ADVERTISEMENT

ದುರ್ಗದಲ್ಲಿ ಶಿವ!

ಸಚ್ಚಿದಾನಂದ ಕುರಗುಂದ
Published 21 ಜೂನ್ 2012, 19:30 IST
Last Updated 21 ಜೂನ್ 2012, 19:30 IST
ದುರ್ಗದಲ್ಲಿ ಶಿವ!
ದುರ್ಗದಲ್ಲಿ ಶಿವ!   

ಚಿತ್ರದುರ್ಗಕ್ಕೂ ಕನ್ನಡ ಚಲನಚಿತ್ರ ರಂಗಕ್ಕೂ ಅವಿನಾಭವ ಸಂಬಂಧ. ಚಲನಚಿತ್ರದ ಜತೆಗಿನ ಈ ನಂಟು ಮತ್ತಷ್ಟು ಗಟ್ಟಿಯಾಗಿದೆ.ಮತ್ತೊಮ್ಮೆ ದುರ್ಗದ ನೆಲದಲ್ಲಿ ಸಂಭ್ರಮದ ಕಹಳೆ ಮೊಳಗಿತು. ಶಿವರಾಜ್‌ಕುಮಾರ್ ಅಭಿನಯದ `ಶಿವ~ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ ಸಮಾರಂಭ ಇಂತಹ ಅದ್ದೂರಿತನಕ್ಕೆ ಸಾಕ್ಷಿಯಾಯಿತು.
 
ಈ ಹಿಂದೆ ಶಿವರಾಜ್‌ಕುಮಾರ್ ಅವರ ಜೋಗಿ, ಮೈಲಾರಿ ಚಲನಚಿತ್ರಗಳ ಧ್ವನಿಸುರುಳಿಗಳು ಇದೇ ನೆಲದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿದ್ದವು. ಇದೇ ನಂಬಿಕೆಯಲ್ಲಿ ಸಾಗಿದ ಚಿತ್ರರಂಗ ತಂಡ ದುರ್ಗದ ನೆಲಕ್ಕೆ ಆಗಮಿಸಿ ಸಂಭ್ರಮಿಸಿತು.

ಅಭಿಮಾನಿಗಳಿಂದ ಕಿಕ್ಕಿರಿದು ತುಂಬಿದ್ದ ಚಿತ್ರದುರ್ಗದ ಹಳೇ ಮಾಧ್ಯಮಿಕ ಶಾಲಾ ಆವರಣದ ಮೈದಾನ ನೃತ್ಯ, ಮಿಮಿಕ್ರಿ ಹಾಗೂ ತಾರಾಗಣದ ಮಾತಿನ ಸುರಿಮಳೆಯಾಯಿತು. ಶಿವರಾಜ್‌ಕುಮಾರ್ ಹೆಜ್ಜೆಗೆ ಅಭಿಮಾನಿಗಳು ಸಾಥ್ ನೀಡಿ ಕುಣಿದು ಕುಪ್ಪಳಿಸಿದರು. ಆರಂಭದಲ್ಲಿ ವರುಣನ ಸಿಂಚನವಾದರೂ ಅಭಿಮಾನಿಗಳು ಕುಗ್ಗಲಿಲ್ಲ.

ಚಪ್ಪಾಳೆ, ಶಿಳ್ಳೆಗಳು ಮೊಳಗಿದವು. ಸಮಾರಂಭದಲ್ಲಿ ಶಿವಣ್ಣನ ಬಾಲ್ಯದಿಂದ ಯೌವನದ ಜೀವನದ ಮಹತ್ವದ ಘಟನೆಗಳನ್ನು ಮೆಲುಕು ಹಾಕಲಾಯಿತು. ನಟ ಉಪೇಂದ್ರ `ಶಿವ~ ಚಲನಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿದರು.

ನಟ ಶಿವರಾಜಕುಮಾರ್, ಗೀತಾ ಶಿವರಾಜ್‌ಕುಮಾರ್, ನಟಿ ರಾಗಿಣಿ, ನಿರ್ದೇಶಕ ಓಂಪ್ರಕಾಶ್, ನಿರ್ಮಾಪಕರಾದ ಕೆ.ಪಿ. ಶ್ರೀಕಾಂತ ಹಾಗೂ ಚಿತ್ರದುರ್ಗದ ಬಿ. ಕಾಂತರಾಜ್, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ನಟ ಯಶ್, ದುನಿಯಾ ವಿಜಿ, ಪಂಕಜ್, ಸಂಗೀತ ನಿರ್ದೇಶಕ ಗುರುಕಿರಣ್, ನಿರ್ಮಾಪಕರಾದ ಸಾ.ರಾ. ಗೋವಿಂದು, ರೆಹಮಾನ್ ಬಾಷಾ, ಆರ್. ಶ್ರೀನಿವಾಸ್ ಹಾಗೂ ಚಿತ್ರರಂಗದ ಗಣ್ಯರು, ಜನಪ್ರತಿನಿಧಿಗಳು ಈ ಸಂಭ್ರಮಕ್ಕೆ ಸಾಕ್ಷಿಯಾದರು.

ನಟ ದುನಿಯಾ ವಿಜಯ್ `ಪ್ರೊಮೊ~ ಬಿಡುಗಡೆ ಮಾಡಿದರು.ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಚಲನಚಿತ್ರ ನಟರು ಡಬ್ಬಿಂಗ್ ವಿರೋಧಿ ಕಹಳೆ ಮೊಳಗಿಸಿದರು. ನಟ ಶಿವರಾಜ್‌ಕುಮಾರ್, ಕನ್ನಡ ಚಲನಚಿತ್ರರಂಗ ಯಾವುದರಲ್ಲಿ ಕಡಿಮೆ ಇದೆ? ನಮಗೆ ಡಬ್ಬಿಂಗ್ ಏಕೆ ಬೇಕು? ಡಬ್ಬಿಂಗ್ ವಿರೋಧಿ ಹೋರಾಟ ನನ್ನೊಬ್ಬನಿಂದಲೇ ನಡೆಯುವುದಿಲ್ಲ. ನಿಮ್ಮೆಲ್ಲರ ಪ್ರೋತ್ಸಾಹ, ಬೆಂಬಲ ಬೇಕು.

ಇದು ಎಲ್ಲರ ಹೋರಾಟವಾಗಬೇಕು ಎಂದು ಅಭಿಮಾನಿಗಳಿಗೆ ಕರೆ ನೀಡಿದರು. ಶಿವಣ್ಣನ ಈ ಕರೆಗೆ ನಟರಾದ ಉಪೇಂದ್ರ, ರಂಗಾಯಣ ರಘು ದನಿಗೂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.