ನಿರ್ದೇಶಕ ನಾಗಶೇಖರ್ ತಮ್ಮ ನಾಲ್ಕು ವರ್ಷಗಳ ಕನಸು ಈಡೇರಿದ ಸಂತಸದಲ್ಲಿದ್ದರು. ‘ನನ್ನ ನಿರ್ದೇಶನದ ‘ಸಂಜು ವೆಡ್ಸ್ ಗೀತಾ’ ಸಿನಿಮಾ ಏ.1ರಂದು ಬಿಡುಗಡೆಯಾಗುತ್ತಿದೆ. ಅದಕ್ಕೆ ಕೆಲವರು ಏಪ್ರಿಲ್ ಫೂಲ್ ಮಾಡುತ್ತಿರುವಿರಿ ಎಂದರು. ಅದರಲ್ಲಿ ನಮ್ಮದೂ ತಪ್ಪಿದೆ. ಹಲವು ಬಾರಿ ಬಿಡುಗಡೆಯ ದಿನಾಂಕ ತಿಳಿಸಿ ಮುಂದೂಡಿದ್ದೆವು. ಈ ಬಾರಿ ಹಾಗೆ ಮಾಡುವುದಿಲ್ಲ. ಬಿಡುಗಡೆ ಮಾಡಿಯೇ ತೀರುತ್ತೇವೆ’ ಎಂದರು.
‘ಹೌದು, ಈ ಸಲ ಬಿಡುಗಡೆ ಮುಂದೂಡುವ ಮಾತೇ ಇಲ್ಲ’ ಎಂದು ನಿರ್ಮಾಪಕ ಮುರಳಿ ಮೋಹನ್ ದನಿಗೂಡಿಸಿದರು. ‘ಎರಡು ವರ್ಷ ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ನಾಗಶೇಖರ್ ಇಡೀ ಚಿತ್ರವನ್ನು ಹೆಗಲ ಮೇಲೆ ಹೊತ್ತು ಬದುಕನ್ನೇ ತ್ಯಾಗ ಮಾಡಿ ಸಿನಿಮಾ ಮಾಡಿದ್ದಾರೆ’ ಎಂದು ಮುರಳಿ ಭಾವುಕರಾಗಿ ಹೇಳಿದರು.
ನಾಯಕ ಶ್ರೀನಗರ ಕಿಟ್ಟಿ ಅವರಿಗೆ ಚಿತ್ರದಲ್ಲಿ ಅಂದುಕೊಂಡ ಫೀಲ್ ಕಾಣಿಸಿದೆಯಂತೆ. ‘ನಾಗಶೇಖರ್ ಮತ್ತು ಸತ್ಯ ಹೆಗಡೆ ಅವರ ಶ್ರಮ ಸಾರ್ಥಕವಾಗಿದೆ. ಟೈಟಲ್ ಹಾಡಿಗಿಂತಲೂ ಹೆಚ್ಚು ಖುಷಿ ಚಿತ್ರದಲ್ಲಿದೆ. ‘ಗಗನವೇ ಬಾಗಿ..’ ಹಾಡನ್ನು ಟರ್ಕಿಯಲ್ಲಿ ಚಿತ್ರೀಕರಿಸುವ ಪ್ಲಾನ್ ಹಾಕಿದ್ದೆವು. ಸತ್ಯ ಹೆಗಡೆ ಬೀದರ್‌ನಲ್ಲಿ ಮಾಡುವ ಸಲಹೆ ನೀಡಿದರು. ಅದರಂತೆ ಸಮಾಧಿಗಳ ನಡುವೆ ಚಿತ್ರೀಕರಣ ಮಾಡಿದೆವು. ಚೆನ್ನಾಗಿ ಬಂದಿದೆ’ ಎಂದರು ಕಿಟ್ಟಿ.
‘ಹಾಡಿಗಿಂತ ಸಿನಿಮಾ ಡಬಲ್ ಖುಷಿ ಕೊಡುತ್ತೆ. ಈ ರೀತಿ ಪ್ರತೀ ಸಿನಿಮಾಗಳನ್ನು ನಿರ್ದೇಶಕ ಪ್ರೀತಿಸಿದರೆ ಸಿನಿಮಾ ಚೆನ್ನಾಗಿ ಬರುತ್ತೆ’ ಎನ್ನುವುದು ಛಾಯಾಗ್ರಾಹಕ ಸತ್ಯ ಹೆಗಡೆ ಅವರ ಅಭಿಪ್ರಾಯ.ನಾಗಶೇಖರ್ ಕೂಡ ಚಿತ್ರದ ಗೀತೆಗಳ ಬಗ್ಗೆ ಪ್ರೀತಿಯಿಂದ ಮಾತನಾಡಿದರು. ‘ಜನ ಚಿತ್ರದ ಹಾಡುಗಳನ್ನು ಇಷ್ಟಪಡುತ್ತಿದ್ದಾರೆ. ‘ಜಾಕಿ’ ನಂತರ ಹೆಚ್ಚು ಡೌನ್‌ಲೋಡ್ ಆದ ಹಾಡುಗಳು ‘ಸಂಜು..’ ಚಿತ್ರದವು. ವಿದೇಶಿಯರು ಕೂಡ ಹಾಡನ್ನು ಇಷ್ಟಪಟ್ಟಿದ್ದಾರೆ. ಇದರಿಂದಾಗಿ ಹಾಡಿನ ಕಲ್ಪನೆ, ಕನಸು, ಶ್ರಮ ಸಾರ್ಥಕವಾಯಿತು. ಹಾಡು ಬರೆದ ಕವಿರಾಜ್, ನಾಗೇಂದ್ರ ಪ್ರಸಾದ್ ಮತ್ತು ಸಂಗೀತ ನಿರ್ದೇಶಕ ಜೆಸ್ಟಿಗಿಫ್ಟ್‌ಗೆ ವಂದನೆಗಳು’ ಎಂದರು.
ನಾಯಕಿ ರಮ್ಯಾ ವೇದಿಕೆಗೆ ಬಂದೊಡನೆ, ನಾಗಶೇಖರ್ ಅವರ ಗುಣಗಾನ ಆರಂಭಿಸಿದರು. ‘ರಮ್ಯಾ ಅವರ ಹೊಂದಾಣಿಕೆ ಗುಣವನ್ನು ಗೌರವಿಸಿ ಪೋಸ್ಟರ್‌ನಲ್ಲಿ ಹೆಸರು ಹಾಕಿದ್ದೇವೆ. ಅವರು ಮಳೆಯಲ್ಲಿ ನೆನೆಯುತ್ತಿದ್ದ ತಂಡದ ಹುಡುಗರಿಗೆ 113 ಜಾಕೆಟ್ ತಂದುಕೊಟ್ಟರು. ಎಷ್ಟೇ ಬಿಜಿ ಇದ್ದರೂ ನನ್ನ ಚಿತ್ರಕ್ಕಾಗಿ ಡೇಟ್ ಕೊಟ್ಟರು’ ಎಂದರು.ರಮ್ಯಾ ಅವರಿಗೆ ‘ಸಂಜು..’ ಮನಸ್ಸಿಗೆ ಹತ್ತಿರವಾದ ಸಿನಿಮಾವಂತೆ. ಗೀತಾ ಪಾತ್ರ ಕಷ್ಟವಾಗಿದ್ದರೂ ಎಲ್ಲರ ಸಹಕಾರದಿಂದ ಅದನ್ನು ನಿಭಾಯಿಸಿದ್ದಾಗಿ ಹೇಳಿಕೊಂಡರು.
‘ಹಾಡಿನ ಪಲ್ಲವಿ ಚೆನ್ನಾಗಿದ್ದರೆ ಸಾಕು. ಚರಣ ಯಾರಿಗೆ ಬೇಕು ಎನ್ನುವವರೇ ಜಾಸ್ತಿ. ಆದರೆ ‘ಸಂಜು ವೆಡ್ಸ್ ಗೀತಾ’ ಚಿತ್ರಕ್ಕಾಗಿ ನಾನು ಬರೆದ ಹಾಡುಗಳ ಪಲ್ಲವಿ, ಚರಣ ಎರಡೂ ಮೆಚ್ಚುಗೆ ಪಡೆಯುತ್ತಿವೆ. ಜನ ಸಾಲುಸಾಲಿನ ಅರ್ಥವನ್ನೂ ಮೆಚ್ಚಿ ಸಂದೇಶ ಕಳುಹಿಸುತ್ತಿದ್ದಾರೆ. ನನ್ನ ಹಾಡಿನ ಚರಣಗಳನ್ನೂ ಜನ ಇಷ್ಟಪಡಬೇಕೆಂಬ ಆಸೆ ಈ ಚಿತ್ರದಲ್ಲಿ ಈಡೇರಿದೆ. ನಾ ಬರೆದ ಹಾಡನ್ನು ಭಾರತದ ಸಂಸ್ಕೃತಿ ಜೊತೆ ತುಲನೆ ಮಾಡುತ್ತಿರುವುದು ನನ್ನಲ್ಲಿ ಧನ್ಯತಾಭಾವ ಮೂಡಿಸಿದೆ’ ಎಂದು ಎತ್ತರದ ದನಿಯಲ್ಲಿ ಕವಿರಾಜ್ ಮನದಾಳದ ಸಂತಸ ಹಂಚಿಕೊಂಡರು.ನಾಗೇಂದ್ರ ಪ್ರಸಾದ್ ಅವರು ಕೂಡ ಕವಿರಾಜ್ ಹಾಡುಗಳನ್ನು ಮೆಚ್ಚಿಕೊಂಡು ತಾವು ಬರೆದಿರುವ ಹಾಡುಗಳು ಲಘುಧಾಟಿಯಲ್ಲಿವೆ. ಇನ್ನೂ ಆ ಹಾಡುಗಳು ಟೀವಿಯಲ್ಲಿ ಪ್ರಸಾರವಾಗುತ್ತಿಲ್ಲ ಎಂದು ನಕ್ಕರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.