ADVERTISEMENT

ನೆತ್ತರು–ಗುಲಾಬಿಯ ‘ನಮಕ್ ಹರಾಮ್’

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2015, 19:30 IST
Last Updated 10 ಸೆಪ್ಟೆಂಬರ್ 2015, 19:30 IST

‘ಪದೇ ಪದೇ’ ಎಂಬ ಸಿನಿಮಾ ನಿರ್ಮಾಣ ಮಾಡಿ ಗಾಂಧಿನಗರದ ಗಮನ ಸೆಳೆದಿದ್ದ ವಿಜಯ್‌ ಆನಂದಕುಮಾರ್, ಮತ್ತೊಂದು ಚಿತ್ರದೊಂದಿಗೆ ಚಂದನವನಕ್ಕೆ ಬಂದಿದ್ದಾರೆ. ನಟ ಗಣೇಶ್ ಅವರ ಸಹೋದರ ಕೃಷ್ಣ ಮಹೇಶ್ ನಾಯಕರಾಗಿರುವ ‘ನಮಕ್‌ ಹರಾಮ್’ ಸಿನಿಮಾ ಇಂದು ತೆರೆ ಕಾಣುತ್ತಿದೆ.

ಚಿತ್ರಕಥೆ ಸಿದ್ಧಪಡಿಸಲು ಒಂದು ವರ್ಷ ತೆಗೆದುಕೊಂಡಿರುವುದು ‘ನಮಕ್‌ ಹರಾಮ್‌’ ವಿಶೇಷ. ಒಂದು ನಿಮಿಷ ಕೂಡ ವ್ಯರ್ಥವಾಗಬಾರದು ಎಂಬ ಗುರಿಯೊಂದಿಗೆ ಪಕ್ಕಾ ಸ್ಕ್ರಿಪ್ಟ್‌ ಸಿದ್ಧ ಮಾಡಿಕೊಳ್ಳಲು ಇಷ್ಟು ದಿನ ಬೇಕಾಯಿತು ಎಂಬುದು ನಿರ್ದೇಶಕ ನಾಗರಾಜ ಪೀಣ್ಯ ಸ್ಪಷ್ಟನೆ. ಈ ಹಿಂದೆ ವಿಜಯ್ ಅವರ ‘ಪದೇ ಪದೇ’ ಸಿನಿಮಾದ ನಿರ್ದೇಶಕ ಕೂಡ ಇವರೇ. ‘ಆ ಚಿತ್ರ ಹೆಚ್ಚು ಜನರನ್ನು ಸೆಳೆಯಿತು. ಅದರಿಂದಾಗಿ ನಮಕ್‌ ಹರಾಮ್‌ ನಿರ್ದೇಶನಕ್ಕೆ ಧೈರ್ಯ ಮಾಡಿದೆ’ ಎಂದರು ನಾಗರಾಜ್. ‘ಮೊದಲ ಚಿತ್ರ ಪ್ರೀತಿ–ಪ್ರೇಮದ್ದು; ಆದರೆ ನಮಕ್‌ ಹರಾಮ್‌ನಲ್ಲಿ ಇರುವುದು ರೌಡಿಸಂ ಕಥೆ’ ಎಂಬ ಮಾಹಿತಿಯನ್ನು ಅವರು ಕೊಡುತ್ತಾರೆ.

ಬಣ್ಣದ ಲೋಕದಲ್ಲಿ ಮಿನುಗಲು ಕೃಷ್ಣ ಮಹೇಶ್ ನಡೆಸಿರುವ ಪ್ರಯತ್ನಗಳು ಒಂದೆರಡಲ್ಲ. 2008ರಿಂದಲೂ ಅವರು ಇದಕ್ಕಾಗಿ ಹೋರಾಟ ನಡೆಸುತ್ತಲೇ ಇದ್ದಾರೆ. ‘ಕೊನೆಗೂ ಅವಕಾಶ ಸಿಕ್ಕಿರುವುದು ನನಗೆ ಪುಳಕ ಮೂಡಿಸಿದೆ’ ಎಂದ ಅವರು, ನಮಕ್‌ ಹರಾಮ್‌ನಲ್ಲಿ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡ ಕುರಿತು ವಿವರ ನೀಡಿದರು. ಪಾತ್ರಕ್ಕಾಗಿ ವಿಶೇಷ ಬಗೆಯ ಮ್ಯಾನರಿಸಂ ಅಗತ್ಯ ಎಂಬ ಹಿನ್ನೆಲೆಯಲ್ಲಿ ನಿರ್ದೇಶಕರ ಸಲಹೆಯಂತೆ ‘ಕರಿಯ’, ‘ಓಂ’ ಹಾಗೂ ‘ಜೋಗಿ’ ಚಿತ್ರವನ್ನು ಪದೇ ಪದೇ ನೋಡಿದ್ದಾರಂತೆ.

ನಾಯಕಿ ರೇಡಿಯೋ ಜಾಕಿ ರ‍್ಯಾಪಿಡ್ ರಶ್ಮಿ ಪ್ರಕಾರ, ಎಲ್ಲರ ಬದುಕಿನಲ್ಲೂ ನಡೆಯುವ ಕಥೆ ಈ ಸಿನಿಮಾದಲ್ಲಿದೆಯಂತೆ. ಬರೀ ರೌಡಿಸಂ ಮಾತ್ರ ಇಲ್ಲ; ಪ್ರೀತಿ, ಕಾಮಿಡಿ, ಭಾವನೆಗಳಿಗೂ ನಿರ್ದೇಶಕರು ಅವಕಾಶ ಕೊಟ್ಟಿದ್ದಾರೆ ಎನ್ನುವ ರಶ್ಮಿ, ಮೊದಲ ಬಾರಿಗೆ ಅಳುಕಿನಿಂದ ಕ್ಯಾಮೆರಾ ಎದುರಿಸಿದ ಸಮಯವನ್ನು ನೆನಪಿಸಿಕೊಂಡರು.

ಮಳವಳ್ಳಿ ಸಾಯಿಕೃಷ್ಣ ಸಂಭಾಷಣೆ ಬರೆದಿದ್ದಾರೆ. ಐದು ಹಾಡುಗಳಿಗೆ ಸತೀಶ್ ಆರ್ಯನ್ ಸಂಗೀತ ಸಂಯೋಜಿಸಿದ್ದಾರೆ. ನಂದಕುಮಾರ್ ಕ್ಯಾಮೆರಾ ಹಿಡಿದಿದ್ದಾರೆ. ರಾಜ್ಯದ ನೂರು ಚಿತ್ರಮಂದಿರಗಳಲ್ಲಿ ‘ನಮಕ್‌ ಹರಾಮ್’ ತೆರೆ ಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.