ADVERTISEMENT

ಗೊಂದಲಗಳ ಗೂಡು

ಶ್ರೀಕಾಂತ ಕಲ್ಲಮ್ಮನವರ
Published 5 ಫೆಬ್ರುವರಿ 2011, 16:15 IST
Last Updated 5 ಫೆಬ್ರುವರಿ 2011, 16:15 IST
ಗೊಂದಲಗಳ ಗೂಡು
ಗೊಂದಲಗಳ ಗೂಡು   


ಭೂಗತ ವ್ಯಕ್ತಿಗಳು ಹಾಗೂ ಅವರ ಪ್ರೇಮವನ್ನು ವೈಭವೀಕರಿಸುವ ಮತ್ತೊಂದು ಸಿನಿಮಾ ಈವಾರ ತೆರೆಕಂಡಿದೆ. ಭೂಗತ ವ್ಯಕ್ತಿಗಳ ಬಗ್ಗೆ ಸಾಮಾನ್ಯ ಜನರಲ್ಲಿ ಇರುವ ಕುತೂಹಲ ಹಾಗೂ ಅದಕ್ಕೆ ಒಂದಿಷ್ಟು ಪ್ರೀತಿ-ಪ್ರೇಮಗಳ ಒಗ್ಗರಣೆ ಹಾಕಿ ಸಿನಿಮಾ ಮಾಡುವುದು ಬಾಲಿವುಡ್‌ನಲ್ಲಿ ವಾಡಿಕೆಯಾಗಿದೆ. ನಿರ್ದೇಶಕ ಸುಧೀರ್ ಮಿಶ್ರಾ ಅವರ ‘ಯೇ ಸಾಲಿ ಜಿಂದಗಿ’ ಸಿನಿಮಾ ಕೂಡ ಅದೇ ಜಾಡಿನ ಸಿನಿಮಾ.

ಶೀರ್ಷಿಕೆಯಲ್ಲಿರುವಂತೆ ಸಿನಿಮಾದ ಉದ್ದಕ್ಕೂ ಅಶ್ಲೀಲ ಪದಗಳ ಪ್ರಯೋಗ ಢಾಳವಾಗಿ ಕಾಣುತ್ತದೆ. ಉತ್ತರ ಭಾರತೀಯರ ಮಾತುಗಳಲ್ಲಿ ಅರ್ಧದಷ್ಟು ಪಾಲು ಬೈಗುಳಗಳೇ ಆಗಿರುತ್ತವೆ. ಈ ಸಿನಿಮಾದಲ್ಲೂ ಅದು ಎದ್ದು ಕಾಣುತ್ತದೆ. ಬೈಗುಳಗಳನ್ನು ತೆಗೆದುಹಾಕಿದರೆ ಚಿಟಿಕೆಯಷ್ಟೂ ಕಥೆ ಉಳಿಯುವುದು ಅನುಮಾನ.

ಎರಡು ಪ್ಲಾಟ್‌ಗಳಲ್ಲಿ ಸಿನಿಮಾ ಕಥಾಹಂದರವಿದೆ. ಗಾಯಕಿ ಪ್ರೀತಿ (ಚಿತ್ರಾಂಗದಾ ಸಿಂಗ್) ಕಡೆ ಆಕರ್ಷಿತನಾದ ಅರುಣ್ (ಇರ್ಫಾನ್ ಖಾನ್) ತನ್ನೆಲ್ಲ ಆಸ್ತಿ ಮಾರಾಟ ಮಾಡಿ ಅವಳನ್ನು  ಅಪಹರಣಕಾರರಿಂದ ರಕ್ಷಿಸಲು ಮುಂದಾಗುತ್ತಾನೆ. ತನ್ನ ಜೊತೆ ಪ್ರಿಯಕರ ಶ್ಯಾಮ್‌ನನ್ನೂ ರಕ್ಷಿಸುವಂತೆ  ಅವಳ ಮೊರೆ. ಈ ಶ್ಯಾಮ್ ಸಚಿವರೊಬ್ಬರ ಪುತ್ರಿಯ ಜೊತೆ ಸಪ್ತತುದಿ ತುಳಿಯಲು ಯೋಜನೆ ಹಾಕಿಕೊಂಡಿರುತ್ತಾನೆ. ಅಕ್ರಮವಾಗಿ ಪ್ರೀತಿಯ ಜೊತೆ ಸಂಬಂಧವಿಟ್ಟುಕೊಂಡಿರುತ್ತಾನೆ.

ಮತ್ತೊಂದೆಡೆ ಕುಲದೀಪ್ (ಅರುಣೋದಯ ಸಿಂಗ್) ಜೈಲಿನಲ್ಲಿರುವ ತನ್ನ ಮುಖಂಡನನ್ನು ಬಿಡಿಸಿಕೊಳ್ಳಲು ಸಚಿವರ ಪುತ್ರಿ ಹಾಗೂ ಭಾವಿ ಅಳಿಯ ಶ್ಯಾಮ್‌ನನ್ನು ಅಪಹರಿಸಲು ಯೋಜನೆ ಹಾಕಿಕೊಳ್ಳುತ್ತಾನೆ. ಯೋಜನೆಯಲ್ಲಿ ಏರುಪೇರಾಗಿ ಶ್ಯಾಮ್ ಜೊತೆ ಸಚಿವರ ಪುತ್ರಿ ಬದಲು ಪ್ರೀತಿಯನ್ನು ಅಪಹರಿಸುತ್ತಾನೆ. ತನ್ನ ಪತ್ನಿಗೆ ನೀಡಿದ ಮಾತಿನಂತೆ ಅಪಹರಣದ ಹಣ ಪಡೆದು ಅಪರಾಧ ಚಟುವಟಿಕೆಗಳಿಗೆ ವಿದಾಯ ಹೇಳುವ ಕನಸು ಕಾಣುತ್ತಾನೆ.

ಪ್ರೀತಿಯನ್ನು ಅಪಹರಣಕಾರರು ಬಿಡುಗಡೆಗೊಳಿಸುತ್ತಾರೆಯೇ? ಅವರಿಗೆ ಯಾರು ಹಣ ನೀಡುತ್ತಾರೆ? ಅರುಣ್ ಅಥವಾ ಶ್ಯಾಮ್ ಯಾರಿಗೆ ಪ್ರೀತಿ ಒಲಿಯುತ್ತಾಳೆ? ಕುಲದೀಪ್ ಅಪರಾಧ ಚಟುವಟಿಕೆಗಳಿಂದ ದೂರವಾಗುತ್ತಾನೆಯೇ? ಎನ್ನುವುದಕ್ಕೆ ಕ್ಲೈಮಾಕ್ಸ್‌ನಲ್ಲಿ ಉತ್ತರವಿದೆ.

ಮುಖ್ಯಪಾತ್ರದ ಜೊತೆ ಹಲವು ಇತರ ಪಾತ್ರಗಳಿಗೂ ಮಹತ್ವ ನೀಡಲಾಗಿದೆ. ಅರುಣ್‌ನ ಬಾಸ್ ಮೆಹ್ತಾ, ಭೂಗತ ಜಗತ್ತಿನ ‘ಬಡೇ’, ‘ಛೋಟೆ’ ಪಾತ್ರಗಳು, ಛೋಟೆಯ ಪಾತ್ರಧಾರಿಯ ಫ್ಯಾಷನ್ ಖಯಾಲಿ, ‘ಸುಪಾರಿ’ ಪಡೆದು ತನ್ನ ಸೋದರನಿಗೆ ಗುಂಡು ಹಾರಿಸುವ ಪಾತ್ರ, ಇನ್‌ಸ್ಪೆಕ್ಟರ್ ಪಾತ್ರಧಾರಿ,  ಕುಲದೀಪ್ ಮಗನ ಶಾಲೆಯ ರಾದ್ಧಾಂತ...

ಹೀಗೇ ಕಥೆ ಮುಖ್ಯ ದಾರಿ ಬಿಟ್ಟು ಕವಲುದಾರಿಗಳತ್ತ ಹೊರಳುತ್ತದೆ. ಹತ್ತಾರು ಪಾತ್ರಗಳ ಸೃಷ್ಟಿಯಿಂದ ಪ್ರೇಕ್ಷಕರು ಗೊಂದಲಕ್ಕೀಡಾಗುತ್ತಾರೆ. ‘ಯೇ ಸಾಲಿ  ಫಿಲ್ಮ್’ ಎಂದು ಬೈದುಕೊಂಡು ಚಿತ್ರಮಂದಿರದಿಂದ ಹೊರಬಂದರೆ ಆಶ್ಚರ್ಯವಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.