ADVERTISEMENT

ಕಿರುಗಾವಲಿನಲಿ ಪ್ರೇಮದ ಝರಿ

ಲಕ್ಷ್ಮಣ ಟಿ.ನಾಯ್ಕ
Published 1 ಆಗಸ್ಟ್ 2013, 19:59 IST
Last Updated 1 ಆಗಸ್ಟ್ 2013, 19:59 IST

ಮಂಡ್ಯದ ಕಿರುಗಾವಲಿನಲ್ಲಿ `ಬೃಂದಾವನ' ಕಟ್ಟುವ ಕೆಲಸ ಭರದಿಂದ ಸಾಗಿದೆ. ನಿರ್ದೇಶಕ ಮಾದೇಶ್‌ರ ನೇತೃತ್ವ ಇದಕ್ಕಿದೆ. ಕಳೆದ ವಾರ, ಕನ್ನಂಬಾಡಿಯಿಂದ ಅನತಿ ದೂರದಲ್ಲಿರುವ ಕಿರುಗಾವಲಿನಲ್ಲಿ `ಬೃಂದಾವನ'ದ ಸಂಭ್ರಮ. ಅಂದಹಾಗೆ, ಇದು ಕೆಆರ್‌ಎಸ್ ಬಳಿ ಇರುವ `ಬೃಂದಾವನ' ಅಲ್ಲ. ತೆಲುಗಿನಲ್ಲಿ ಜೂನಿಯರ್ ಎನ್‌ಟಿಆರ್ ಅಭಿನಯಿಸಿದ `ಬೃಂದಾವನಂ' ಚಿತ್ರದ ಕನ್ನಡ ಅವತರಣಿಕೆ.

ಹೈದರಾಬಾದ್, ಗದಗ, ಬೆಂಗಳೂರು ಹಾಗೂ ಐಸ್‌ಲ್ಯಾಂಡ್‌ನಲ್ಲಿ ಶೂಟಿಂಗ್ ಮುಗಿಸಿಕೊಂಡು ಬಂದಿರುವ ಚಿತ್ರತಂಡ ಕಿರುಗಾವಲು ಗ್ರಾಮದ ರೈಸ್‌ಮಿಲ್‌ನಲ್ಲಿ ಬೀಡುಬಿಟ್ಟಿದೆ.

ಜಾತ್ರೆಯಂತೆ ಸೇರಿದ ಜನಸಂದಣಿ ನಡುವೆ ನಾಯಕ ದರ್ಶನ್ ನಾಯಕಿಯನ್ನು ಹೊತ್ತುಕೊಂಡು ಹೋಗುವ ದೃಶ್ಯಕ್ಕೆ ಮಾದೇಶ ಆ್ಯಕ್ಷನ್ ಕಟ್ ಹೇಳುತ್ತಿದ್ದರು. ರೈಸ್‌ಮಿಲ್ ಸುತ್ತಲೂ ಜನ. ಅದರ ನಡುವೆ ಚಿತ್ರೀಕರಣ. ಒಂದು ದೃಶ್ಯ ಮುಗಿದ ತಕ್ಷಣ ಮುತ್ತಿಕೊಳ್ಳುವ ಅಭಿಮಾನಿ ಬಳಗ. ಎಲ್ಲರನ್ನೂ ತಪ್ಪಿಸಿಕೊಂಡು ಕ್ಯಾರವಾನ್ ಹತ್ತುವ ವೇಳೆಗೆ ದರ್ಶನ್ ಸುಸ್ತಾದರು.

ತೆಲುಗಿನ `ಬೃಂದಾವನಂ' ಕನ್ನಡಕ್ಕೆ ಬರುವಾಗ `ಬೃಂದಾವನ' ಆಗಿದೆ. ಹೆಸರು ಒಂದೇ ಇದೆ. ಆದರೆ, ಉಳಿದೆಲ್ಲವೂ ಬದಲಾಗಿದೆ. ಮೂಲ ಕಥೆಯಲ್ಲಿ ಶೇ 30ರಷ್ಟನ್ನು ಉಳಿಸಿಕೊಳ್ಳಲಾಗಿದೆ ಎಂದು ನಿರ್ದೇಶಕ ಮಾದೇಶ್ ಹೇಳಿದರು. ಹಿಂದಿ ಮತ್ತು ತೆಲುಗಿಗಿಂತ ಕನ್ನಡ ಚಿತ್ರ ಇನ್ನಷ್ಟು ಚೆನ್ನಾಗಿ ಮೂಡಿ ಬಂದಿದೆ. ಸಾಯಿ ಕುಮಾರ್, ಜೈಜಗದೀಶ್, ದೊಡ್ಡಣ್ಣ ಸೇರಿದಂತೆ ದೊಡ್ಡ ನಟರ ಸಾಲೇ ಇದೆ ಎಂದು ಉದ್ದನೆಯ ಪಟ್ಟಿ ನೀಡಿದರು.

ತೆಲುಗಿನಲ್ಲಿ ಕಾರು, ಬೈಕ್‌ಗಳನ್ನು ಬಳಲಾಗಿದೆ. ನಾವು ಬಳಸಿರುವುದು ಹೆಲಿಕಾಪ್ಟರ್. ಹೀರೊ ಪ್ರವೇಶ ಮಾಡುವ ರೀತಿಯನ್ನು ವಿಭಿನ್ನವಾಗಿ ತೋರಿಸಲಾಗಿದೆ ಎಂದರು ಮಾದೇಶ್.

ಐಸ್‌ಲ್ಯಾಂಡ್‌ನಲ್ಲಿ ಹಾಡುಗಳ ಶೂಟಿಂಗ್‌ಗಾಗಿ 36 ಜನ ಹೋಗಿದ್ದೆವು. ಚಳಿ ಹಾಗೂ ಸಂಜೆ ವೇಳೆಗೆ ಸುರಿಯುತ್ತಿದ್ದ ತುಂತುರು ಮಳೆಯಿಂದಾಗಿ ಒಂದು ಹಾಡಿನ ಚಿತ್ರೀಕರಣ ಮಾಡಲಷ್ಟೇ ಸಾಧ್ಯವಾಯಿತು. ಅದೊಂದು ಅದ್ಭುತ ಅನುಭವ ಎಂದು ಪುಳಕಿತರಾದ ಮಾದೇಶ್, ಕೊರೆಯುವ ಚಳಿಯಲ್ಲೂ ನಟಿ ಕಾರ್ತಿಕ ನಾಯರ್, ದರ್ಶನ್ ನೀಡಿದ ಸಹಕಾರವನ್ನು ನೆನಪಿಸಿಕೊಂಡರು. `ಗಜ' ಮಾಡಿದಾಗಲೂ ಇಷ್ಟೇ ಶ್ರಮಹಾಕಿದ್ದೆವು. ಅದು ಫಲ ನೀಡಿತು. ಇದೂ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂದರು.

`ಹೈಸ್ಪೀಡ್ ಕ್ಯಾಮೆರಾ ಬಳಸಿ ಚಿತ್ರೀಕರಣ ನಡೆಸಿದ್ದೇವೆ. ಹಲವೆಡೆ ಎಲೆಕ್ಸಾ ಕ್ಯಾಮೆರಾ ಬಳಕೆಯಾಗಿದೆ. ಅದು ಅಪರೂಪದ ತಂತ್ರಜ್ಞಾನದ ಕ್ಯಾಮೆರಾ. ಕೃಷ್ಣರ ಕೆಲಸ ಹೊಸ ಅನುಭೂತಿ ನೀಡುವುದು ಗ್ಯಾರಂಟಿ' ಎಂದು ದರ್ಶನ್ ಹೇಳಿದರು.

ನಿರ್ಮಾಪಕರಾದ ಸುರೇಶ್‌ಗೌಡ ಹಾಗೂ ಪಿ.ಜಿ. ಶ್ರೀನಿವಾಸಮೂರ್ತಿ ಅವರಿಗೆ ಸಿನಿಮಾ ಸಾಗುತ್ತಿರುವ ರೀತಿ ಬಗ್ಗೆ ಸಮಾಧಾನವಿದೆ. ಸೆಪ್ಟೆಂಬರ್‌ನಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.