ADVERTISEMENT

ಆಗ ಮಳೆ; ಈಗ ರಂಗೀಲಾ...

ಲಕ್ಷ್ಮಣ ಟಿ.ನಾಯ್ಕ
Published 19 ಸೆಪ್ಟೆಂಬರ್ 2013, 19:59 IST
Last Updated 19 ಸೆಪ್ಟೆಂಬರ್ 2013, 19:59 IST

ಮಳೆ ಹುಡುಗರಿಬ್ಬರು ಈಗ ಹೃದಯಕ್ಕೆ ಹತ್ತಿರವಾಗುತ್ತಿದ್ದಾರೆ. ಪ್ರೀತಂ ಗುಬ್ಬಿ ಮುಂಗಾರಿನಲ್ಲಿ ಸುರಿದ ಮಳೆಗೆ ಕಥೆ ಬರೆದಿದ್ದರೆ, ಗಣೇಶ್ ಆ ಮಳೆಯಲ್ಲಿ ತೊಯ್ದವರು. ಯುವ ಮನಸ್ಸುಗಳ ತಲ್ಲಣ, ಆಸೆ ಹಾಗೂ ಕನಸುಗಳನ್ನೇ ಪ್ರಧಾನವಾಗಿಟ್ಟುಕೊಂಡ ಹೆಣೆದಿರುವ ‘ದಿಲ್ ರಂಗೀಲಾ’ ಚಿತ್ರ ಇವರಿಬ್ಬನ್ನು ಮತ್ತೆ ಬೆಸೆದಿದೆ. ಅವರಿಗೆ ಸಾಥ್ ನೀಡಿರುವುದು ನಿರ್ಮಾಪಕ ಕೆ. ಮಂಜು.

ಪ್ರೀತಂ ಜತೆ ‘ಮುಂಗಾರು ಮಳೆ’ ನಂತರ ಅವರದೇ ನಿರ್ಮಾಣದ ‘ಮಳೆಯಲಿ ಜೊತೆಯಲಿ' ಚಿತ್ರದಲ್ಲಿ ಕೆಲಸ ಮಾಡಿದ್ದ ಗಣೇಶ್ ಸಾಕಷ್ಟು ದಿನಗಳ ನಂತರ ಆಪ್ತನೊಂದಿಗೆ ಕೆಲಸ ಮಾಡುತ್ತಿರುವ ಭಾವ ಅನುಭವಿಸುತ್ತಿರುವುದು ಎದ್ದು ಕಾಣುತ್ತಿತ್ತು. ಯುವಕರನ್ನೇ ಪ್ರಧಾನವಾಗಿಟ್ಟುಕೊಂಡು ಬಂದಿರುವ ಚಿತ್ರಗಳಲ್ಲಿ ಇದಕ್ಕೆ ಪ್ರತ್ಯೇಕ ಸ್ಥಾನ ಸಿಗಲಿದೆ ಎಂಬುದು ಅವರ ಮೊದಲ್ನುಡಿ.

‘ಈವರೆಗೆ ನಾನು ಸಾಕಷ್ಟು ತ್ಯಾಗಮಯಿ ಪಾತ್ರಗಳಲ್ಲಿ ಅಭಿನಯಿಸಿದ್ದೇನೆ. ಈ ಚಿತ್ರದಲ್ಲಿ ನಾನು ತ್ಯಾಗರಾಜನಲ್ಲ. ತ್ಯಾಗವೇ ನನ್ನನ್ನು ಇಲ್ಲಿಯವರೆಗೆ ಕೈಹಿಡಿದಿತ್ತು. ಬದಲಾವಣೆ ನನಗೂ ಬೇಕಾಗಿದೆ. ಅದಕ್ಕಾಗಿ ಈಗ ಅಂತಹ ಪಾತ್ರ ಒಪ್ಪಿಕೊಳ್ಳುತ್ತಿಲ್ಲ’ ಎಂದು ಗಣೇಶ್‌ ಹೇಳಿದರು. ಅವರ ಮಾತುಗಳಲ್ಲಿ ರಂಗೀಲಾದ ರಂಗುಗಳ ಪುಳಕವಿತ್ತು.

‘ದಿಲ್ ರಂಗೀಲಾ’ ಚಿತ್ರದ ಸುದ್ದಿಗೋಷ್ಠಿ ನಡೆದುದು ಮೈಸೂರಿನಲ್ಲಿ. ಈ ಅರಮನೆ ನಗರಿಯಲ್ಲಿ ಒಂದು ಸ್ಟುಡಿಯೊ ನಿರ್ಮಿಸುವ ಆಸೆಯಿದೆ ಎಂದು ನಿರ್ಮಾಪಕ ಮಂಜು ತಮ್ಮ ಕನಸು ಹಂಚಿಕೊಂಡರು. ‘ಇದು ನನ್ನ ಸಂಸ್ಥೆಯ 37ನೇ ಚಿತ್ರ. ಇದಕ್ಕೊಂದು ವಿಶೇಷತೆ ಇದೆ. ಮಳೆ ಹುಡುಗರಿಬ್ಬರನ್ನು ಮತ್ತೆ ಸೇರಿಸಿದ ಸಂತಸ ಇದೆ’ ಎಂಬುದು ಅವರ ಮಾತು.

ಚಿತ್ರದಲ್ಲಿ ಇಬ್ಬರು ನಾಯಕಿಯರು. ಮೈಸೂರಿನ ಎಸ್‌ಡಿಎಂ ಕಾಲೇಜಿನಲ್ಲಿ ಈಗಷ್ಟೇ ಶಿಕ್ಷಣ ಮುಗಿಸಿರುವ ಪ್ರಿಯಾಂಕಾರಾವ್ ಹಾಗೂ ‘ಬುಲ್ ಬುಲ್’ ಖ್ಯಾತಿಯ ರಚಿತಾರಾಮ್ ಗಣೇಶನಿಗೆ ಜತೆಯಾಗಿದ್ದಾರೆ.

‘ಅಭಿನಯ ನಮ್ಮ ಕೆಲಸ’ ಎಂದೇ ಮಾತು ಆರಂಭಿಸಿದ ರಚಿತಾರಾಮ್– ‘ಕತೆ ಇಷ್ಟವಾಯ್ತು. ಯುವ ಮನಸ್ಸುಗಳಿಗೆ ಇಷ್ಟವಾಗುವ ಎಳೆ ಇಲ್ಲಿದೆ. ಚಿತ್ರ ಚೆನ್ನಾಗಿ ಮೂಡಿ ಬರುತ್ತಿದೆ. ಇದೊಂದು ಹೊಸ ನಮೂನೆಯ ಕತೆ. ಪ್ರೀತಂ ಗುಬ್ಬಿ ಅವರ ಶ್ರಮ ಇಲ್ಲಿ ಸಾಕಷ್ಟು ಕೆಲಸ ಮಾಡಿದೆ’ ಎಂದು ಹೇಳಿದರು.

ಮೊದಲ ಬಾರಿಗೆ ಸಿನಿಮಾದಲ್ಲಿ ತೊಡಗಿಸಿಕೊಳ್ಳುತ್ತಿರುವ ಮೈಸೂರಿನ ಪ್ರಿಯಾಂಕಾರಾವ್, ಕಾಲೇಜು ದಿನಗಳಿಂದಲೂ ಅಭಿನಯಿಸುವ ಆಸಕ್ತಿ ಇತ್ತು. ಅದೀಗ ಕೈಗೂಡಿದೆ. ಮೊದಲ ಬಾರಿಗೆ ಗೋಲ್ಡನ್ ಸ್ಟಾರ್ ಜತೆ ಅವಕಾಶ ಸಿಕ್ಕಿದ್ದು ನನ್ನ ಸಂತಸ ಇಮ್ಮಡಿಗೊಳಿಸಿದೆ ಎಂದು ಸಂತಸಪಟ್ಟರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.