ADVERTISEMENT

ಥ್ರಿಲ್ಲರ್ ಡ್ರ್ಯಾಗನ್

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 19:30 IST
Last Updated 24 ಮಾರ್ಚ್ 2011, 19:30 IST

ಸಾಹಸ ಪ್ರಿಯರ ಮೈ ನವಿರೇಳಿಸುವ ಹೆಸರು ಸ್ಟಂಟ್ ಮಾಸ್ಟರ್ ಥ್ರಿಲ್ಲರ್ ಮಂಜು ಅವರದ್ದು. ಈ ಮಂಜು ಅವರ ಮೈ ನವಿರೇಳಿಸಿದ್ದು ಹಾಲಿವುಡ್‌ನ ‘ಎಂಟರ್ ದಿ ಡ್ರ್ಯಾಗನ್’. ಮಂಜು ಸಿನಿಮಾ ರಂಗಕ್ಕೆ ಬರುವ ಮನಸ್ಸು ಮಾಡಿದ್ದೇ ಈ ಚಿತ್ರದಿಂದ ಪ್ರಭಾವಿತರಾಗಿ. ಕಾಕತಾಳೀಯ ನೋಡಿ, ಈಗವರು ನಾಯಕನಾಗಿ ನಟಿಸುತ್ತಿರುವ ಚಿತ್ರದ ಹೆಸರು- ‘ಡ್ರ್ಯಾಗನ್’!

‘ಡ್ರ್ಯಾಗನ್’ ಚಿತ್ರಕ್ಕಾಗಿ ಮೈನವಿರೇಳಿಸುವ ನಾಲ್ಕು ಆ್ಯಕ್ಷನ್ ದೃಶ್ಯಗಳನ್ನು ಥ್ರಿಲ್ಲರ್ ಮಂಜು ನಿರ್ದೇಶಿಸಿದ್ದಾರಂತೆ. ಚಿತ್ರದಲ್ಲವರು ಪೊಲೀಸ್ ಅಧಿಕಾರಿ. ಕ್ಲೈಮ್ಯಾಕ್ಸ್ ತುಂಬಾ ವಿಭಿನ್ನವಾಗಿದೆ ಎಂದ ಅವರ ಮುಖದಲ್ಲಿ ಸಂತಸ ಇತ್ತು.ಇದುವರೆಗೂ ಜಾಹೀರಾತು ಮತ್ತು ಸಾಕ್ಷ್ಯಚಿತ್ರಗಳನ್ನು ನಿರ್ದೇಶಿಸಿದ್ದ ಮೌರ್ಯ ಅವರ ನಿರ್ದೇಶನದ ಚಿತ್ರ ಇದು. ಹತ್ತು ವರ್ಷಗಳ ತಮ್ಮ ಪ್ರಯತ್ನವೇ ಈ ಚಿತ್ರ ಎಂದಷ್ಟೇ ಹೇಳಿ ಸುಮ್ಮನಾದರು ಮೌರ್ಯ. ಅವರು ಸೈಲೆಂಟ್ ‘ಡ್ರ್ಯಾಗನ್’.

ಚಿತ್ರದ ಕತೆ ಬರೆದಿರುವ ಕೃಷ್ಣಮೂರ್ತಿ ಚಮರಂ- ‘ಥ್ರಿಲ್ಲರ್ ಮಂಜು ಇದ್ದಾರೆಂದ ಮಾತ್ರಕ್ಕೆ ಚಿತ್ರದಲ್ಲಿ ಸಾಹಸವನ್ನಷ್ಟೇ ಹೈಲೈಟ್ ಮಾಡಿಲ್ಲ.  ಕಾಮಿಡಿ, ಲವ್, ಸೆಂಟಿಮೆಂಟ್ ಕೂಡ ಇದೆ. ಡುಯೆಟ್, ಸೆಂಟಿಮೆಂಟ್, ಐಟಂ ಹಾಡುಗಳನ್ನು ನಾನು ಬರೆದಿದ್ದೇನೆ. ಈ ಸ್ವಮೇಕ್ ಚಿತ್ರಕ್ಕೆ ಎಲ್ಲರ ಸಹಕಾರ ಇರಲಿ’ ಎಂದರು. ಸಂಗೀತ ನಿರ್ದೇಶಕ ರಾಜ್ ಭಾಸ್ಕರ್ ತಮಿಳ್ಗನ್ನಡದಲ್ಲಿ ಹಾಡುಗಳು ಚೆನ್ನಾಗಿವೆ ಎಂದರು.ಲಹರಿ ಸಂಸ್ಥೆಯ ವೇಲು- ‘ಎಂಟರ್ ದಿ ಡ್ರ್ಯಾಗನ್’ ಚಿತ್ರದಂತೆ ಈ ಚಿತ್ರವೂ ಯಶಸ್ವಿಯಾಗಲಿ. ಚಿತ್ರದ ಹಾಡುಗಳು ಚೆನ್ನಾಗಿದ್ದರೆ ನಮಗೆ ದುಡ್ಡು ಬರುತ್ತದೆ. ಆ ನಿಟ್ಟಿನಲ್ಲಿ ಕೆಲಸ ಸಾಗಲಿ’ ಎಂದು ಸಲಹೆ ಇತ್ತರು.

ತಾವು ಚಿತ್ರದ ಎರಡನೇ ನಾಯಕ ಎಂದ ರವಿ ಚೇತನ್, ತಮ್ಮದು ನೆಗೆಟಿವ್ ಶೇಡ್ ಇರುವ ಪಾತ್ರವಾಗಿದ್ದರೂ ಕೊನೆಯಲ್ಲಿ ನಾಯಕನೊಂದಿಗೆ ಸೇರುತ್ತೇನೆ. ಥ್ರಿಲ್ಲರ್ ಜೊತೆ ಇದು ತಮ್ಮ ಎರಡನೇ ಚಿತ್ರ ಎಂದರು ಖುಷಿಯಿಂದ. ಖಳನ ಪಾತ್ರದಲ್ಲಿ ನಟಿಸಿರುವ ರವಿ ರೆಡ್ಡಿ ಅವರು ಥ್ರಿಲ್ಲರ್ ಅವರ ಮಟ್ಟಕ್ಕೆ ಆ್ಯಕ್ಷನ್ ಮಾಡುವುದು ಕಷ್ಟವಾಯಿತು ಎಂದು ಅನುಭವ ಹಂಚಿಕೊಂಡರು.

ವಿಷ್ಣುವರ್ಧನ್ ಅವರ ವೈಯಕ್ತಿಕ ವಸ್ತ್ರವಿನ್ಯಾಸಕರಾಗಿದ್ದ ವಲ್ಲಿ ಅವರು ಈ ಚಿತ್ರವನ್ನು ಕಷ್ಟಪಟ್ಟು ನಿರ್ಮಿಸಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಹಾಜರಿದ್ದ ಕೆ.ವಿ.ನಾಗೇಶ್ ಕುಮಾರ್ ಹೇಳಿ ಚಿತ್ರಕ್ಕೆ ಶುಭ ಕೋರಿದರು. ‘ಡ್ರ್ಯಾಗನ್’ಗೆ ಶುಭ ಹಾರೈಸಲು ಬಂದಿದ್ದವರಲ್ಲಿ ನಿರ್ಮಾಪಕ ಮದನ್ ಪಟೇಲ್ ಕೂಡ ಸೇರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.