ADVERTISEMENT

ಎರಡನೇ ಇನಿಂಗ್ಸ್‌ನಲ್ಲೂ ಅದೇ ಗತ್ತು

​ಪ್ರಜಾವಾಣಿ ವಾರ್ತೆ
Published 9 ಜೂನ್ 2012, 19:30 IST
Last Updated 9 ಜೂನ್ 2012, 19:30 IST

`ಪಿಕ್ಚರ್ ಅಭಿ ಬಾಕಿ ಹೈ~ (ಸಿನಿಮಾ ಇನ್ನೂ ಬಾಕಿ ಇದೆ)- ಎಡ ಹುಬ್ಬನ್ನು ತುಸು ಮೇಲೇರಿಸಿ ಮುಖದಲ್ಲಿ ಗಂಡು ಕಳೆ ತುಂಬಿಕೊಂಡು, ಲಯತಪ್ಪಿದಂತಾಗಿದ್ದ ಸೊಕ್ಕನ್ನು ಬಲವಂತವಾಗಿ ಆವಾಹಿಸಿಕೊಂಡು ಹೇಳಿದ್ದರು ವಿವೇಕ್ ಒಬೆರಾಯ್. ಅವರ ಈ ಗತ್ತಿನ ಮಾತನ್ನು ಕೇಳಲು ಸಿನಿಮಾದ ಇಂಗ್ಲಿಷ್ ನಿಯತಕಾಲಿಕೆಯ ಸುದ್ದಿಮಿತ್ರ ಭರ್ತಿ ಮೂರು ತಾಸು ಕಾದಿದ್ದರು.

ಆ ಒಂದು ಮಾತು ಹೇಳಿ, `ಸಂದರ್ಶನ ಮುಗಿಯಿತು~ ಎಂದು ವ್ಯಂಗ್ಯವಾಗಿ ನಕ್ಕಿದ್ದ ವಿವೇಕ್ ಕೆಲವೇ ಗಂಟೆಗಳಲ್ಲಿ ಮತ್ತೆ ಅದೇ ಸುದ್ದಿಮಿತ್ರರನ್ನು ಕಾರು ಕಳುಹಿಸಿ ತಾವಿದ್ದಲ್ಲಿಗೇ ಕರೆಸಿಕೊಂಡರು.
 
`ಪಿಕ್ಚರ್ ಅಭಿ ಬಾಕಿ ಹೈ~ ಎಂಬ ತಮ್ಮ ಮಾತಿನಿಂದ ಅವರು ಫ್ಲ್ಯಾಷ್‌ಬ್ಯಾಕ್‌ಗೆ ಜಿಗಿದರು. ಅದಕ್ಕೂ ಮೊದಲು ಶಾಸ್ತ್ರಕ್ಕೆಂಬಂತೆ ಆಗಲೆ ಮಾತು ಮುಗಿಯಿತು ಎಂದು ಹೇಳಿದ್ದಕ್ಕೆ ಕ್ಷಮಾಪಣೆಯನ್ನೂ ಕೋರಿದರು.

ವಿವೇಕ್ ಬಾಲ್ಯ ಹಸನಾಗಿತ್ತು. ನಟರಾಗಿದ್ದ ಅಪ್ಪ ಸುರೇಶ್ ಒಬೆರಾಯ್ ಶುಕ್ರವಾರ ಸಂಜೆಯ ನಂತರ ಮಕ್ಕಳಿಗಾಗಿ ಎರಡು ದಿನ ಬಿಡುವು ಮಾಡಿಕೊಳ್ಳುತ್ತಿದ್ದರು. ವಿವೇಕ್ ಹಾಗೂ ಅವರ ಸಹೋದರಿ ಮೇಘನಾ ಆಗಿನ್ನೂ ಶಾಲೆಯಲ್ಲಿ ಓದುತ್ತಿದ್ದ ಕಾಲ.

ಶುಕ್ರವಾರ ಸಂಜೆ ಅಪ್ಪನ ನೀಲಿ ಮರ್ಸಿಡೀಸ್ ಬೆಂಜ್ ಕಾರು ಬರುವುದನ್ನೇ ಅವರು ಕಾಯುತ್ತಿದ್ದರು. ಫಳಫಳ ಹೊಳೆಯುತ್ತಿದ್ದ ಕಾರಿನಿಂದ ವೋಲ್ಟುಗಟ್ಟಲೆ ನಗು ತುಂಬಿಕೊಂಡ ಅಪ್ಪ ಇಳಿದರೆ ಮಕ್ಕಳಿಗದೇ ಸ್ವರ್ಗ. ಆ ಮರ್ಸಿಡೀಸ್ ಕೆಲವೇ ಗಂಟೆಗಳಲ್ಲಿ ಮತ್ತೆ ಹೊರಡುತ್ತಿತ್ತು.

ಮುಂದೆ ಅಪ್ಪ-ಅಮ್ಮ. ಹಿಂದೆ ಮಕ್ಕಳು. ಮಕ್ಕಳು ಇಷ್ಟಪಡುತ್ತಿದ್ದ ಜಾಗಗಳಿಗೆಲ್ಲಾ ಸುರೇಶ್ ಒಬೆರಾಯ್ ಕರೆದೊಯ್ಯುತ್ತಿದ್ದರು. ಮಗ ತಾನು ಕುದುರೆ ಸವಾರಿ ಮಾಡಬೇಕು ಎಂದು ಕೇಳಿದರೆ, ಕೆಲವೇ ಕ್ಷಣಗಳಲ್ಲಿ ಆ ಬಯಕೆ ಈಡೇರುತ್ತಿತ್ತು.

ಬೋಟಿನಲ್ಲಿ ತುಂಬಾ ದೂರ ಹೋಗಬೇಕೆಂದರೂ ಅಪ್ಪ ಬೇಡ ಎನ್ನುತ್ತಿರಲಿಲ್ಲ. ಆಯತಪ್ಪಿ ಒಮ್ಮೆ ನೀರಿನಲ್ಲಿ ಬಿದ್ದು ಉಸಿರುಗಟ್ಟಿದ ನಂತರವೂ ಮಗನ ಎಲ್ಲಾ ಪ್ರೀತಿಯ ಹಟಗಳಿಗೆ ಅಪ್ಪ ಮಣಿಯುವುದು ತಪ್ಪಲಿಲ್ಲ.

ಅಮ್ಮನ ಹೆಸರು ಯಶೋದರಾ. ತುತ್ತಿನ ಜೊತೆಗೆ ಮಮತೆಯನ್ನೂ ಬೆರೆಸಿ ಉಣ್ಣಿಸಿದವರು. ವಿವೇಕ್ ಪ್ರೀತಿಯ ಆಲದಮರದ ನೆರಳಲ್ಲೇ ಬೆಳೆದರು. ಆದರೆ, ಸಿನಿಮಾ ಅಭಿನಯವನ್ನು ಆಯ್ಕೆ ಮಾಡಿಕೊಂಡಾಗ ಅಪ್ಪನ ಹಣ ಖರ್ಚು ಮಾಡಿಸುವ ದಾರಿ ಹಿಡಿಯಲಿಲ್ಲ.

`ಕಂಪೆನಿ~ ಚಿತ್ರದಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು, ತಮ್ಮಳಗಿನ ನಟನನ್ನು ಪ್ರಕಟಪಡಿಸಿದರು. `ಸಾಥಿಯಾ~ ಚಿತ್ರದ ಮೂಲಕ ತಾವು ರೊಮ್ಯಾಂಟಿಕ್ ಹೀರೋ ಕೂಡ ಹೌದೆಂಬುದನ್ನು ಸಾಬೀತು ಪಡಿಸಿದರು.
 
ಆಮೇಲೆ ಸಲ್ಮಾನ್ ರಾತ್ರಿಯಿಡೀ ಕಾಟ ಕೊಟ್ಟರೆಂದು ಒಂದು ಪತ್ರಿಕಾಗೋಷ್ಠಿಯನ್ನೇ ಮಾಡಿಬಿಟ್ಟರು. ಅಲ್ಲಿಂದ ಅವರ ಸಿನಿಮಾ ಬದುಕಿನ ಗ್ರಾಫು ದಿಢೀರನೆ ಕುಸಿಯತೊಡಗಿತು.

ಬೆಂಗಳೂರಿನ ಜೀವರಾಜ್ ಆಳ್ವ- ನಂದಿನಿ ಆಳ್ವ ಪುತ್ರಿ ಪ್ರಿಯಾಂಕಾ ಅವರನ್ನು ಮದುವೆಯಾದರು. ಮೂರು ತಿಂಗಳು ಕೈಲಿ ಮಾಡಲು ಏನೂ ಕೆಲಸವಿರಲಿಲ್ಲ. `ಬಂದೇ ಬರತಾವ ಕಾಲ~ ಎಂದು ಪ್ರಿಯಾಂಕಾ ಗಂಡನ ಕೈ ಅದುಮಿ ಸಮಾಧಾನ ಪಡಿಸಿದ ದಿನಗಳಿಗೆ ಲೆಕ್ಕವಿಲ್ಲ.

ಈಗ ಪ್ರಿಯಾಂಕಾ ಮಾತು ನಿಜವಾಗಿದೆ. ಟಿಪ್ಸ್ ಕಂಪೆನಿಯ ಇನ್ನೂ ಹೆಸರಿಡದ ಚಿತ್ರಕ್ಕೆ ಅದಾಗಲೇ ವಿವೇಕ್ ಬಣ್ಣಹಚ್ಚುತ್ತಿದ್ದಾರೆ. `ಜಿಲ್ಲಾ ಘಜಿಯಾಬಾದ್~ ಚಿತ್ರದಲ್ಲಿ ಸಂಜಯ್ ದತ್ ಜೊತೆ ನಟಿಸುವ ಅವಕಾಶ.
 
`ಕ್ರಿಷ್ 3~ ಚಿತ್ರದಲ್ಲಿ ತಮಗೆಂದೇ ಪಾತ್ರ ಸೃಷ್ಟಿಸಿ, ರಾಕೇಶ್ ರೋಷನ್ ಹಾಗೂ ಹೃತಿಕ್ ರೋಷನ್ ಕೊಡುತ್ತಿರುವ ಬ್ರೇಕ್ ಎಲ್ಲವೂ ವಿವೇಕ್ ಆತ್ಮವಿಶ್ವಾಸವನ್ನು ಮರಳಿಸಿವೆ. ಸಂಜಯ್ ದತ್ ಅಂತೂ ವಾರಕ್ಕೊಂದು ಸ್ಕ್ರಿಪ್ಟ್ ಕಳುಹಿಸಿ, `ಈ ಪಾತ್ರ ಚೆನ್ನಾಗಿರುತ್ತದೆ, ನೋಡು~ ಎಂದು ಸಲಹೆ ಕೊಡುತ್ತಿದ್ದಾರಂತೆ.

ಕೈಯಲ್ಲಿ ಕೆಲಸ ಇಲ್ಲದ ಸಂದರ್ಭದಲ್ಲೂ `ಶೂಟೌಟ್ ಅಟ್ ವಾಡಾಲಾ~ ಚಿತ್ರದ ಆಹ್ವಾನವನ್ನು ತಿರಸ್ಕರಿಸಿದ ವಿವೇಕ್‌ಗೆ ಮತ್ತೆ ಪುಟಿಯುವ ಹುಮ್ಮಸ್ಸಿದೆ. `ನನ್ನ ಸಿನಿಮಾ ಇನ್ನೂ ಬಾಕಿ ಇದೆ... ನೋಡುತ್ತಾ ಇರಿ...~ ಎಂಬ ಹಟ ಬೆರೆತ ಅವರ ಮಾತೇ ಇದಕ್ಕೆ ಸಾಕ್ಷಿ. ಅಂದಹಾಗೆ, ಮಕ್ಕಳೆಂದರೆ ವಿವೇಕ್‌ಗೆ ಪಂಚಪ್ರಾಣ.

ಪತ್ನಿ ಒಪ್ಪಿದರೆ ಮನೆಯಲ್ಲಿ ಕ್ರಿಕೆಟ್ ಟೀಮನ್ನೇ ಸೃಷ್ಟಿಸುವ ಮಹಾನ್ ತಂದೆ ತಾವಾಗಲು ಸಿದ್ಧ ಎಂದು ಅವರು ಪದೇಪದೇ ಕಿಚಾಯಿಸುತ್ತಿರುತ್ತಾರೆ. ಅಪ್ಪ ಸುರೇಶ್ ಒಬೆರಾಯ್ ಈಗ ಕಾರಿನ ಹಿಂಬದಿಯ ಸೀಟಿನಲ್ಲಿ ಹೆಂಡತಿ ಪಕ್ಕ ಕೂತರೆ, ಮುಂದಿನ ಸೀಟಲ್ಲಿ ಮಗ-ಸೊಸೆ ಕೂರುತ್ತಾರೆ. ಬಾಲ್ಯದಲ್ಲಿ ಮೊಗೆದುಕೊಳ್ಳುತ್ತಿದ್ದ ಪ್ರಯಾಣದ ಸುಖ ಈಗಲೂ ಮುಂದುವರಿದಿದೆ. ಪಿಕ್ಚರ್ ಅಭಿ ಬಾಕಿ ಹೈ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.