ADVERTISEMENT

ದುಬಾರಿ ಹೊಡೆದಾಟ!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2013, 19:59 IST
Last Updated 7 ಫೆಬ್ರುವರಿ 2013, 19:59 IST
ಅನೂಪ್
ಅನೂಪ್   

ಸಾಹಸ ಸನ್ನಿವೇಶವೊಂದನ್ನು ಅದ್ದೂರಿಯಾಗಿ ಸೆರೆಹಿಡಿಯಲು ಐದು ಕ್ಯಾಮೆರಾಗಳೊಂದಿಗೆ ಸಜ್ಜಾಗಿದ್ದರು ಸಾಹಸ ನಿರ್ದೇಶಕ ಮಾಸ್ ಮಾದ. ರೋಚಕ ಹೊಡೆದಾಟದ ದೃಶ್ಯಗಳನ್ನು ನಿರ್ದೇಶಿಸಿದ್ದ ಅವರಿಗೆ ಐದು ಕ್ಯಾಮೆರಾ ಕಣ್ಣಿಗೆ ಏಟು ಎದಿರೇಟುಗಳನ್ನು ಒಪ್ಪಿಸುವುದು ಹೊಸ ಅನುಭವ.

ಕ್ಯಾಮೆರಾಗಳ ಬಗ್ಗೆ ಚಿಂತೆ ಇಲ್ಲದೆ ಅಭ್ಯಾಸದಲ್ಲಿ ಮಗ್ನರಾಗಿದ್ದರು ನಟ ಅನೂಪ್ ಗೋವಿಂದು. ಇಷ್ಟೊಂದು ಕ್ಯಾಮೆರಾ ಬಳಕೆ ಸಾಹಸದ ನಡುವೆ ಸಾಹಸ ದೃಶ್ಯ ಚಿತ್ರಿಸುವ ಪ್ರಯೋಗಕ್ಕೆ ಮುಂದಾದವರು ನಿರ್ದೇಶಕ ಸಂತು.

ಆರು ದಿನಗಳ ಚಿತ್ರೀಕರಣಕ್ಕೆ ಕ್ಯಾಮೆರಾಗಳ ಬಾಡಿಗೆ ಸೇರಿದಂತೆ ಎಲ್ಲಾ ಖರ್ಚುವೆಚ್ಚಗಳನ್ನೆಲ್ಲಾ ಲೆಕ್ಕಹಾಕಿದರೆ ಈ ಹೊಡೆದಾಟ ಬಲು ದುಬಾರಿ. ಇದೆಲ್ಲವನ್ನೂ ಉದ್ದೇಶಪೂರ್ವಕವಾಗಿಯೇ ಮಾಡುತ್ತಿದ್ದೇನೆ ಎನ್ನುವುದು ಸಂತು ಸಮರ್ಥನೆ. ಪ್ರತಿ ಹದಿನೈದು ನಿಮಿಷಕ್ಕೆ ಕಥೆಯ ಚಿತ್ರಣ ಬದಲಾಗುತ್ತಿರುತ್ತದೆ ಎಂದರು ಸಂತು. ಬೆಂಗಳೂರು, ಕೋಲಾರಗಳಲ್ಲಿ ಚಿತ್ರೀಕರಣ ನಡೆಸಲಾಗುತ್ತಿದೆ.

ADVERTISEMENT

ಇದುವರೆಗಿನ ಚಿತ್ರೀಕರಣ ಅನೂಪ್‌ಗೆ ಆತ್ಮವಿಶ್ವಾಸ ಮೂಡಿಸಿದೆ. ಮೊದಲ ಚಿತ್ರ ಎಂಬ ಭಾವನೆ ಉಂಟಾಗದಂತೆ ಚಿತ್ರತಂಡ ತಮ್ಮನ್ನು ನೋಡಿಕೊಂಡಿದೆ ಎಂಬ ಸಂತಸ ಅವರಲ್ಲಿತ್ತು. ದೃಶ್ಯವೊಂದಕ್ಕೆ 30 ಅಡಿ ಎತ್ತರದಿಂದ ಜಿಗಿದ್ದದ್ದನ್ನು ಅವರು ಹೇಳಿಕೊಂಡರು.

ಮಾತಿನ ಮತ್ತು ಸಾಹಸ ದೃಶ್ಯಗಳ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಒಂದು ಹಾಡನ್ನು ಈಗಾಗಲೇ ಚಿತ್ರೀಕರಿಸಿಕೊಳ್ಳಲಾಗಿದ್ದು, ಉಳಿದ ಹಾಡುಗಳಲ್ಲಿ ಅನೂಪ್ ಹೇಗೆ ಹೆಜ್ಜೆ ಹಾಕಲಿದ್ದಾರೆ ಎನ್ನುವುದನ್ನು ನೋಡಬೇಕೆಂಬ ಕುತೂಹಲ ಸಂತು ಅವರದು.

ನಟ ಶರತ್ ಲೋಹಿತಾಶ್ವ ಅವರಿಗೆ ನೆಗೆಟಿವ್ ಛಾಯೆಯ ಪಾತ್ರಗಳಿಂದ ವಿರಾಮ ನೀಡುವ ಪಾತ್ರ ದೊರೆತಿದೆ. ಕಥೆ ಮತ್ತು ಸಂಭಾಷಣೆ ಎರಡರಲ್ಲೂ ಒಳ್ಳೆಯ ಕಸುವು ಇದೆ ಎಂದರು ಅವರು. ತಮಿಳು ಖಳನಟ ಡೇನಿಯಲ್ ಬಾಲಾಜಿ ಮತ್ತು ನಾಯಕಿ ಅದಿತಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.