ADVERTISEMENT

`ಕ್ವಾಟ್ರು ಬಾಟ್ಲಿ' ವಿಕ್ಟರಿ ಗೆಲುವಿನ ಖಾತರಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2013, 19:59 IST
Last Updated 25 ಜುಲೈ 2013, 19:59 IST
ನಂದಕಿಶೋರ್
ನಂದಕಿಶೋರ್   

`ಖಾಲಿ ಕ್ವಾಟ್ರು ಬಾಟ್ಲಿ ಹಂಗೆ ಲೈಫು...'- `ವಿಕ್ಟರಿ' ಚಿತ್ರಕ್ಕಾಗಿ ಯೋಗರಾಜ್ ಭಟ್ ಬರೆದ ಈ ಹಾಡು ಎಲ್ಲರ ಬಾಯಲ್ಲಿ ನಲಿದಾಡುತ್ತಿದೆ. ಈ ಹಾಡು ಬಂದದ್ದೇ ತಡ ಮದ್ಯದ ದರ ಏರಿಕೆಯಾಗಿದೆ ಎಂದು ಚಟಾಕಿ ಹಾರಿಸಿದರು ನಟ ಶರಣ್.

ಸಿನಿಮಾ ಬಿಡುಗಡೆಯಾಗಿ ಗೆದ್ದ ಬಳಿಕ ಯಶಸ್ಸಿನ ಸಂತೋಷ ಕೂಟ ಆಚರಣೆ ನೆಪದಲ್ಲಿ ಸುದ್ದಿಗೋಷ್ಠಿ ಕರೆಯುವುದು ವಾಡಿಕೆ. ಆದರೆ ಇದು ಹಾಡುಗಳ ಯಶಸ್ಸಿನ ಸುದ್ದಿಗೋಷ್ಠಿ ಎನ್ನುವುದು ಚಿತ್ರತಂಡದ ವಿಶ್ಲೇಷಣೆ. ಅದಕ್ಕೆ ಕಾರಣವೂ ಇತ್ತು. `ಕುಡುಕರ ಹಾಡು' ಮಾತ್ರವಲ್ಲ, ಚಿತ್ರದ ಎಲ್ಲಾ ಹಾಡುಗಳೂ `ಹಿಟ್' ಪಟ್ಟಿಯಲ್ಲಿ ಸ್ಥಾನಪಡೆದಿವೆ. ಇದು ಸಿನಿಮಾ ಗೆಲುವಿಗೆ ದೊಡ್ಡ ಶಕ್ತಿ ನೀಡಿದೆ ಎನ್ನುವ ಶರಣ್, ಜೊತೆಗೆ ತಮ್ಮ ಮೇಲಿನ ಜವಾಬ್ದಾರಿ ಮತ್ತು ಭಯ ಎರಡೂ ಹೆಚ್ಚಾಗಿದೆ ಎನ್ನುತ್ತಾರೆ.

ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದ್ದು ಸೆನ್ಸಾರ್ ಮಂಡಳಿ ಮುಂದೆ ಶೀಘ್ರವೇ ತೆರಳಲಿದೆ. ಹಾಡುಗಳ ಗೆಲುವನ್ನು ನಂಬಿ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕನಿಗೆ ಖಂಡಿತಾ ಮೋಸವಾಗುವುದಿಲ್ಲ ಎನ್ನುವ ಭರವಸೆ ಅವರದು. ಜನರ ಮನಸ್ಸನ್ನು ತಟ್ಟುವ ಕೆಲಸವನ್ನು ಸಿನಿಮಾ ಮಾಡುತ್ತದೆ ಎಂಬ ನಂಬಿಕೆ ಹೊಂದಿದ್ದ ಅವರಲ್ಲಿ ಹಾಡುಗಳ ಯಶಸ್ಸು ಅದರ ಸಣ್ಣ ಸೂಚನೆಯನ್ನು ನೀಡಿದೆ ಎಂಬ ಖುಷಿ. `ಶರಣ್ ಇಸಂ' ಅನ್ನು ತೊರೆದು ರೊಮ್ಯಾಂಟಿಕ್ ಹಾಡೊಂದರಲ್ಲಿ ಅವರು ಕಾಣಿಸಿಕೊಂಡಿದ್ದಾರಂತೆ.

ಹಾಡಿನ ಗೆಲುವಿನ ಶ್ರೇಯಸ್ಸನ್ನು ಸಾಹಿತಿ ಯೋಗರಾಜ್ ಭಟ್ಟರಿಗೆ ಅರ್ಪಿಸಿದರು ಸಂಗೀತ ನಿರ್ದೇಶಕ ಅರ್ಜುನ್ ಜನ್ಯ. ಭಟ್ಟರು ಸಾಹಿತ್ಯ ಬರೆಯುವಾಗಲೇ ಈ ಹಾಡು ಹಿಟ್ ಆಗುತ್ತದೆ ಎಂಬ ಭವಿಷ್ಯ ನುಡಿದಿದ್ದರಂತೆ. ಅಲ್ಲದೆ ಹಿಟ್ ಮಾಡುವ ಹೊಣೆಯನ್ನೂ ಜನ್ಯರಿಗೆ ವಹಿಸಿದ್ದರಂತೆ. ನನ್ನ ಕೆಲಸ ಮಾಡಿದ್ದೇನೆ ಎಂಬ ನೆಮ್ಮದಿಯ ಭಾವ ಅವರದು.

ಚಿತ್ರಮಂದಿರಗಳ ಹುಡುಕಾಟದಲ್ಲಿರುವ ಚಿತ್ರತಂಡ ಆಗಸ್ಟ್ ಮೊದಲ ಅಥವಾ ಎರಡನೇ ವಾರದಲ್ಲಿ ಚಿತ್ರವನ್ನು ತೆರೆಗೆ ತರಲು ಉದ್ದೇಶಿಸಿದೆ. `ಚಿತ್ರದ ಬೆನ್ನೆಲುಬು' ಎಂದು ಶರಣ್‌ರಿಂದ ಹೊಗಳಿಕೆಗೆ ಪಾತ್ರರಾದ ನಿರ್ದೇಶಕ ನಂದಕಿಶೋರ್ ಅದನ್ನು ಇಡೀ ಚಿತ್ರತಂಡ ಶ್ರಮ ಎಂದು ಬಣ್ಣಿಸಿದರು.

ನಿರ್ಮಾಪಕ ಮೋಹನ್ ಬಂಡವಾಳ ಹೂಡಲು ಮುಂದಾದಾಗ ಶರಣ್‌ರನ್ನು ನಂಬಿ ಇಷ್ಟು ಹಣ ಹೂಡುತ್ತೀರಾ ಎಂದು ಕುಹಕದಿಂದ ಕೇಳಿದ್ದವರು, ಈಗ ಸಿನಿಮಾ ವಿತರಣೆ ಹಕ್ಕನ್ನು ಕೊಳ್ಳಲು ಮುಗಿಬೀಳುತ್ತಿದ್ದಾರಂತೆ. ಉಪಗ್ರಹ ಹಕ್ಕಿಗೂ ಉತ್ತಮ ಬೇಡಿಕೆ ಬಂದಿದೆ ಎಂಬ ಸಂತಸ ಅವರಲ್ಲಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT