ADVERTISEMENT

ಆ ಬೆಟ್ಟದಲ್ಲಿ, ಪ್ರೀತಿಯಲ್ಲಿ...

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 19:30 IST
Last Updated 9 ಫೆಬ್ರುವರಿ 2012, 19:30 IST

ಊರಾಚೆ ಒಂದು ಬೆಟ್ಟ. ಅಲ್ಲೊಂದು ಮಂಟಪ. ಅಲ್ಲಿ ಕುಳಿತುಕೊಳ್ಳುವ ಪ್ರೇಮಿಗಳು ಒಂದಲ್ಲಾ ಒಂದು ರೀತಿ ಬೇರೆಯಾಗುತ್ತಿರುತ್ತಾರೆ. ಅದಕ್ಕೆ ಆ ಬೆಟ್ಟಕ್ಕೆ ಶಾಪಗ್ರಸ್ತ ಬೆಟ್ಟ ಎಂಬ ಹೆಸರು. ಅದಕ್ಕಿರುವ ಶಾಪವನ್ನು ವಿಮೋಚನೆ ಮಾಡುವ ಪ್ರೇಮಿಗಳೇ `ಪ್ರೀತಿಯಿಂದ~ ಚಿತ್ರದ ನಾಯಕ-ನಾಯಕಿ. ಈ ಕತೆಯನ್ನು ನಿರ್ದೇಶಕರು ಎಂದೋ ಎಲ್ಲೋ ಓದಿದ್ದರಂತೆ. ಅದನ್ನೀಗ ಸಿನಿಮಾ ಮಾಡಲು ಹೊರಟಿದ್ದಾರೆ.

ನಿರ್ದೇಶಕ ರಾಜು ಹಲಗೂರು ಈ ಮೊದಲು ಕಿರುತೆರೆಯಲ್ಲಿ ಕೆಲಸ ಮಾಡಿದವರು. ತಮ್ಮ ಬಳಿ ಇರುವ ಹಲವಾರು ಕತೆಗಳನ್ನು ಸಿನಿಮಾ ಮಾಡಬೇಕೆಂದು ಮನಸ್ಸು ಮಾಡಿದ ಅವರಿಗೆ ಎಲ್ಲೋ ಓದಿದ ಎಳೆಯೊಂದು ಕತೆಯಾಗಿ ಹೊಳೆದಿದೆ.

`ಕತೆ ಬಗ್ಗೆ ನನಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಗಂಟೆಗಂಟೆಗೂ ಬದಲಾಗುವ ತಮ್ಮ ಮನಸ್ಸಿನಂತೆ ಕತೆಯೂ ಕೂಡ ಬದಲಾಗುವ ಸಾಧ್ಯತೆ ಇದೆ~ ಎಂದ ಅವರಿಗೆ, ತಮ್ಮ ಈ ಸಿನಿಮಾ ಪ್ರೀತಿಯ ವ್ಯಾಖ್ಯೆಯನ್ನು ತನ್ನದೇ ಆದ ರೀತಿಯಲ್ಲಿ ಕೊಡಲಿದೆ ಎನ್ನುವ ಆತ್ಮವಿಶ್ವಾಸವಂತೂ ಇದೆ.

`ಸಂಬಂಧದಿಂದ ಹುಟ್ಟುವ ಅಮ್ಮ-ಮಗನ ಪ್ರೀತಿ, ಅಪರಿಚಿತ ಹುಡುಗಿ-ಹುಡುಗನ ನಡುವೆ ಹುಟ್ಟುವ ಪ್ರೀತಿ, ಮಾನಸಿಕ ಅಸ್ವಸ್ಥಳೂ ಅಲ್ಲದ ಮಾನಸಿಕ ಸ್ಥಿಮಿತತೆಯೂ ಇಲ್ಲದ ಒಂದು ಹೆಂಗಸಿನ ಪ್ರೀತಿ.. ಹೀಗೆ ಪ್ರೀತಿಯ ವಿವಿಧ ಆಯಾಮಗಳು ಚಿತ್ರದಲ್ಲಿ ಇರಲಿವೆ~ ಎನ್ನುವುದು ನಿರ್ದೇಶಕರ ಅನಿಸಿಕೆ. ಅಂದಹಾಗೆ, ಮಂಡ್ಯ ಜಿಲ್ಲೆಯವರಾದ ತಮಗೆ ಕನ್ನಡ ಸರಿಯಾಗಿ ಮಾತನಾಡಲು ಬರುವುದಿಲ್ಲ ಎನ್ನುವ ಕೊರಗು ಅವರಿಗಿದೆ.

ಕನ್ನಡ ಚೆನ್ನಾಗಿ ಮಾತನಾಡಬಲ್ಲ ಲಕ್ಷ್ಮಿ ಚಂದ್ರಶೇಖರ್ ಬಗ್ಗೆ ನಿರ್ದೇಶಕರು ಪ್ರೀತಿಯಿಂದ ಮಾತನಾಡಿದರು. ಆ ಪ್ರೀತಿಯಲ್ಲಿ ಪುಳಕಿತರಾಗಿದ್ದ ಲಕ್ಷ್ಮೀ ಚಂದ್ರಶೇಖರ್, `ಸಾಧ್ವೀಮಣಿಯ ಪಾತ್ರಗಳನ್ನು ಮಾಡಿ ನನಗೆ ಬೇಸರವಾಗಿದೆ. ಆ ಕಾರಣದಿಂದಲೇ ಗಿರೀಶ ಕಾಸರವಳ್ಳಿ ಅವರು `ಗೃಹಭಂಗ~ದಲ್ಲಿ ನಟಿಸಲು ಕರೆದಾಗ ಹೋಗಿ ಮಾಡಿದೆ. ಈ ಸಿನಿಮಾದಲ್ಲಿಯೂ ತಮ್ಮ ಈ ಮೊದಲಿನ ಇಮೇಜ್ ಮೀರುವ ಪಾತ್ರ ಸಿಕ್ಕಿದೆ~ ಎಂದರು.

ನಾಯಕ ರಾಕೇಶ್‌ಗೆ ಸಿನಿಮಾದ ಕತೆ ಇಷ್ಟವಾಗಿದೆ. ಕತೆಯಲ್ಲಿ ತಾಯಿ-ಮಗನ ಸೆಂಟಿಮೆಂಟನ್ನು ಮೇಳೈಸಿರುವುದು ಮತ್ತಷ್ಟು ಇಷ್ಟವಾಗಿದೆ. `ಇದು ಮಾಮೂಲಿ ಕಾಲೇಜು ಲವ್ ಸ್ಟೋರಿಗಿಂತ ವಿಭಿನ್ನವಾಗಿದೆ. ಕತೆಯನ್ನು ಊಹಿಸಲು ಯಾರಿಗೂ ಸಾಧ್ಯವೇ ಇಲ್ಲ.

ಕೆಲವೊಮ್ಮೆ ನನ್ನದು ಪ್ರಬುದ್ಧ ಪಾತ್ರ ಎನಿಸುತ್ತದೆ. ಕೆಲವೊಮ್ಮೆ ಅಪ್ರಬುದ್ಧ ಎನಿಸುತ್ತದೆ. ಒಟ್ಟಾರೆ ಕತೆ ವಿಶಿಷ್ಟವಾಗಿದೆ~ ಎನ್ನುತ್ತಾರೆ ಅವರು.

ನಾಯಕಿ ಸೋನಿಯಾ ಗೌಡ ಅವರಿಗೆ ಚಿತ್ರದಲ್ಲಿ ವಿವಾಹಿತ ಹುಡುಗಿಯ ಪಾತ್ರ. `ನಿರ್ದೇಶಕರ ನಗು ಮುಖ ನೋಡುತ್ತಾ ಕತೆ ಕೇಳುವುದನ್ನೇ ಮರೆತುಬಿಟ್ಟೆ.

 ನಂತರ ಮತ್ತೊಮ್ಮೆ ಕತೆ ಕೇಳಿ ಒಪ್ಪಿಕೊಂಡೆ~ ಎಂದ ಅವರಿಗೆ, `ರಣ~ ಚಿತ್ರದ ನಂತರ ಪೂರ್ಣಪ್ರಮಾಣದ ನಾಯಕಿಯ ಪಾತ್ರ ಈ ಚಿತ್ರದಲ್ಲಿ ಸಿಕ್ಕಿದೆ. `ಇದೊಂದು ಸವಾಲಿನ ಪಾತ್ರ. ಶೇ 50ರಷ್ಟು ಪ್ರೀತಿ ಮಾಡ್ತೀನಿ. ಇನ್ನರ್ಧ ತ್ಯಾಗ ಮಾಡ್ತೀನಿ~ ಎಂದು ಸೋನಿಯಾ ತಮ್ಮ ಪಾತ್ರವನ್ನು ವಿವರಿಸಿದರು.

ನಿರ್ಮಾಪಕರಲ್ಲಿ ಒಬ್ಬರಾದ ಅರುಣ್‌ಕುಮಾರ್ ವೃತ್ತಿಯಲ್ಲಿ ಎಂಜಿನಿಯರ್. ರಾಜು ಅವರ ಕತೆ ಇಷ್ಟವಾದ ಕಾರಣ ತಮ್ಮ ಗೆಳೆಯರೊಂದಿಗೆ ಸೇರಿ ಚಿತ್ರ ನಿರ್ಮಿಸುವ ಮನಸ್ಸು ಮಾಡಿದ್ದಾರೆ. ಬೆಂಗಳೂರು, ಮುತ್ತತ್ತಿ. ಮಹದೇಶ್ವರ ಬೆಟ್ಟ, ಸಕಲೇಶಪುರದಲ್ಲಿ ಚಿತ್ರೀಕರಣ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.