ADVERTISEMENT

ಕನ್ನಡಿಗರ ಹಿಂದಿ ಸಿನಿಮಾ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2012, 19:30 IST
Last Updated 3 ಅಕ್ಟೋಬರ್ 2012, 19:30 IST

`ಎಸ್‌ಎಂಎಸ್6260~ ಮತ್ತು `ಜೋ ಜೋ ಲಾಲಿ~ ಎಂಬ ಚಿತ್ರಗಳನ್ನು ನಿರ್ದೇಶಿಸಿದ್ದ ಸಂದೀಪ್ ಮಲಾನಿ ಕನ್ನಡದ ಕಲಾವಿದರನ್ನು ಮತ್ತು ತಂತ್ರಜ್ಞರನ್ನು ಬಳಸಿಕೊಂಡು ಹಿಂದಿ ಚಿತ್ರವೊಂದಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ಹೆಸರು `ಜಾನ್‌ಲೇವಾ-555~.

`ಜಾನ್‌ಲೇವ...~ ಮ್ಯೂಸಿಕಲ್ ಥ್ರಿಲ್ಲರ್ ಎಂದು ಸಂದೀಪ್ ಮಲಾನಿ ತಮ್ಮ ಚಿತ್ರವನ್ನು ಬಣ್ಣಿಸಿದರು. 15 ಹಾಡುಗಳು ಈ ಹಾರರ್ ಚಿತ್ರದಲ್ಲಿರುವುದು ಅವರು ಹೀಗೆ ಹೇಳಿಕೊಳ್ಳಲು ಕಾರಣ. ಹಾರರ್ ಮತ್ತು ಹಾಸ್ಯದ ಮಿಶ್ರಣವಾಗಿ ಸಿನಿಮಾ ಮೂಡಿಬಂದಿದೆಯಂತೆ. ಮಾತ್ರವಲ್ಲ ಹಲವು ವಿಶೇಷಗಳನ್ನೂ ಇದು ಒಳಗೊಂಡಿದೆ.
 
20 ವರ್ಷದ ಬಳಿಕ ಅನಂತ್‌ನಾಗ್ ಹಿಂದಿ ಚಿತ್ರದಲ್ಲಿ ನಟಿಸಿದ್ದರೆ 42 ವರ್ಷಗಳ ಬಳಿಕ ವೈಜಯಂತಿಮಾಲ ಬೆಳ್ಳಿಪರದೆ ಮೇಲೆ ಕಾಣಿಸಿಕೊಂಡಿದ್ದಾರೆ. ನಟಿ ಮತ್ತು ನೃತ್ಯಗಾರ್ತಿ ಸುಧಾಚಂದ್ರನ್ ಸ್ವ-ಆಸಕ್ತಿಯಿಂದ ಚಿತ್ರದ ಪ್ರಚಾರದಲ್ಲಿ ತೊಡಗಲು ಮುಂದಾಗಿದ್ದಾರಂತೆ.

ಹಾವು ಕಡಿತದಿಂದ ಹಳ್ಳಿಗಳಲ್ಲಿ ಅನೇಕ ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಈ ಆತಂಕಕಾರಿ ಸಂಗತಿಯನ್ನು ಸಿನಿಮಾದಲ್ಲಿ ಅಳವಡಿಸಲಾಗಿದೆ. ಈ ಕಾರಣಕ್ಕಾಗಿಯೇ ಜಾಗೃತಿ ಮೂಡಿಸುವ ಸಲುವಾಗಿ ಸುಧಾಚಂದ್ರನ್ ಪ್ರಚಾರದಲ್ಲಿ ಪಾಲ್ಗೊಂಡು ಸಂದೇಶವನ್ನೂ ನೀಡಿದ್ದಾರೆ ಎಂದರು ಸಂದೀಪ್ ಮಲಾನಿ.

ಅಮೆರಿಕದಲ್ಲಿ ವಾಸವಾಗಿರುವ ಚಿತ್ರದ ನಾಯಕಿ ಕಲ್ಪನಾ ಪಂಡಿತ್ ನಂಜನಗೂಡು ಮೂಲದವರು. `ಮೋಕ್ಷ್~, `ಓಂ~, ಪದ್ಮಶ್ರೀ ಲಾಲೂ ಪ್ರಸಾದ್~, `ಅನುಭವ~ ಮುಂತಾದ ಹಿಂದಿ ಚಿತ್ರದಲ್ಲಿ ಅವರು ಈ ಹಿಂದೆ ನಟಿಸಿದ್ದರು. ವಿದೇಶದಲ್ಲಿದ್ದರೂ ಕನ್ನಡದ ಬೇರನ್ನು ಅವರು ಮರೆತಿಲ್ಲ.

ವೈದ್ಯವೃತ್ತಿ ಅವರ ಉದ್ಯೋಗವಾಗಿದ್ದರೂ ಸಿನಿಮಾದ ಬಗ್ಗೆ ಅವರಿಗೆ ಅಪಾರ ಒಲವು. ಸಂದೀಪ್ ಮಲಾನಿ ಅವರ `ಜೋ ಜೋ~ ಕಿರುಚಿತ್ರದಲ್ಲಿಯೂ ಅವರು ಈ ಹಿಂದೆ ಅಭಿನಯಿಸಿದ್ದರು. ಎಚ್‌ಐವಿ ಕುರಿತು ಸಂದೇಶ ಸಾರುವ ಆ ಚಿತ್ರ ಅಂತರರಾಷ್ಟ್ರೀಯ ಮಟ್ಟದ ಪ್ರಶಸ್ತಿಯೊಂದನ್ನು ಸಹ ಗಳಿಸಿತ್ತು. ಇಡೀ ಚಿತ್ರವನ್ನು ಕರ್ನಾಟಕದಲ್ಲಿಯೇ ಚಿತ್ರೀಕರಿಸಿದ್ದು ಅಕ್ಟೋಬರ್ 19ರಂದು ಚಿತ್ರ ತೆರೆಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.