ಶ್ರೀಲಂಕಾದ ಚೆಂಗುಲಾಬಿ ಜಾಕ್ವಲಿನ್ ಫರ್ನಾಂಡಿಸ್‌ಗೂ ಗಾಸಿಪ್‌ಗೂ ಬಿಡಿಸಲಾಗದ ನಂಟು. ಈಕೆಯ ಹೆಸರು ಸದಾಕಾಲ ಯಾವುದಾದರೂ ನಟನ ಜತೆ ಹರಿದಾಡುತ್ತಿರುತ್ತದೆ. ಇದೇ ಸಂದರ್ಭದಲ್ಲಿ ಜಾಕ್ವಲಿನ್ ತಮ್ಮ ಸುತ್ತ ಎದ್ದಿರುವ ವಿವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ಖುದ್ದು ಸ್ಪಷ್ಟಪಡಿಸಿದ್ದಾರೆ.
‘ನನ್ನ ಸುತ್ತ ಏಳುವ ಗಾಳಿಸುದ್ದಿಗೆ ಯಾವುದೇ ಹುರುಳಿಲ್ಲ. ನಾನು ಯಾರೊಂದಿಗೂ ಡೇಟಿಂಗ್ ನಡೆಸುತ್ತಿಲ್ಲ ಅಥವಾ ಪ್ರೇಮಪಾಷಕ್ಕೆ ಸಿಲುಕಿಲ್ಲ. ನಾನಿನ್ನೂ ಒಂಟಿ. ಅದೂ ಅಲ್ಲದೇ ನನಗೆ ಈಗ ಪ್ರೀತಿ ಮಾಡುವ ಮನಸ್ಸೂ ಇಲ್ಲ. ನನ್ನ ಗಮನವೇನಿದ್ದರೂ ಈಗ ಚಿತ್ರ ಜೀವನದತ್ತ ಮಾತ್ರ. ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಕಂಡುಕೊಂಡು ಒಳ್ಳೊಳ್ಳೆ ಬ್ಯಾನರ್‌ಗಳ ಚಿತ್ರಗಳಲ್ಲಿ ನಟಿಸಬೇಕು ಎಂಬುದರ ಕಡೆಗಷ್ಟೇ ನನ್ನ ಗಮನ’ ಎಂದಿದ್ದಾರೆ 28 ವರ್ಷದ ನಟಿ ಜಾಕ್ವಲಿನ್.
ಅಂದಹಾಗೆ, ಬಾಲಿವುಡ್ ಖ್ಯಾತನಟ ಸಲ್ಮಾನ್ ಖಾನ್ ಜತೆ ನಟಿಸುತ್ತಿರುವ ಜಾಕ್ವಲಿನ್‌ಗೆ ಅವರೊಂದಿಗೆ ನಟಿಸುವ ಅನುಭವ ತುಂಬ ಮುದನೀಡಿದೆಯಂತೆ.
‘ಸಾಜಿದ್ ನಾಡಿಯಾವಾಲಾ ನಿರ್ಮಿಸುತ್ತಿರುವ ಇನ್ನೂ ಹೆಸರಿಡದ ಚಿತ್ರದಲ್ಲಿ ಸಲ್ಮಾನ್ ನಾಯಕ. ಅವರೊಟ್ಟಿಗೆ ಚಿತ್ರೀಕರಣದಲ್ಲಿ ಪಾಲ್ಗೊಂಡ ಕ್ಷಣಗಳು ಅತ್ಯಂತ ಮಧುರವಾಗಿದ್ದವು. ಆ ಅನುಭವವನ್ನು ವರ್ಣಿಸಲು ನನಗೆ ಪದಗಳು ಸಿಗುತ್ತಿಲ್ಲ. ನಿಜ ಹೇಳಬೇಕು ಅಂದರೆ, ನಟನೆಗೆ ಸಂಬಂಧಿಸಿದಂತೆ ಅವರಿಂದ ಸಾಕಷ್ಟು ವಿಷಯಗಳನ್ನು ನಾನು ತಿಳಿದುಕೊಂಡಿದ್ದೇನೆ. ಅವರ ವರ್ಕೋಹಾಲಿಕ್ ಗುಣ ನನಗೆ ತುಂಬ ಇಷ್ಟವಾಯ್ತು’ ಎನ್ನುವುದು ಫರ್ನಾಂಡಿಸ್ ವಿವರಣೆ.
ಈ ಚಿತ್ರದಲ್ಲಿ ಜಾಕ್ವಲಿನ್ ಮೊದಲಬಾರಿಗೆ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಒಂದೇ ಚಿತ್ರದಲ್ಲಿ ಎರಡು ವಿಭಿನ್ನ ಪಾತ್ರಗಳನ್ನು ನಿರ್ವಹಿಸುವುದು ಆಕೆಗೆ ತುಂಬ ಸವಾಲು ಒಡ್ಡಿತಂತೆ.
ಜಾಕ್ವಲಿನ್ ಫರ್ನಾಂಡಿಸ್ ಬಾಲಿವುಡ್ ಪಯಣ ಅಷ್ಟೇನೂ ಸುಗಮವಾಗಿಲ್ಲ. ಈವರೆಗೂ ಆಕೆ ಒಂದು ದೊಡ್ಡ ಗೆಲುವಿಗಾಗಿ ಹೆಣಗುತ್ತಿದ್ದಾರೆ. ಗಾಢ್‌ಪಾದರ್‌ಗಳಿಲ್ಲದೇ ಚಿತ್ರರಂಗಕ್ಕೆ ಬಂದ ಜಾಕ್ವಲಿನ್ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಯೂರುವತ್ತ ಈಗ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.