ADVERTISEMENT

ಗನ್ ಹೆಸರಿನ ಗುಲಾಬಿ ಕಥೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 19:30 IST
Last Updated 24 ಫೆಬ್ರುವರಿ 2011, 19:30 IST

ಹರೀಶ್ ರಾಜ್ ಅವರ ಚಿತ್ರಕತೆ, ನಿರ್ದೇಶನದ ‘ಗನ್’ ಚಿತ್ರ ಈ ವಾರ ತೆರೆ ಕಾಣುತ್ತಿದೆ. ಆ ಸಂಭ್ರಮದಲ್ಲಿ ಇರುವ ಹರೀಶ್ ಬಿಗುಮಾನವಿಲ್ಲದೆ ಮುಕ್ತವಾಗಿ ಮಾತಿಗೆ ಕುಳಿತರು.

ಗನ್’ ಸಿನಿಮಾದಲ್ಲಿ ವಿಶೇಷ ಏನಿದೆ?
ಮುಖ್ಯವಾಗಿ ಮನರಂಜನೆ. ‘ಗನ್’ ಎಂಬ ರೌಡಿಸಂ ಬಿಂಬಿಸುವ ಹೆಸರಿಟ್ಟುಕೊಂಡು ಲವ್ ಸಬ್ಜೆಕ್ಟ್ ಹೇಳಲು ಹೊರಟಿದ್ದೇನೆ. ಗನ್‌ನಿಂದ ಹುಡುಗನೊಬ್ಬನ ಜೀವನದಲ್ಲಿ ಆಗುವ ಬದಲಾವಣೆಯನ್ನು ತೋರಿಸಲಾಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿಯಾದ ನಾಯಕ ಹೇಗೆ ಹಾದಿ ತಪ್ಪುತ್ತಾನೆ ಮತ್ತು ಅವನ ಬದುಕಿನ ಬಗ್ಗೆ ಕುತೂಹಲ ಹುಟ್ಟಿಸಿಕೊಳ್ಳುವ ಪತ್ರಕರ್ತೆ (ಮಲ್ಲಿಕಾ ಕಪೂರ್) ಹಾಗೂ ಅವನನ್ನು ಪ್ರೀತಿಸುವ ಹುಡುಗಿಯ (ನಿಖಿತಾ) ಪಾತ್ರಗಳು ಕೂಡ ಸುಂದರವಾಗಿ ನಿರೂಪಣೆಯಾಗಿವೆ. ಕೊನೆಯಲ್ಲಿ ಗನ್ ಫೋಬಿಯಾಗೆ ಸಿಗುವ ನಾಯಕ ಎಂಜಿನಿಯರ್ ಆಗುತ್ತಾನೆಯೇ ಇಲ್ಲವೇ ಎಂಬುದೇ ಕತೆಯ ಕುತೂಹಲದ ಘಟ್ಟ. ಈಗಾಗಲೇ ಹಾಡುಗಳು ಜನಪ್ರಿಯವಾಗಿವೆ. ಚಿತ್ರದಲ್ಲಿ ಫೈಟ್ ಮಾಡುವ, ಡಾನ್ಸ್ ಮಾಡುವ ಹೊಸ ಹರೀಶ್ ರಾಜ್‌ನನ್ನು ನೋಡಲಿದ್ದೀರಿ.

ನಿರ್ದೇಶಕನಾಗಿ ಏನು ಸುಧಾರಣೆ ಕಾಣಬಹುದು?
‘ಕಲಾಕಾರ್’ ನನ್ನ ಮೊದಲ ಸಿನಿಮಾ. ‘ಗನ್’ ಎರಡನೆಯದು. ಇದರಲ್ಲಿ ನಾನು ತಾಂತ್ರಿಕವಾಗಿ ತುಂಬಾ ಸುಧಾರಿಸಿದ್ದೇನೆ ಎಂದು ಹಲವರು ಹೇಳಿದರು. ಕೆಲವು ಶಾಟ್‌ಗಳ ಚಿತ್ರೀಕರಣದಲ್ಲಿ ತುಂಬಾ ಬದಲಾವಣೆ ಕಾಣಿಸಿದೆ.

ಕಳೆದ ವಾರ ನಿಮ್ಮ ಅಭಿನಯದ ‘ನಾವು ನಮ್ಮ ಹೆಂಡ್ತೀರು’ ಚಿತ್ರ ಬಿಡುಗಡೆಯಾಗಿದೆ. ಈ ವಾರ ‘ಗನ್’ ಬಿಡುಗಡೆಯಾಗುತ್ತಿದೆ. ನಿಮಗೆ ನೀವೇ ಸ್ಪರ್ಧಿಯಾ?
‘ನಾವು ನಮ್ಮ ಹೆಂಡ್ತೀರು’ ಆರು ತಿಂಗಳ ಹಿಂದೆ ಬಿಡುಗಡೆಯಾಗಬೇಕಿತ್ತು. ‘ಗನ್’ ಬಿಡುಗಡೆಗೆ ಸಿದ್ಧವಾದ ನಂತರ ಬಿಡುಗಡೆಯಾಗಿದೆ. ಅದು ಬಹುತಾರಾಗಣದ ಚಿತ್ರ. ‘ಗನ್’ನಲ್ಲಿ ನನ್ನದು ಪ್ರಧಾನ ಪಾತ್ರ.

ಮುಂದಿನ ಪ್ರಾಜೆಕ್ಟ್?
ಸಿದ್ಧವಾಗುತ್ತಿದೆ. ನನ್ನದೇ ಕತೆ, ನಿರ್ದೇಶನ ಇರುತ್ತದೆ. ಅದು ಪೂರ್ಣ ಆಕ್ಷನ್ ಸಿನಿಮಾ.

ಜನ ಯಾವ ರೀತಿಯ ಸಿನಿಮಾ ನೋಡಲು ಇಷ್ಟಪಡುತ್ತಾರೆ?
ಜನ ಟೆನ್ಷನ್‌ನಿಂದ ಹೊರಬರಲು ಸಿನಿಮಾ ನೋಡುತ್ತಾರೆ. ಉತ್ತಮ ಕತೆಯೊಂದಿಗೆ ಮನರಂಜನೆ ಇರುವ ಚಿತ್ರ ಬೇಕು. ತಿಳಿವಳಿಕೆ ನೀಡುವ ಗಂಭೀರ ಯೋಚನೆಗೆ ದೂಡುವ ಸಿನಿಮಾಗಳನ್ನು ಜನ ಇಷ್ಟಪಡುತ್ತಿಲ್ಲ. ಹಿಂದಿಯಲ್ಲಿ ಜನಪ್ರಿಯವಾದ ಮತ್ತು ಕನ್ನಡದಲ್ಲಿ ಹಿಟ್ ಆದ ಸಿನಿಮಾಗಳಲ್ಲಿ ಕತೆಗಿಂತ ಹೆಚ್ಚು ಮನರಂಜನೆ, ಗ್ಲಾಮರ್, ಹಾಡುಗಳು ಪ್ರಧಾನವಾಗಿರುವುದನ್ನು ಗಮನಿಸಬಹುದು.

ನಿಮ್ಮನ್ನು ಕನ್ನಡ ಚಿತ್ರರಂಗ ನಾಯಕನಾಗಿ ಒಪ್ಪಿಕೊಂಡಿದೆ ಎನಿಸಿದೆಯೇ?
ನೂರಕ್ಕೆ ನೂರರಷ್ಟು ಒಪ್ಪಿಕೊಂಡಿದೆ. ಕಲಾಕಾರ್ ಸಿನಿಮಾದಲ್ಲಿ ನಾನು ಪಟ್ಟ ಶ್ರಮ ಸಾರ್ಥಕವಾಗಿದೆ. ನನ್ನನ್ನು ಚಿತ್ರರಂಗದ ಜನ ಕಲಾಕಾರ್ ಸಿನಿಮಾದ ಹುಡುಗ ಎಂದೇ ಗುರುತಿಸುತ್ತಾರೆ.

ಕಲಾಕಾರ್’ ಒಳ್ಳೆಯ ಅಭಿರುಚಿ ಇರುವ ಸಿನಿಮಾ ಎನಿಸಿಕೊಂಡಿತ್ತು. ‘ಗನ್’ನಲ್ಲಿ ಐಟಂ ಹಾಡು ಇದೆ. ಇದು ವೈರುಧ್ಯವಲ್ಲವಾ?
ನಾನು ಯಾವಾಗಲೂ ಕತೆಗೆ ಬದ್ಧ. ಕತೆಗೆ ಹೊಂದುವಂತಿದ್ದರೆ ಬೇರೆ ನಾಯಕನಿಗೂ ಅವಕಾಶ ನೀಡುವ ಮನಸ್ಸಿದೆ. ಸಿನಿಮಾದಲ್ಲಿ ಖಳನಾಯಕರಾದ ರಂಗಾಯಣ ರಘು ಮತ್ತು ಪಿ.ಎನ್.ಸತ್ಯಾ ಪಾತ್ರಗಳು ಪಾರ್ಟಿ ಮಾಡುವಾಗ ಅಂಥ ಹಾಡು ಇರಲೇಬೇಕು. ಅದು ಕತೆಗೆ ಸೂಕ್ತ ಎನಿಸಿತು. ಆದರೆ ಕೆಟ್ಟದಾಗಿ ಇಲ್ಲ. ನನ್ನ ಶೈಲಿಯಲ್ಲಿದೆ.

ನಿರ್ದೇಶಕರಾಗಿ ಗುರುತಿಸಿಕೊಂಡ ನಂತರ ನಿರ್ದಿಷ್ಟ ಪಾತ್ರಗಳನ್ನು ಮಾತ್ರ ಒಪ್ಪಿಕೊಳ್ಳುವ ನಿಯಮ ಹಾಕಿಕೊಂಡಿದ್ದೀರಾ?
ಹಾಗೇನೂ ಇಲ್ಲ. ಕಾಮಿಡಿ, ಆಕ್ಷನ್ ಸೇರಿದಂತೆ ಯಾವುದೇ ಪಾತ್ರವಾದರೂ ಸರಿ ಮಾಡಲು ಸಿದ್ಧ. ಕಲಾವಿದನಾಗಿ ಗುರುತಿಸಿಕೊಂಡ ನಂತರ ಎಂಥ ಪಾತ್ರ ಕೊಟ್ಟರೂ ಮಾಡಬೇಕು. ಅದರಲ್ಲಿಯೇ ನಮ್ಮ ವರ್ಸಟಾಲಿಟಿ ಕಾಣಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT