ADVERTISEMENT

ನಮಿತಾ ನೀತಿಬೋಧೆ

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2011, 19:30 IST
Last Updated 31 ಮಾರ್ಚ್ 2011, 19:30 IST
ನಮಿತಾ ನೀತಿಬೋಧೆ
ನಮಿತಾ ನೀತಿಬೋಧೆ   

ನಮಿತಾ ಕಾಲೇಜಿನಲ್ಲಿ ಯೋಗ ಶಿಕ್ಷಕಿ. ಅಂದಮೇಲೆ ಖಂಡಿತ ಯೋಗ ಹೇಳಿಕೊಡುತ್ತಾರೆ. ಕಾಲೇಜು ಪ್ರೇಮಿಗಳಿಗೆ ಅವರು ನೀತಿಪಾಠವನ್ನೂ ಬೋಧಿಸುತ್ತಾರೆ. ಅಷ್ಟೇ ಅಲ್ಲ, ಮಾದಕದ್ರವ್ಯ ಜಾಲದ ವಿರುದ್ಧ ಹೋರಾಟವನ್ನೂ ಮಾಡುತ್ತಾರೆ ಅರ್ಥಾತ್ ಅಕ್ಷರಶಃ ದೈಹಿಕ ಹೋರಾಟ! ಇಂಥದೊಂದು ಕಥೆಯನ್ನು ಒಳಗೊಂಡಿರುವ ‘ನಮಿತಾ ಐ ಲವ್ ಯೂ’ ಚಿತ್ರ ಈಗ ಸಿದ್ಧಗೊಂಡಿದೆ.

ರೇವಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ನಿಟ್ಟೆ ಮೀನಾಕ್ಷಿ ಎಂಜಿನಿಯರಿಂಗ್ ಕಾಲೇಜು, ಸಂಭ್ರಮ ಕಾಲೇಜು, ಸಂಭ್ರಮ ರೆಸಾರ್ಟ್ ಮೊದಲಾದ ಸ್ಥಳಗಳಲ್ಲಿ ‘ನಮಿತಾ ಟೀಚರ್’ ಕಾರ್ಯವೈಖರಿಯನ್ನು ನಿರ್ದೇಶಕ ಜಯಸಿಂಹ ರೆಡ್ಡಿ ಚಿತ್ರೀಕರಿಸಿದ್ದಾರೆ. ಕಥೆ, ಚಿತ್ರಕಥೆ, ಸಂಗೀತ ಎಲ್ಲವೂ ಅವರದ್ದೇ. ಏಳು ಹಾಡುಗಳು ಚಿತ್ರದಲ್ಲಿವೆ. ಮುಂದಿನ ತಿಂಗಳು ಆಡಿಯೋ ಬಿಡುಗಡೆ ಮಾಡುವುದು ಅವರ ಉದ್ದೇಶ. 40 ದಿನಗಳಲ್ಲಿ ಚಿತ್ರೀಕರಣ ಮುಗಿದಿದ್ದು, ನಮಿತಾ ಅಭಿಮಾನಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡೇ ಚಿತ್ರವನ್ನು ರೂಪಿಸಲಾಗಿದೆ.

ರಮೇಶ್ ಚಂದ್ರ, ರಾಜೇಶ್ ಕೃಷ್ಣ, ಚೈತ್ರಾ, ಅನುರಾಧಾ ಭಟ್ ಹಾಗೂ ಧನಂಜಯ ಹಾಡುಗಳನ್ನು ಹಾಡಿದ್ದಾರೆ. ಹೈದರಾಬಾದ್‌ನಲ್ಲಿ ಒಂದು ಹಾಡನ್ನು ಚಿತ್ರೀಕರಿಸಿರುವ ಜಯಸಿಂಹ ರೆಡ್ಡಿ ಪ್ರಕಾರ ಚಿತ್ರದಲ್ಲಿ ಯುವಜನತೆಗೆ ಇಷ್ಟವಾಗುವ ಅಂಶಗಳು ದಟ್ಟವಾಗಿವೆ. ಆದರೆ, ಅವು ಯುವಕರ ದಾರಿತಪ್ಪಿಸುವುದಿಲ್ಲ ಎಂಬುದು ಅವರ ನಂಬಿಕೆ. ಪೃಥ್ವಿರಾಜ್ ಗೊಲ್ಲಹಳ್ಳಿ ಶಿವಪ್ರಕಾಶ್, ಕವಿತಾ, ಅನು, ಟೆನ್ನಿಸ್ ಕೃಷ್ಣ, ಬ್ಯಾಂಕ್ ಜನಾರ್ದನ್ ಮೊದಲಾದವರು ತಾರಾಗಣದಲ್ಲಿರುವ ಈ ಚಿತ್ರ ದಿವಾಕರ್ ಕ್ಯಾಮೆರಾ ಕಣ್ಣಿನಿಂದ ಮೂಡಿದೆ. ಥ್ರಿಲ್ಲರ್ ಮಂಜು ನಮಿತಾ ಅವರಿಂದಲೂ ಸಾಹಸ ಮಾಡಿಸಿದ್ದಾರೆ. ರವಿತೇಜ ರೆಡ್ಡಿ ಎಂ. ಚಿತ್ರದ ಮೇಲೆ ಬಂಡವಾಳ ಹೂಡಿದ್ದಾರೆ.

ಚಿತ್ರದಲ್ಲಿ ಅಧ್ಯಾಪಕನ ಪಾತ್ರ ನಿರ್ವಹಿಸಿರುವ ಬ್ಯಾಂಕ್ ಜನಾರ್ದನ್ ಹಾಗೂ ಪ್ರಿನ್ಸಿಪಾಲರ ಪಾತ್ರದಲ್ಲಿ ನಟಿಸಿರುವ ಗೊಲ್ಲಹಳ್ಳಿ ಶಿವಪ್ರಕಾಶ್ ಅವರಿಗೆ ಚಿತ್ರದ ಕಥಾನಕಗಳು ಚೆನ್ನಾಗಿ ಮೂಡಿಬಂದಿರುವ ವಿಶ್ವಾಸವಿದೆ. ನಿಜವಾದ ಬದುಕಿನಲ್ಲಿ ಚಿತ್ರದಲ್ಲಿರುವಂಥ ವಿದ್ಯಾರ್ಥಿ ತಾವಾಗುವುದಿಲ್ಲ ಎಂದು ಪೃಥ್ವಿರಾಜ್ ಹೇಳಿದ್ದು ಸಿನಿಮಾದಲ್ಲಿ ಅವರದ್ದು ನೆಗೆಟಿವ್ ಶೇಡ್ ಇರುವ ಪಾತ್ರ ಎಂಬುದನ್ನು ಪರೋಕ್ಷವಾಗಿ ಸಾರುವಂತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.