್ನ ಮತ್ತೊಂದು ಚಿತ್ರಕ್ಕಾಗಿ ಇಷ್ಟು ಬದ್ಧತೆ ಕಾಯ್ದುಕೊಳ್ಳುವುದು ಆಶ್ಚರ್ಯವೇ ಸರಿ. ಇಂತಹ ನಿರ್ದೇಶಕರನ್ನು ಪಡೆಯಲು ನಾವು ಅದೃಷ್ಟ ಮಾಡಿದ್ದೆವು ಎನ್ನುತ್ತಾರೆ.

ADVERTISEMENT


ಪುನೀತ್ ಹೊಸ ಚಿತ್ರಗಳ ಬಗ್ಗೆ ರಾಘವೇಂದ್ರ ರಾಜ್‌ಕುಮಾರ್ ಹೇಳುವುದಿಷ್ಟು. ಹೊಸ ಚಿತ್ರಗಳ ಮಾತುಕತೆಯಿನ್ನೂ ನಡೆಯುತ್ತಿದೆ. ಯಾವುದೂ ಅಂತಿಮವಾಗಿಲ್ಲ. ಈಗಲೇ ಚಿತ್ರದ ಬಗ್ಗೆ ಮಾತನಾಡಿ ಜನರ ಗಮನವನ್ನು ಬೇರೆಡೆಗೆ ಸೆಳೆಯುವುದು ಇಷ್ಟವಿಲ್ಲ. `ಅಣ್ಣಾ ಬಾಂಡ್~ ಚಿತ್ರಮಂದಿರಕ್ಕೆ ಬಂದ ಬಳಿಕವಷ್ಟೇ ಮುಂದಿನ ಚಿತ್ರದ ಬಗ್ಗೆ ಮಾತು. ಇದು ಎಲ್ಲಾ ಚಿತ್ರಗಳಲ್ಲೂ ಪಾಲಿಸಿಕೊಂಡು ಬಂದ ನೀತಿ.

200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಅಣ್ಣಾ ಬಾಂಡ್ ತೆರೆಕಾಣುತ್ತದೆ ಎಂಬ ಊಹಾಪೋಹಗಳನ್ನೂ ಅವರು ಅಲ್ಲಗೆಳೆಯುತ್ತಾರೆ. `ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿ ಒಂದೇ ವಾರದಲ್ಲಿ ಭರ್ಜರಿ ಲಾಭ ಗಳಿಸುವ ಉದ್ದೇಶ ನಮ್ಮದಲ್ಲ.

ಹಾಗೆಂದು ತೀರಾ ಕಡಿಮೆ ಚಿತ್ರಮಂದಿರಗಳಲ್ಲಿಯೂ ಬಿಡುಗಡೆ ಮಾಡಲು ಹೋಗುವುದಿಲ್ಲ. 150-160 ಚಿತ್ರಮಂದಿರಗಳಲ್ಲಿ ಚಿತ್ರ ತೆರೆಕಾಣಲಿದೆ. ಹಂಚಿಕೆದಾರರನ್ನೂ ನಾವು ಗಮನದಲ್ಲಿಟ್ಟುಕೊಳ್ಳಲೇಬೇಕು. ಹೆಚ್ಚು ಕಾಲವೂ ಚಿತ್ರ ಓಡಬೇಕು~ ಎನ್ನುವುದು ರಾಘವೇಂದ್ರ ರಾಜಕುಮಾರರ ಸಿನಿಮಾ ನೀತಿ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.