ADVERTISEMENT

ನೀಲಂ ಉಪಾಧ್ಯ ಬಾಲಿವುಡ್ ಮೋಹ

​ಪ್ರಜಾವಾಣಿ ವಾರ್ತೆ
Published 11 ಜೂನ್ 2013, 19:59 IST
Last Updated 11 ಜೂನ್ 2013, 19:59 IST

ತಾವೇ ಇಷ್ಟಪಟ್ಟು ಅರಸಿ ತೆಗೆದುಕೊಂಡ ಬಿಳಿ ಚೂಡಿದಾರ್ ಧರಿಸಿ, ತಲೆಗೂದಲನ್ನು ಗಾಳಿಗೆ ಹಾರಾಡುವಂತೆ ಇಳಿಬಿಟ್ಟುಕೊಂಡಿದ್ದ ನಟಿಯ ಬೊಗಸೆ ಕಣ್ಣುಗಳಲ್ಲಿ ನೂರು ಕನಸುಗಳು ತೇಲುತ್ತಿದ್ದವು. ಆಕೆಯ ಕಪ್ಪು ಕೇಶರಾಶಿಯ ಅರ್ಧ ಭಾಗ ಸುರುಳಿ ಸುತ್ತಿಕೊಂಡು ಬಲ ಭುಜದ ಮೇಲೆ ಮಲಗಿತ್ತು. ಅಭಿನಯಿಸಿದ ಮೊದಲ ತೆಲುಗು ಚಿತ್ರದಲ್ಲೇ ಪ್ರೇಕ್ಷಕರ ಮನಗೆದ್ದ ಈ ನಟಿಗೆ ಆದಷ್ಟು ಬೇಗ ಬಿ-ಟೌನ್‌ಗೆ ಜಿಗಿಯುವ ತವಕ.

`ಮಿ.7' ಸಿನಿಮಾ ಮೂಲಕ ತೆಲುಗು ಚಿತ್ರರಂಗದಲ್ಲಿ ಹೆಜ್ಜೆ ಗುರುತು ಮೂಡಿಸಿದ ನಟಿ ನೀಲಂ ಉಪಾಧ್ಯ ಮೊದಲ ಚಿತ್ರದಲ್ಲೇ ಅಭಿಮಾನಿಗಳ ಹೃದಯ ಗೆದ್ದವರು. ಟಾಲಿವುಡ್‌ನ ಗೆಲುವು ಅವರಲ್ಲಿ ಹೊಸದೊಂದು ಆಸೆಯನ್ನು ಗರಿಗೆದರಿಸಿದೆ. `ಯಶಸ್ಸಿನ ರುಚಿ ಅನುಭವಿಸಿದ ಬಹುತೇಕ ದಕ್ಷಿಣ ಭಾರತೀಯ ನಟಿಯರು ಬಾಲಿವುಡ್‌ನಲ್ಲಿ ತಮ್ಮ ಖಾತೆ ತೆರೆಯಲು ಹಾತೊರೆಯುತ್ತಾರೆ.

ನನಗೆ ಬಾಲಿವುಡ್‌ನಲ್ಲಿ ಛಾಪು ಮೂಡಿಸಬೇಕೆಂಬ ಬಯಕೆ ಇದೆ. ಹಾಗೆಯೇ, ದಕ್ಷಿಣ ಭಾರತೀಯ ಚಿತ್ರಗಳ್ಲ್ಲಲೂ ಕೆಲಸ ಮಾಡುವ ಇಚ್ಛೆ ಇದೆ. ಅದಕ್ಕೆ ಪ್ರಮುಖ ಕಾರಣ ಹೈದರಾಬಾದ್ ನನ್ನ ಅಚ್ಚುಮೆಚ್ಚಿನ ನಗರಿ' ಎನ್ನುತ್ತಾರೆ ನೀಲಂ. ನೀಲಂ ಗುಜರಾತಿ ಹುಡುಗಿ. ಉತ್ತರದ ಈ ಹುಡುಗಿ ತಮ್ಮ ಸಿನಿಯಾನ ಪ್ರಾರಂಭಿಸಿದ್ದು ತೆಲುಗು ಚಿತ್ರದಲ್ಲಿ ನಟಿಸುವ ಮೂಲಕ. `ಉತ್ತರ ಭಾರತೀಯ ನಟಿಯರು ದಕ್ಷಿಣದ ಸಿನಿಮಾಗಳಿಗೆ ಅಷ್ಟಾಗಿ ಹೊಂದುವುದಿಲ್ಲ ಎಂಬ ಮಾತು ಸುಳ್ಳು. ಎಲ್ಲರೂ ಒಂದೇ ಕುಟುಂಬದಂತೆ ಇಲ್ಲಿ ಕೆಲಸ ಮಾಡಬೇಕು' ಎಂದು ಮಾತು ಸೇರಿಸುತ್ತಾರೆ ಅವರು. 
“
ನನಗೆ ಈಗಲೂ ನೆನಪಿದೆ. `ಆ್ಯಕ್ಷನ್ 3ಡಿ' ಚಿತ್ರದ ಚಿತ್ರೀರಕಣದ ಸಂದರ್ಭವದು. ಆಗ ಏಕಾಂಗಿ ಭಾವ ಕಾಡುತ್ತಿತ್ತು. ಅಂಥ ಸನ್ನಿವೇಶದಲ್ಲಿ ನಾನು ಅಧೀರಳಾಗಲಿಲ್ಲ. ಬದಲಾಗಿ ನನ್ನ ಪಾತ್ರದೊಂದಿಗೆ ಸಂವಾದಕ್ಕಿಳಿದು ಏಕತಾನತೆಯನ್ನು ಹೊರದೂಡಿದೆ. ನನ್ನ ಈ ಸ್ವಗತ ಪ್ರಸಂಗವನ್ನು ನೆನೆದುಕೊಂಡರೆ ಈಗಲೂ ನಗು ಬರುತ್ತದೆ' ಎನ್ನುತ್ತಾರೆ ನೀಲಂ.

`ನನಗೆ ಬಾಲಿವುಡ್‌ನಲ್ಲಿ ನಟಿಸುವ ಆಸೆ ಇದೆ. ಹಾಗೆಂದು ಬಾಲಿವುಡ್ ಚಿತ್ರಗಳಿಗೆ ಮಾತ್ರ ನಾನು ಆದ್ಯತೆ ನೀಡುತ್ತೇನೆ ಎಂದಲ್ಲ. ದಕ್ಷಿಣ ಭಾರತದ ಉತ್ತಮ ಸಿನಿಮಾಗಳಲ್ಲಿ ನಟಿಸುವ ಮೂಲಕ ನನ್ನ ಈ ಆಸೆಯನ್ನು ಪೂರೈಸಿಕೊಳ್ಳುವ ಹಂಬಲವಿದೆ' ಎಂದು ತಮ್ಮ ಬಾಲಿವುಡ್ ಪ್ರೀತಿಯನ್ನು ಹೊರಹಾಕುತ್ತಾರೆ ನೀಲಂ. ಅಂದಹಾಗೆ, ನೀಲಂ ಕೈಯಲ್ಲಿ ಈಗ ಒಂದು ತಮಿಳು ಮತ್ತು ಒಂದು ತೆಲುಗು ಚಿತ್ರವಿದ್ದು, ಆ ಚಿತ್ರಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT