ಮದುವೆ ಮನೆಗೆ ಸಿದ್ಧತೆ ನಡೆಸಿದಂತೆ `ಚಪ್ಪರ~ ಹಾಕಿಸಿದ್ದರು ನಿರ್ಮಾಪಕ ಮುನಿರತ್ನ. `ಕಠಾರಿವೀರ ಸುರಸುಂದರಾಂಗಿ~ ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮವದು.
ಬಣ್ಣದ ಬೆಳಕು, ಸಂಗೀತದ ಅಲೆಯ ಮಿಲನದ ಅದ್ದೂರಿ ಸಮಾರಂಭದಲ್ಲಿ `ಯಮಲೋಕ~ವೇ ತೆರೆದುಕೊಂಡಿತ್ತು! ಕತ್ತಲು ಕವಿಯುತ್ತಿದ್ದರೂ ಕಾರ್ಯಕ್ರಮ ಶುರುವಾಗುವ ಲಕ್ಷಣ ಕಾಣಲಿಲ್ಲ.
ಒಂದೊಂದಾಗಿ ಹಾಡು ಕುಣಿತ ಶುರುವಾಗುವ ವೇಳೆಗೆ ಹೊತ್ತೇರಿತ್ತು. ಮಿಮಿಕ್ರಿ ದಯಾನಂದ್ ಮತ್ತು ಅರುಣ್ ಸಾಗರ್, ಯಮ-ಚಿತ್ರಗುಪ್ತರಾಗಿ ಸ್ವಲ್ಪ ನಗಿಸುತ್ತಾ ಮತ್ತಷ್ಟು ಚಿತ್ರವಿಚಿತ್ರ ಮಾತುಗಳನ್ನಾಡುತ್ತ ಕಾಲಹರಣ ಮಾಡುತ್ತಿದ್ದರೆ, ಇನ್ನೂ ವೇದಿಕೆ ಮೇಲೇರುವ ಸೌಭಾಗ್ಯ ಸಿಗದೆ ಕೆಳಗೆ ಕುಳಿತಿದ್ದ ಗಣ್ಯರು ಅಸಹನೆ ವ್ಯಕ್ತಪಡಿಸುತ್ತಿದ್ದರು.
ಕಡೆಗೂ ವೇದಿಕೆ ಹತ್ತುವ ಅವಕಾಶ ಸಿಕ್ಕ ಬಳಿಕ ನಟ ಅಂಬರೀಷ್- `ಈ ಕಾರ್ಯಕ್ರಮ ಇಷ್ಟು ಚೆನ್ನಾಗಿ ನಡೆಯುತ್ತದೆ ಎಂದು ಗೊತ್ತಾಗಿದ್ದರೆ ಇನ್ನೂ ತಡವಾಗಿಯೇ ಬರುತ್ತಿದ್ದೆ~ ಎಂದು ವ್ಯಂಗ್ಯವಾಗಿ ಕೋಪ ಹೊರಹಾಕಿದರು.
ಆಡಿಯೊ ಸಿ.ಡಿ. ಬಿಡುಗಡೆ ಮಾಡಿದ್ದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ. ನಿರ್ಮಾಪಕ ಮುನಿರತ್ನ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿಯೇ ಇಲ್ಲ. ಅಂಬರೀಷ್ ಮತ್ತು ರಮ್ಯಾ ಮೂಲಕ ನನ್ನನ್ನು ಕರೆಸಿದ್ದಾರೆ ಎಂದವರು ನಗುತ್ತಾ ಆರೋಪಿಸಿದರು. ಚಿತ್ರದ ಹೆಸರೇ ವಿಭಿನ್ನವಾಗಿದೆ ಎಂದ ಸಿದ್ದರಾಮಯ್ಯ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಮುನಿರತ್ನ ಜೊತೆ ಚಿಕ್ಕವಯಸ್ಸಿನಲ್ಲಿ ಬ್ಯಾಟು ಹಿಡಿದು ಕ್ರಿಕೆಟ್ ಆಡಿದ್ದನ್ನು ಡಿ.ಕೆ.ಶಿವಕುಮಾರ್ ನೆನೆಸಿಕೊಂಡರು. ಕನ್ನಡಕ್ಕೆ ಥ್ರೀಡಿಯನ್ನು ತಂದಿದ್ದರ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಇಂತಹ ಹೊಸ ಪ್ರಯತ್ನಗಳು ನಡೆಯಬೇಕು. ಚಿತ್ರರಂಗ ಬೆಳೆಯಬೇಕು. ಚಿತ್ರರಂಗದಲ್ಲಿ ದುಡಿಯುವ ಕಟ್ಟಕಡೆಯ ಕೆಲಸಗಾರನಿಗೂ ಯಶಸ್ಸಿನ ಪ್ರತಿಫಲ ಸಿಗಬೇಕು ಎಂಬ ಆಶಯ ಅವರದು.
ಭೂಲೋಕ ಮಾತ್ರವಲ್ಲ ಯಮಲೋಕ, ಇಂದ್ರಲೋಕ ಹೀಗೆ ಯಾವಲೋಕಕ್ಕೂ ಕಳುಹಿಸಿದರೂ ಉಪೇಂದ್ರ ಮಾತಿನಲ್ಲಿ ಗೆದ್ದುಬರುತ್ತಾರೆ, ರಮ್ಯಾ ಅಂದದಲ್ಲಿ ಸೋಲಿಸುತ್ತಾರೆ ಎಂದು ನಗೆ ಹರಿಸಿದರು ರವಿಚಂದ್ರನ್.
`ಹರಿಕೃಷ್ಣ ಹಾಡುಗಳನ್ನು ಚಚ್ಚಿ ಚಿಂದಿ ಉಡಾಯ್ಸಿದ್ದಾರೆ. ಐ ಲೈಕ್ ಇಟ್~ ಎಂದು ರಕ್ತಕಣ್ಣೀರು ಶೈಲಿಯಲ್ಲಿ ಉಪೇಂದ್ರ ಮಾತಿಗಿಳಿದರು. ಇದು ಸಂಪೂರ್ಣ ಮುನಿರತ್ನ ಸಿನಿಮಾ. ನಿರ್ದೇಶನವೊಂದನ್ನು ಬಿಟ್ಟು ಅವರು ಮತ್ತೆಲ್ಲವನ್ನೂ ಮಾಡಿದ್ದಾರೆ ಎಂದು ಕಿಚಾಯಿಸಿದರು.
ಕನ್ನಡದ ಮೊದಲ ಥ್ರೀಡಿ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದ್ದಕ್ಕೆ ತಮ್ಮನ್ನು `ಲಕ್ಕಿ~ ಎಂದು ಕರೆದುಕೊಂಡರು ನಟಿ ರಮ್ಯಾ.
ಸಂಭ್ರಮದ ಸಮಾರಂಭವಾದರೂ ಗಂಭೀರ ವದನರಾಗಿ ಅಡ್ಡಾಡುತ್ತಿದ್ದ ಮುನಿರತ್ನ ವೇದಿಕೆ ಮೇಲೇರಿದಾಗ ಮಾತನಾಡುವ ಆಸಕ್ತಿ ತೋರಲಿಲ್ಲ. ನಿರ್ದೇಶಕ ಸುರೇಶ್ ಕೃಷ್ಣ ಗೈರುಹಾಜರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.