ADVERTISEMENT

ನೀವು ಕರೆ ಮಾಡಿದ ಚಂದಾದಾರರು...

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2018, 19:30 IST
Last Updated 27 ಮಾರ್ಚ್ 2018, 19:30 IST
ಶಿಲ್ಪಾ ಮಂಜುನಾಥ್‌
ಶಿಲ್ಪಾ ಮಂಜುನಾಥ್‌   

ನೀವು ಕರೆ ಮಾಡಿದ ಚಂದಾದಾರರು ಸಾಮಾನ್ಯ ಸಂದರ್ಭಗಳಲ್ಲಿ ಏನು ಮಾಡುತ್ತಿರುತ್ತಾರೆ? ಒಂದೋ ನಿಮ್ಮ ಜೊತೆ ಮಾತನಾಡುತ್ತಾರೆ. ಇಲ್ಲದಿದ್ದರೆ ವ್ಯಾಪ್ತಿ ಪ್ರದೇಶದ ಹೊರಗಿರುತ್ತಾರೆ ಅಥವಾ ಬ್ಯುಸಿಯಾಗಿರುತ್ತಾರೆ! ಆದರೆ ಸಿ.ಮೊನಿಶ್ ನಿರ್ದೇಶಿಸಿರುವ ಸಿನಿಮಾದ ‘ಚಂದಾದಾರರು’ ಏನು ಮಾಡುತ್ತಿರುತ್ತಾರೆ ಎಂಬುದು ಸಸ್ಪೆನ್ಸ್‌!

22 ಹರೆಯದ ಹುಡುಗ ಮೊನಿಶ್ ಅವರು ಒಂದು ಸಿನಿಮಾ ಸಿದ್ಧಪಡಿಸಿಕೊಂಡು ಬಂದಿದ್ದಾರೆ. ಇದಕ್ಕೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದವರು ಕೇಶವಚಂದ್ರ. ಸಿನಿಮಾ ಹೆಸರು ‘ನೀವು ಕರೆ ಮಾಡಿದ ಚಂದಾದಾರರು...’ ಅವರು ಏನು ಮಾಡುತ್ತಿರುತ್ತಾರೆ ಎಂಬುದನ್ನು ಚಿತ್ರ ನೋಡಿಯೇ ತಿಳಿದುಕೊಳ್ಳಬೇಕು. ಸಿನಿಮಾ ಟ್ರೇಲರ್‌ ಬಿಡುಗಡೆ ಮಾಡಿ, ಒಂದಿಷ್ಟು ಮಾತು ಹಂಚಿಕೊಳ್ಳಲು ಸಿನಿಮಾ ತಂಡ ಪುಟ್ಟ ಕಾರ್ಯಕ್ರಮ ಆಯೋಜಿಸಿತ್ತು.

ಕಾರ್ಯಕ್ರಮದಲ್ಲಿ ಮಾತನಾಡಿದ ಮೊನಿಶ್, ‘ಇದು ಸಸ್ಪೆನ್ಸ್‌, ಥ್ರಿಲ್ಲರ್‌ ಸಿನಿಮಾ. ಚಿತ್ರ ವೀಕ್ಷಿಸಿ’ ಎಂದಷ್ಟೇ ಹೇಳಿ ಮೈಕ್‌ ಕೆಳಗಿಟ್ಟರು. ದಿಲೀಪ್ ರಾಜ್ ಈ ಚಿತ್ರದ ನಾಯಕ. ಅವರೂ ಕಥೆಯ ಬಗ್ಗೆ ಹೆಚ್ಚು ಮಾತನಾಡಲಿಲ್ಲ. ‘ಸಿನಿಮಾದ ಯಾವೊಂದು ಅಂಶ ಹೇಳಿದರೂ ಇಡೀ ಕಥೆಯನ್ನು ಬಿಟ್ಟುಕೊಟ್ಟಂತೆ ಆಗುತ್ತದೆ’ ಎಂದು ಮಾತಿನ ಆರಂಭದಲ್ಲೇ ಹೇಳಿಬಿಟ್ಟರು. ‘ನಟ ಆಗುವುದು ಸುಲಭ. ಆದರೆ ನಿರ್ದೇಶಕ ಆಗುವುದು ಬಹಳ ಕಷ್ಟ. ನಿರ್ದೇಶಕ ಬಹಳಷ್ಟು ಜವಾಬ್ದಾರಿಗಳನ್ನು ಹೊರಬೇಕಾಗುತ್ತದೆ. ಮೊನಿಶ್‌ ಮಾಡಿರುವ ಪ್ರಯತ್ನಕ್ಕೆ ಹ್ಯಾಟ್ಸ್‌ ಆಫ್‌’ ಎಂದರು ದಿಲೀಪ್.

ADVERTISEMENT

ನಿರ್ಮಾಪಕ ಸನತ್ ಕುಮಾರ್ ಅವರಿಗೆ ಸಿನಿಮಾ ಬಹುತೇಕ ಮುಗಿಯವವರೆಗೂ ನಾಯಕ ನಟನ ಪರಿಚಯವೇ ಇರಲಿಲ್ಲವಂತೆ. ಈ ವಿಷಯ ತಿಳಿಸಿದವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ಉಮೇಶ್ ಬಣಕಾರ್. ‘ಎಲ್ಲ ಕೆಲಸಗಳನ್ನೂ ನಿರ್ದೇಶಕರಿಗೆ ವಹಿಸಿದ್ದೇನೆ. ಅವರೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದು ಸನತ್ ನನ್ನಲ್ಲಿ ಒಮ್ಮೆ ಹೇಳಿದ್ದರು. ಇಂಥವರನ್ನು ನನ್ನ ಸಿನಿಮಾ ಬದುಕಿನಲ್ಲಿ ಕಂಡಿದ್ದು ಇದೇ ಮೊದಲು’ ಎಂದರು ಬಣಕಾರ್.

ಶಿಲ್ಪಾ ಮಂಜುನಾಥ್ ಈ ಚಿತ್ರದ ನಾಯಕಿ. ‘ಕಾವ್ಯಾ ಮಂಜುನಾಥ್‌ ಎನ್ನುವ ಹುಡುಗಿ ಊರಿನ ಎಲ್ಲರಿಗೂ ಇಷ್ಟವಾಗುವಂತೆ ಇರುತ್ತಾಳೆ. ಆದರೆ ಆಕೆ ಒಂದು ದಿನ ಸತ್ತುಹೋಗುತ್ತಾಳೆ. ಆಕೆಯದ್ದು ಕೊಲೆಯೋ, ಸಹಜ ಸಾವೋ, ಸಾವಿಗೆ ಕಾರಣ ಏನು ಎಂಬುದರ ಸುತ್ತ ಸಾಗುವ ಥ್ರಿಲ್ಲರ್ ಕಥೆ ಈ ಚಿತ್ರದ ಹೂರಣ’ ಎಂದು ಸಿನಿತಂಡ ಹೇಳಿದೆ. ಆದಿಲ್ ನದಾಫ್‌ ಸಂಗೀತ, ಶ್ರೀನಿವಾಸ ಜಿ. ರಾಮನಗರ ಛಾಯಾಗ್ರಹಣ ಈ ಚಿತ್ರಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.