ADVERTISEMENT

ನೂರ್ಕೋಟಿ ನಟಿ!

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST
ನೂರ್ಕೋಟಿ ನಟಿ!
ನೂರ್ಕೋಟಿ ನಟಿ!   

ಕೈಲೊಂದು ಪ್ರಶಸ್ತಿ ಹಿಡಿದ ಕರೀನಾ ಕಪೂರ್ ಮುಖದ ಮೇಲೆ ಹೈವೋಲ್ಟೇಜ್ ನಗು. ಬಾಲಿವುಡ್‌ನಲ್ಲಿ `100-ಕೋಟಿ ಕ್ಲಬ್~ ಸೇರಿದ ಮೊದಲ ನಟಿ ಎಂಬ ಅಗ್ಗಳಿಕೆ. ಕಳೆದ ವರ್ಷ ಕರೀನಾ ಅಭಿನಯಿಸಿದ `ಬಾಡಿಗಾರ್ಡ್~ ಹಾಗೂ `ರಾ.ಒನ್~ ಎರಡೂ ಗಲ್ಲಾಪೆಟ್ಟಿಗೆಯಲ್ಲಿ ನೂರು ಕೋಟಿಗೂ ಹೆಚ್ಚು ಕಲೆಕ್ಷನ್ ಬಾಚಿಹಾಕಿದ್ದು, ಅಷ್ಟೊಂದು ಗಳಿಕೆಯ ಚಿತ್ರಗಳ ಮೊದಲ ನಾಯಕಿ ಎಂಬ ಅಪರೂಪದ ಪ್ರಶಸ್ತಿಯೊಂದು ಕರೀನಾಗೆ ಸಂದಿದೆ.

ಕರೀನಾ ಹಾಗೂ ಅದೃಷ್ಟ ಒಂದೇ ನಾಣ್ಯದ ಎರಡು ಮುಖಗಳಂತೆ. `ಥ್ರೀ ಈಡಿಯಟ್ಸ್~ 175 ಕೋಟಿಗೂ ಹೆಚ್ಚು ಹಣ ಬಾಚಿಹಾಕಿದ್ದು, `ಗೋಲ್‌ಮಾಲ್ 3~ 108 ಕೋಟಿ ಜಮೆಮಾಡಿದ ನೆನಪನ್ನು ಬೆನ್ನಿಗಿಟ್ಟುಕೊಂಡಿದ್ದ ಅವರಿಗೆ `ಬಾಡಿಗಾರ್ಡ್~ ದೊಡ್ಡ ವರವಾಗಿದೆ. ಅದು 141 ಕೋಟಿ ಕೂಡಿಹಾಕಿದ ಸುದ್ದಿಯಿದೆ.

ಬಾಲಿವುಡ್ ಬಾಕ್ಸಾಫೀಸ್‌ನ ಸಾರ್ವಕಾಲಿಕ ಯಶಸ್ವಿ ಹತ್ತು ಚಿತ್ರಗಳ ಪಟ್ಟಿಯಲ್ಲಿ ನಾಲ್ಕು ಕರೀನಾ ಅಭಿನಯಿಸಿದ್ದು.

`ಬಾಡಿಗಾರ್ಡ್‌ನಲ್ಲಿ ನನ್ನ ಪಾತ್ರ ಮುಖ್ಯವಾದದ್ದೇನೂ ಅಲ್ಲ ಎಂದು ಕೆಲವರು ಆಡಿಕೊಳ್ಳುತ್ತಿದ್ದಾರೆ. ಎಷ್ಟೋ ನಾಯಕಿಯರು ಇಡೀ ಚಿತ್ರದಲ್ಲಿ ಎರಡು ಸಾಲಿನ ಸಂಭಾಷಣೆ ಹೇಳಿ, ಆ ಚಿತ್ರದ ಯಶಸ್ಸಿನ ಪಾಲುದಾರರು ತಾವೇ ಎಂಬಂತೆ ಬೀಗುತ್ತಿರುವ ಈ ಕಾಲದಲ್ಲಿ `ಬಾಡಿಗಾರ್ಡ್~ ಅಮುಖ್ಯವೇನೂ ಅಲ್ಲ. ನಾನೊಬ್ಬ ನಟಿ. ಎರಡು ದೃಶ್ಯವಿದ್ದರೂ ಅದರಲ್ಲಿ ನಾನು ಮಿಂಚಬೇಕು. ಡಾನ್ ಚಿತ್ರದ `ಯೇ ಮೇರಾ ದಿಲ್...~ ಹಾಡಿನಲ್ಲಿ ನನ್ನ ಕಣ್ಣಿನ ಮಾದಕತೆ ಕಂಡವರು ಮೆಚ್ಚಿ ಮಾತನಾಡಿದ್ದರು. ನಾನು ಈಗಲೂ ಬ್ಯುಸಿ. ಬರೀ ನಾಯಕಿಯಾಗಿ ಒಂದಾದ ಮೇಲೊಂದರಂತೆ ಚಿತ್ರಗಳಿಗೆ ಸಹಿ ಹಾಕಿದ ಮಾತ್ರಕ್ಕೆ ಬ್ಯುಸಿ ಎಂದರ್ಥವಲ್ಲ. ನಾನು ಸುಮ್ಮನೆ ಕೂರುವವರ ಪೈಕಿ ಅಲ್ಲ. ಈಗಲೂ ತಿಂಗಳಿನ ಇಪ್ಪತ್ತು ದಿನ ಚಿತ್ರೀಕರಣದಲ್ಲಿ ತೊಡಗುತ್ತೇನೆ. ಅಂದಮೇಲೆ ಖಾಲಿ ಕೂತಿಲ್ಲ ಅಲ್ಲವೇ~ ಎಂದು ಪ್ರಶ್ನೆ ಕೇಳಿದ್ದ ಕರೀನಾ ಈಗ ಬೀಗಲು ಪ್ರಶಸ್ತಿಯ ಗರಿಯೇ ನೆಪ.

`ನಟಿಯೊಬ್ಬಳಿಗೆ ಒಳ್ಳೆಯ ವಿಮರ್ಶೆ ಸಿಗುವುದು ಕಷ್ಟ. ಆದರೆ, ಬಾಕ್ಸಾಫೀಸ್‌ನಲ್ಲಿ ಗಳಿಕೆಯಂತೂ ಅದಕ್ಕಿಂತ ಸವಾಲಿನದ್ದು. ನನ್ನ ಚಿತ್ರಗಳನ್ನು ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ನೋಡುತ್ತಿದ್ದಾರೆಂದರೆ ಅದಕ್ಕಿಂತ ಬೇರೆ ಭಾಗ್ಯವಿಲ್ಲ. ಇಂಥ ಪ್ರಶಸ್ತಿ ಸಿಕ್ಕಾಗ ಅಭಿನಯಿಸಲು ಹುಮ್ಮಸ್ಸು ಹೆಚ್ಚಾಗುತ್ತದೆ~ ಎಂದು ಬೀಗುವ ಕರೀನಾ 2012 ಕೂಡ ತಮ್ಮ ಪಾಲಿಗೆ ಒಳಿತನ್ನೇ ನೀಡಲಿದೆ ಎಂಬ ಭರವಸೆಯಲ್ಲಿದ್ದಾರೆ.

ದೀರ್ಘ ಕಾಲದಿಂದ ಚಿತ್ರೀಕರಣಗೊಳ್ಳುತ್ತಿರುವ `ಏಜೆಂಟ್ ವಿನೋದ್~ನಲ್ಲೂ ಕರೀನಾ ನಾಯಕಿ. ತಮ್ಮ ಪ್ರಿಯಕರ ಸೈಫ್ ಅಲಿ ಖಾನ್ ನಿರ್ಮಾಣದ ಕಂಪೆನಿಯಲ್ಲೇ ತಯಾರಾಗುತ್ತಿರುವ ಚಿತ್ರವಿದು ಎಂಬ ಸಲಿಗೆಯಿಂದಲೋ ಏನೋ ದುಬಾರಿ ಅಲಂಕಾರ ಕನ್ನಡಕವನ್ನು ಕರೀನಾ ಕೊಂಡುಕೊಂಡು, ಅದರ ಬಿಲ್ಲನ್ನು ಪ್ರೊಡಕ್ಷನ್ ಮ್ಯಾನೇಜರ್ ಕೈಗಿತ್ತಿದ್ದಾರಂತೆ. ಸೈಫ್ ಕೈ ಮೇಲೆ ಬರೆಸಿಕೊಂಡಿರುವ `ಕರೀನಾ~ ಎಂಬ ಹಚ್ಚೆ ಇನ್ನೂ ನಗುತ್ತಿರುವುದರಿಂದ ಪ್ರೊಡಕ್ಷನ್ ಮ್ಯಾನೇಜರ್ ಸಹ ಈ ವಿಷಯದಲ್ಲಿ ಏನೂ ಮಾಡಲಾಗದೆ ಸುಮ್ಮನಾದರಂತೆ. `ಏಜೆಂಟ್ ವಿನೋದ್~ ಇಷ್ಟು ವಿಳಂಬವಾಗುತ್ತಿರುವುದರಿಂದ ಚಿತ್ರೋದ್ಯಮದ ಕೆಲವರು ಅದನ್ನು `ಏಜಿಂಗ್ ವಿನೋದ್~ ಎಂದು ಛೇಡಿಸುತ್ತಿರುವ ಸುದ್ದಿಯೂ ಇದೆ. ಇದ್ಯಾವುದರಿಂದಲೂ ಕರೀನಾ ವಿಚಲಿತರಾಗಿಲ್ಲ. ಅವರು ಈಗಲೂ ಆಗೀಗ `ಬಾಡಿಗಾರ್ಡ್~ ಚಿತ್ರದ `ತೇರಿ ಮೇರಿ ಮೇರಿ ತೇರಿ ಪ್ರೇಮ್ ಕಹಾನಿ ಹೈ ಮುಷ್ಕಿಲ್~ ಹಾಡು ಕೇಳುತ್ತಾ ಖುಷಿಪಡುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.