ADVERTISEMENT

ತಂಪಲ್ಲ, ತಂಗಾಳಿ ಕೂಡ ಅಲ್ಲ...

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2013, 19:59 IST
Last Updated 25 ಏಪ್ರಿಲ್ 2013, 19:59 IST

`ಅಲ್ಲರಿ ಅಲ್ಲರಿ', `ರಾಮದೇವ್', `ಸತ್ಯಮೇವ ಜಯತೆ'ಯಂಥ ತೆಲುಗು ಚಿತ್ರಗಳನ್ನು ನಿರ್ಮಿಸಿ ತಕ್ಕಷ್ಟು ಮನ್ನಣೆ ಪಡೆದವರು ಎಸ್.ಕೆ ಬಷೀದ್. ಅವರ ಬಹುತಾರಾಗಣದ ಚಿತ್ರ `ಬೆಂಕಿ ಬಿರುಗಾಳಿ' ಈ ವಾರ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ.

ಕನ್ನಡವನ್ನು ತಡವರಿಸುತ್ತಲೇ ಮಾತನಾಡುವ ಬಷೀದ್ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ ಎನ್ನುವುದು ಮೆಚ್ಚಲೇಬೇಕಾದ ಸಂಗತಿ. ನಮಿತಾ, `ಕಾದಲ್' ಸಂಧ್ಯಾ',  ರಿಷಿಕಾ ಸಿಂಗ್, ಬಾನು ವೆುಹ್ರಾ, ಮೋನಿಕಾ ಹೀಗೆ ನಟಿಯರ ದೊಡ್ಡ ಪಡೆಯೇ ಚಿತ್ರದಲ್ಲಿದೆ.

ಪೋಸ್ಟರ್‌ಗಳ ತುಂಬಾ ನಾಯಕರಂತೆ ರಾರಾಜಿಸುತ್ತಿರುವ ಬಷೀದ್ ನಿಜವಾಗಿಯೂ ಚಿತ್ರದಲ್ಲಿ ಖಳನಾಯಕ. ನಾಯಕನಟನಾಗಿ ಕಾಣಿಸಿಕೊಳ್ಳುತ್ತಿರುವುದು ತಮಿಳು ನಟ ರಿಷಿ. ಅಂದಹಾಗೆ ಅವರ ತಮಿಳಿನ ಪ್ರಖ್ಯಾತ ನಟ ಅಜಿತ್‌ರ ಹತ್ತಿರದ ಸಂಬಂಧಿ. ಚಿತ್ರದಲ್ಲಿ ರಿಷಿಕಾ ಸಿಂಗ್ ಅವರದ್ದು ಪ್ರತಿನಾಯಕಿಯ ಪಾತ್ರ. ಮೊದಮೊದಲು ಒಳ್ಳೆಯವರಂತೆ ಕಂಡರೂ ಆ ಪಾತ್ರದ ಗೋಮುಖ ವಾಘ್ರತನ ಚಿತ್ರದ ಹೈಲೈಟ್. ತ್ರಿಕೋನ ಪ್ರೇಮಕತೆ ಚಿತ್ರದ ವಸ್ತು. ಸಿನಿಮಾಕ್ಕಾಗಿ ಏಳು ಕೋಟಿ ರೂಪಾಯಿ ಬಂಡವಾಳ ಸುರಿಯಲಾಗಿದೆ.

ಕನ್ನಡದ ಮಟ್ಟಿಗೆ ಅದು ಕಡಿಮೆ ಮೊತ್ತವಲ್ಲ. ಹದಿನಾಲ್ಕು ಹೆಲಿಕಾಪ್ಟರ್‌ಗಳು ಚಿತ್ರಕ್ಕಾಗಿ ರೆಕ್ಕೆ ಬಿಚ್ಚಿವೆಯಂತೆ. ಚಿತ್ರಕ್ಕೆ ಎಂ.ಎಂ. ಶ್ರೀಲೇಖ ಅವರ ಸಂಗೀತವಿದೆ. ಸೆಲ್ವರಾಜ್, ಮಧು ನಾಯ್ಡು, ದಳಪತಿ ದಿನೇಶ್ ತಾಂತ್ರಿಕ ವರ್ಗದಲ್ಲಿ ಸಕ್ರಿಯರಾಗಿದ್ದಾರೆ.

ಊಹೆಗಳನ್ನು ಸುಳ್ಳಾಗಿಸುವ ಪಾತ್ರ ನನ್ನದು ಎಂದು ಮಾತಿಗಿಳಿದರು ರಿಷಿಕಾ. `ಗುಪ್ತ್' ಹಿಂದಿ ಚಿತ್ರದಲ್ಲಿ ಕಾಜೋಲ್ ನಿರ್ವಹಿಸಿದ ಪಾತ್ರದಂತೆಯೇ ಈ ಪಾತ್ರವೂ ಇದೆಯಂತೆ. ಅವರು ಚಿತ್ರಕ್ಕಾಗಿ ಹೊಡೆದಾಟದ ದೃಶ್ಯಗಳಲ್ಲೂ ಕಾಣಿಸಿಕೊಂಡಿದ್ದಾರಂತೆ.

ಅಂದಹಾಗೆ ಈ ಚಿತ್ರ ನಿರ್ಮಿಸುತ್ತಿರುವಾಗಲೇ ಬಷೀದ್ `ಯಾರಾದ್ರೆ ನಂಗೇನು?' ಚಿತ್ರಕ್ಕೆ ಕೈ ಹಾಕಿದ್ದರು. ಅದರಲ್ಲಿಯೂ ರಿಷಿಕಾ ಸಿಂಗ್ ಅವರಿಗೆ ಪ್ರಧಾನ ಪಾತ್ರ. ಆದರೆ ಅದರ ಪೋಸ್ಟರ್ ಭಾರಿ ವಿವಾದಕ್ಕೆ ಸಿಲುಕಿ ರಾಜ್ಯದೆಲ್ಲೆಡೆ ಚರ್ಚೆಗೆ ಗ್ರಾಸವಾಗಿತ್ತು. ವಿವಾದ ಚಿತ್ರ ತಯಾರಿಕೆಗೇನೂ ಭಂಗ ತಂದಿಲ್ಲವಂತೆ. ಇದು ಪೂರ್ಣಗೊಳ್ಳುತ್ತಲೇ ಅದನ್ನು ಕೈಗೆತ್ತಿಕೊಳ್ಳುವ ಉತ್ಸಾಹದಲ್ಲಿದ್ದಾರೆ ಬಷೀದ್.

`...ನಂಗೇನು'ವಿನ ಮುಖ್ಯಭೂಮಿಕೆಯಲ್ಲಿ ದುನಿಯಾ ವಿಜಯ್ ಮೆರೆಯಲಿದ್ದಾರೆ.ತೆಲುಗಿನಲ್ಲಿ ನಿರ್ಮಾಣ ಹಂತದಲ್ಲಿರುವ `ಫೈರ್'ಗೂ `...ಬಿರುಗಾಳಿ'ಗೂ ಭಾರಿ ವ್ಯತ್ಯಾಸವಿದೆ ಎಂದರು ಬಷೀದ್. ಅದಕ್ಕಾಗಿ ಅನೇಕ ಸಮರ್ಥನೆಗಳನ್ನೂ ನೀಡಿದರು. ಚಿತ್ರ ಹೊರಬಂದ ಮೇಲೆ ಸತ್ಯ ಕೂಡ ಹೊರಬೀಳಲಿದೆ ಎಂಬುದು ಸುದ್ದಿಗೋಷ್ಠಿಯಲ್ಲಿ ತೇಲಿ ಹೋದ ಸುದ್ದಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.