ADVERTISEMENT

ಇದು ರೇಖಾರಾವ್ ಇತಿಹಾಸ...

​ಪ್ರಜಾವಾಣಿ ವಾರ್ತೆ
Published 6 ಜನವರಿ 2011, 13:40 IST
Last Updated 6 ಜನವರಿ 2011, 13:40 IST
ಇದು ರೇಖಾರಾವ್ ಇತಿಹಾಸ...
ಇದು ರೇಖಾರಾವ್ ಇತಿಹಾಸ...   

‘ಹಾಡು ಹಳೆಯದಾದರೇನು
ಭಾವ ನವನವೀನ’
‘ಮಾನಸ ಸರೋವರ’ ಚಿತ್ರದ ಈ ಹಾಡಿನಲ್ಲಿ ನಟಿಸಿದ್ದ ನಟಿ ಇವರು. ಇವರ ಹೆಸರು ರೇಖಾರಾವ್. ಅಂದಿನ ಗ್ಲಾಮರಸ್ ನಟಿ ಎನಿಸಿಕೊಂಡಿದ್ದ ರೇಖಾ 18 ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೇಖಾರಾವ್ ನಟನೆಯ ಮೊದಲ ಚಿತ್ರ ‘ಹಂಸಗೀತೆ’. ‘ಅತ್ತೆಗೆ ತಕ್ಕ ಸೊಸೆ’, ‘ಕಪ್ಪುಕೊಳ’, ‘ಜಾರಿಬಿದ್ದ ಜಾಣ’, ‘ಮಾನಸ ಸರೋವರ’, ‘ಧರಣಿ ಮಂಡಲ ಮಧ್ಯದೊಳಗೆ’, ‘ಮದರ್’  ಹಾಗೂ ಜಿ.ವಿ.ಅಯ್ಯರ್ ಅವರ ‘ಕುದುರೆ ಮೊಟ್ಟೆ’, ‘ಪ್ರೇಮಕಾಮ’, ‘ಇತಿಹಾಸ’, ‘ಮಧ್ವಾಚಾರ್ಯ’ ಮುಂತಾದ ಚಿತ್ರಗಳಿಗೆ ಬಣ್ಣಹಚ್ಚಿರುವ ಅವರದು ಶಿವಮೊಗ್ಗ ಮೂಲ.

ಮುಂಬೈನಲ್ಲಿ ಓದಿ ಬೆಳೆದರೂ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುವ ಅವರು ಚಿಕ್ಕಂದಿನಿಂದ ಮುಂಬೈನ ಕನ್ನಡ ಹವ್ಯಾಸಿ ರಂಗಭೂಮಿಯ ನಂಟು ಹೊಂದಿದ್ದವರು. 35 ಮರಾಠಿ ಸಿನಿಮಾ, 10 ಒರಿಯಾ ಭಾಷೆಯ ಸಿನಿಮಾಗಳಲ್ಲಿ ನಟಿಸಿರುವ ಅವರು ಬಾಲಿವುಡ್‌ನಲ್ಲಿಯೂ ಅವಕಾಶ ಪಡೆದವರು. ‘ಹಮ್ ದಿಲ್ ದೇ ಚುಕೇ ಸನಮ್’ನಲ್ಲಿ ಐಶ್ವರ್ಯಾ ರೈ ಸೋದರತ್ತೆ ಪಾತ್ರದಲ್ಲಿ ನಟಿಸಿದ ನಂತರ ಸಾಲು ಸಾಲು ಪೋಷಕ ಪಾತ್ರಗಳಲ್ಲಿ ಮಿಂಚಿದರು. ನಂತರ ಹಿಂದಿ ಕಿರುತೆರೆ ಧಾರಾವಾಹಿಗಳಲ್ಲೂ ಮುಖ್ಯಪಾತ್ರಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡರು.

‘ನಿವೃತ್ತಿ ಬದುಕನ್ನು ಕರ್ನಾಟಕದಲ್ಲಿಯೇ ಕಳೆಯಬೇಕೆಂಬ ಆಸೆಯಿಂದ ಇಲ್ಲಿಗೆ ಬಂದಿದ್ದೇನೆ’ ಎನ್ನುವ ಅವರು ಪ್ರಸ್ತುತ ‘ಶುಭಮಂಗಳ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ‘ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮನಸ್ಥಿತಿ ನನ್ನದು. ಇಂದು ಉದ್ಯಮದಲ್ಲಿ ತಂತ್ರಜ್ಞಾನ ಬೆಳೆದಿದೆ ಎಂಬುದನ್ನು ಬಿಟ್ಟರೆ ಯಾವುದೇ ಬದಲಾವಣೆ ಕಾಣಿಸುತ್ತಿಲ್ಲ’ ಎನ್ನುವುದು ರೇಖಾರಾವ್ ಅನಿಸಿಕೆ.

ನಿರ್ದೇಶಕ ಪುಟ್ಟಣ ಕಣಗಾಲ್ ಅವರೊಂದಿಗೆ ಕೆಲಸ ಮಾಡಿದ ದಿನಗಳನ್ನು ಸ್ಮರಿಸುವ ಅವರು, ಪುಟ್ಟಣ್ಣ ನೀಡುತ್ತಿದ್ದ ಪ್ರೋತ್ಸಾಹ ಮತ್ತು ನಟನೆ ತಿದ್ದುತ್ತಿದ್ದ ರೀತಿಯನ್ನು ಮರೆತಿಲ್ಲ. ‘ನಾನು ಬಹುಭಾಷೆಯಲ್ಲಿ ನಟಿಸುತ್ತಿದ್ದರೂ ಮನೆಯಲ್ಲಿ ಕನ್ನಡದಲ್ಲಿಯೇ ಮಾತನಾಡುತ್ತಿದ್ದ ಕಾರಣ ನನ್ನ ಕನ್ನಡ ಚೆನ್ನಾಗಿದೆ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ರೇಖಾ ಒಳ್ಳೆಯ ಪಾತ್ರಗಳ ನಿರೀಕ್ಷೆಯಲ್ಲಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.