ADVERTISEMENT

ದುಷ್ಟ ಡಬ್ಬಿಂಗ್ ಕಷ್ಟ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2011, 19:30 IST
Last Updated 17 ಮಾರ್ಚ್ 2011, 19:30 IST

ಇದು ಹೊಸಅಲೆಯ ಚಿತ್ರವಾಗುತ್ತೆ. ನನ್ನ ನಿರ್ದೇಶನದ ಚಿತ್ರಗಳಲ್ಲೇ ಬಹಳಷ್ಟು ಭಿನ್ನ ಎಂದು ನಿರ್ದೇಶಕ ಎಸ್.ನಾರಾಯಣ್ ಸಿಪಾಯಿಯ ಧಾಟಿಯಲ್ಲಿ ಹೇಳಿದರು. ಅವರ ಮಾತುಗಳಲ್ಲಿ ಗುಂಡು ಹೊರಹೊಮ್ಮುವಷ್ಟೇ ಆತ್ಮವಿಶ್ವಾಸ.

‘ದುಷ್ಟ’ ಚಿತ್ರೀಕರಣ ಮುಗಿಸಿಕೊಂಡು ಬಂದಿರುವ ಅವರೀಗ ಡಬ್ಬಿಂಗ್ ಕೆಲಸಕ್ಕೆ ಅಂತಿಮ ಟಚ್ ಕೊಡುವುದರಲ್ಲಿ ನಿರತರು. 41 ದಿನ ನಡೆದ ಶೂಟಿಂಗ್ ಒಡ್ಡಿದ ಸವಾಲುಗಳಲ್ಲಿ ಅವರು ಮಿಂದಿದ್ದರು. ಭದ್ರಾವತಿ, ತೀರ್ಥಹಳ್ಳಿ, ಸಂಡೂರು, ಆಗುಂಬೆ ಮೊದಲಾದ ಕಡೆ ಚಿತ್ರರಂಗದ ಗಂಧವೇ ಗೊತ್ತಿಲ್ಲದ ನಟ-ನಟಿಯರನ್ನು ಕಟ್ಟಿಕೊಂಡು ಅವರು ಏಗಿ ಬಂದಿದ್ದಾರೆ. ತಮ್ಮ ಬಾಲ್ಯದ ಗೆಳೆಯನ ನಿಜಕಥೆಯನ್ನೇ ಸಿನಿಮಾ ಮಾಡಿರುವುದರಿಂದ, ಬದುಕಿನ ಆ ಘಟನೆಗಳು ಎಲ್ಲೆಲ್ಲಿ ನಡೆದಿದ್ದವೋ ಅಲ್ಲೇ ಹೋಗಿ ಚಿತ್ರೀಕರಿಸಿಕೊಂಡಿರುವುದನ್ನು ಅವರು ಹೆಮ್ಮೆಯಿಂದ ಹೇಳಿಕೊಂಡರು.
ಚಿತ್ರದ ಮೊದಲ ರಶಸ್ ನೋಡಿದ್ದೇ ಅವರಿಗೆ ಮತ್ತೆ ಆ ಬಾಲ್ಯದ ಗೆಳೆಯನ ನೆನಪಾಗಿದೆ. ಸಣ್ಣಪುಟ್ಟ ಘಟನೆಗಳೂ ಕಾಡಿವೆ. ಆ ಪಾತ್ರದಲ್ಲಿ ನಟಿಸಿರುವ ಪಂಕಜ್ ಈಗ ನಾರಾಯಣ್ ಅವರ ಮಗನಷ್ಟೇ ಆಗಿಲ್ಲ; ತಮ್ಮ ಗೆಳೆಯ ಕೂಡ ಆ ಮುಖದಲ್ಲಿ ಕಾಣುತ್ತಿದ್ದಾರೆ.

ಪಂಕಜ್‌ನನ್ನು ನಾಯಕನಾಗಿ ಮಾಡುವ ಉದ್ದೇಶ ಮೊದಲಿಗೆ ಇರಲಿಲ್ಲವಂತೆ. ನೂರೆಂಬತ್ತು ಹುಡುಗರನ್ನು ಆಡಿಷನ್ ಮಾಡಿದರೂ ಯಾರೂ ನಾಯಕನ ಪಾತ್ರಕ್ಕೆ ಅರ್ಹ ಎನ್ನಿಸಲಿಲ್ಲ. ಅನಿವಾರ್ಯವಾಗಿ ಪಂಕಜ್‌ಗೂ ಆಡಿಷನ್ ಮಾಡಬೇಕಾಗಿಬಂತು. ಅದರಲ್ಲಿ ಪಂಕಜ್ ನೂರೆಂಬತ್ತು ಜನರನ್ನು ಹಿಂದಿಕ್ಕಿ ಪಾಸಾದ ಎಂದು ನಾರಾಯಣ್ ಸರ್ಟಿಫಿಕೇಟ್ ಕೊಟ್ಟರು.

ಹೊಸ ವರ್ಷದ ಸಂಭ್ರಮದ ಮೂಡಿನಲ್ಲಿದ್ದ ಪಂಕಜ್‌ಗೆ ‘ದುಷ್ಟ’ ಚಿತ್ರದ ನಾಯಕ ತಾವೇ ಎಂಬುದು ಗೊತ್ತಾಗಿದ್ದೇ ಅಂಬರೀಷ್ ಮನೆಯಲ್ಲಿ. ತಕ್ಷಣ ಅಂಬರೀಷ್ ಆಶೀರ್ವಾದ ಪಡೆದುಕೊಂಡು ಬಂದು ಮೇಕಪ್ ಹಚ್ಚಿದ ಹುಡುಗನಿಗೆ ಸೆಟ್‌ನಲ್ಲಿ ಅನೇಕ ಸಲ ಅಪ್ಪನಿಂದ ಬೈಗುಳ ಸಿಕ್ಕಿದೆ. ಹಾಗೆ ಬೈಯಿಸಿಕೊಂಡು ಮಾಡಿದ ದೃಶ್ಯಗಳೆಲ್ಲಾ ಚೆನ್ನಾಗಿ ಬಂದಿವೆ ಎಂದು ನಾರಾಯಣ್ ಮಗನ ಕಡೆಗೆ ನೋಟ ಬಿರಿದರು.

ಕ್ಲೈಮ್ಯಾಕ್ಸ್ ಅನ್ನು ಮಾತ್ರ ತಾವು ಸೃಷ್ಟಿಸಿರುವುದಾಗಿ ಹೇಳಿದ ನಾರಾಯಣ್, ಡಬ್ಬಿಂಗ್‌ಗೆಂದು ನಡೆಸಿದ ಹೆಣಗಾಟವನ್ನು ಬಣ್ಣಿಸಿದರು. ಚಿತ್ರದ ಸಂಭಾಷಣೆಯಲ್ಲಿರುವುದು ಕೊಳ್ಳೆಗಾಲದ ಕನ್ನಡ. ಹಾಗಾಗಿ ಆ ಪ್ರದೇಶಗಳಿಂದಲೇ ಡಬ್ಬಿಂಗ್ ಮಾಡಲು ಜನರನ್ನು ಅವರು ಹುಡುಕಿದ್ದಾರೆ. ಹಳ್ಳಿಯ ಮುಗ್ಧರಿಗೆ ಡಬ್ಬಿಂಗ್ ನಡೆಯುವುದು ಕತ್ತಲಕೋಣೆಯಲ್ಲಿ ಎಂಬುದು ಗೊತ್ತಿರುವುದಿಲ್ಲವಲ್ಲ. ಅದಕ್ಕೇ ಕೆಲವರು ಕತ್ತಲು ಕಂಡು ಹೆದರಿ ಓಡಿಹೋಗಿದ್ದೂ ಉಂಟು. ಮಹಿಳೆಯೊಬ್ಬರನ್ನು ಕರೆತರಲು ಹೋದರೆ, ಅವರ ಕುಟುಂಬದವರೆಲ್ಲಾ ಕಾವಲಿಗೆ ಬಂದರಂತೆ. ಡಬ್ಬಿಂಗ್ ಕೋಣೆಗೆ ಒಬ್ಬರೇ ಬರಬೇಕು ಎಂದರೆ, ಅನುಮಾನದಿಂದ ನೋಡಿ ಆಗೋಲ್ಲ ಎಂದ ಮುಗ್ಧರು ಅವರು. ಇಂಥಾ ಜನರ ಮನವೊಲಿಸಿ ಈಗಾಗಲೇ 16 ದಿನ ನಾರಾಯಣ್ ಡಬ್ಬಿಂಗ್ ಮುಗಿಸಿದ್ದಾರೆ. ಇನ್ನೂ ನಾಲ್ಕೈದು ದಿನದ ಕೆಲಸ ಬಾಕಿ ಇದೆ.

ನಾಯಕ ಪಂಕಜ್‌ಗೆ ಡಬ್ಬಿಂಗ್ ಮಾಡುವಾಗಲೇ ಈ ಚಿತ್ರ ಚೆನ್ನಾಗಿ ಬಂದಿದೆ ಎಂಬುದು ಮನದಟ್ಟಾಗಿದೆ.  ಕೊಟ್ಟ ಮಾತಿನಂತೆ ಶೂಟಿಂಗ್ ಮುಗಿದ ನಂತರ ಒಂಚೂರು ಕನ್ನಡದಲ್ಲಿ ಮಾತನಾಡಿದವರು ನಾಯಕಿ ಸುರಭಿ. ಒಳ್ಳೆಯ ಅವಕಾಶ ಸಿಕ್ಕಿದ್ದಕ್ಕೆ ಸುಖಿಸಿದ ಅವರಲ್ಲೂ ಚಿತ್ರದ ಬಗ್ಗೆ ನಿರೀಕ್ಷೆಗಳು ಮಡುಗಟ್ಟಿವೆಯಂತೆ.

ತಮ್ಮ ಕನಸನ್ನು ಕ್ಯಾಮೆರಾ ಮೂಲಕ ಸಾಕಾರ ಮಾಡಿದ ಜಗದೀಶ್ ವಾಲಿ ಕುರಿತು ನಾರಾಯಣ್ ಮೆಚ್ಚುಗೆ ಮಾತುಗಳು ಹರಿದವು.

ಮುಂದಿನ ತಿಂಗಳು ಚಿತ್ರದ ಆಡಿಯೋ ಬಿಡುಗಡೆ. ಐಪಿಎಲ್ ಕ್ರಿಕೆಟ್ ಮುಗಿದ ನಂತರ ಬಿಡುಗಡೆ. ‘ದುಷ್ಟ ಅಂದರೆ ಎಲ್ಲರಿಗೂ ದುಷ್ಟ ಅಲ್ಲ... ಅದು ಇಷ್ಟ’ ಎಂದು ಪಿಸುದನಿಯಲ್ಲೇ ನಾರಾಯಣ್ ಪನ್ ಮಾಡಿದರು.

ಸುರಭಿ ಪಂಕಜ್  ಎಸ್.ನಾರಾಯಣ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.