ADVERTISEMENT

ಪಾರು : ಚೂರುಪಾರು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2014, 19:30 IST
Last Updated 13 ಮಾರ್ಚ್ 2014, 19:30 IST

ತುಂಬಿದ ಸಭಾಂಗಣದೊಳಗೆ ಲಕಲಕನೆ ಕಂಗೊಳಿಸುತ್ತಿದ್ದ ನಟ–ನಟಿಯರು; ಶ್ವೇತ ವಸ್ತ್ರಧಾರಿಗಳಾದ ಸೌಂದರ್ಯ ಜಯಮಾಲಾ ಮತ್ತು ನೇಹಾ ಪಾಟೀಲ್ ಬೆಳಕಿನೊಳಗೆ ಬೆರೆಯುವಂತೆ ಕಾಣಿಸುತ್ತಿದ್ದರು! ಪ್ರಸ್ತುತ ತೆರೆಗೆ ಸಿದ್ಧವಾಗಿರುವ ‘ಪಾರು ವೈಫ್ ಆಫ್ ದೇವದಾಸ್’ ಚಿತ್ರದ ಆಡಿಯೊ ಬಿಡುಗಡೆ ಸಂಭ್ರಮ ಅದು.

ನಿರ್ದೇಶಕ ಕಿರಣ್ ಗೋವಿ ಪಾರು ಆರಂಭದ ದಿನಗಳ ನೆನಪುಗಳನ್ನು ಮೆಲುಕು ಹಾಕಿದರು. ‘ಮೂರು ವರ್ಷಗಳ ಕಾಲ ಚಿತ್ರಕಥೆಯ ಮೇಲೆ ಕೆಲಸ ಮಾಡಲಾಗಿತ್ತು. 2006ರಲ್ಲಿ ಆರಂಭವಾದ ಚಿತ್ರೀಕರಣ 2013ರಲ್ಲಿ ಪೂರ್ಣವಾಗಿದೆ. ಏಪ್ರಿಲ್‌ನಲ್ಲಿ ಚಿತ್ರ ತೆರೆಗೆ ಬರಬಹುದು’ ಎಂದರು ಕಿರಣ್.

ಕಿರಣ್ ಗೋವಿ ತಮ್ಮ ಈ ಹಿಂದಿನ ‘ಪಯಣ’ ಮತ್ತು ‘ಸಂಚಾರಿ’ ಚಿತ್ರಗಳಲ್ಲಿ ಸಂಗೀತಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದರು. ಈ ಚಿತ್ರದಲ್ಲೂ ಸಂಗೀತಕ್ಕೆ ಆದ್ಯತೆ ಮುಂದುವರಿದಿದೆ. ‘ಸಂಗೀತ ಈ ಚಿತ್ರದ ಅವಿಭಾಜ್ಯ ಅಂಗ. ಗಾಯಕರ ಶೋಧಕ್ಕೆ ರಾಜ್ಯದ ವಿವಿಧ ಭಾಗಗಳಲ್ಲಿ ಹುಡುಕಾಟ ನಡೆಸಿ ಅಂತಿಮವಾಗಿ 40 ಮಂದಿ ಅತ್ಯುತ್ತಮ ಸಂಗೀತಗಾರನ್ನು ಆರಿಸಿ ತೆಗೆಯಲಾಗಿದೆ’ ಎಂದು ಹಾಡುಗಾರರ ಶೋಧಕ್ಕೆ ನಡೆಸಿದ ಪ್ರಯತ್ನದ ಬಗ್ಗೆ ಅವರು ತಿಳಿಸಿದರು. ಗಾಯಕಿಯರಾದ ಸಹನಾ ಮತ್ತು ಶ್ವೇತಾ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಪ್ರೇಮಿಗಳ ನಡುವೆ ಕಾಣಿಸಿಕೊಳ್ಳುವ ಸಣ್ಣ ಸಣ್ಣ ಇಗೋಗಳು ಅವರ ನಡುವೆ ಯಾವ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎನ್ನುವುದನ್ನು ಈ ಚಿತ್ರದಲ್ಲಿ ಕಾಣಬಹುದಂತೆ. ಪಾರು ಮತ್ತು ದೇವದಾಸರ ಪ್ರೇಮಕಥೆ, ಪ್ರೇಮಿಗಳನ್ನು ಪರವಶಗೊಳಿಸಲಿದೆ ಎನ್ನುವ ನಿರೀಕ್ಷೆ ನಿರ್ದೇಶಕರದು. ನಾಯಕ ನಟ ಶ್ರೀನಗರ್ ಕಿಟ್ಟಿ ಚಿತ್ರದ ಬಗ್ಗೆ ಅಕ್ಕರೆಯ ಮಾತುಗಳನ್ನಾಡಿದರು.

ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಹಾಡುಗಳಿಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರಂತೆ. ಮೊದಲ ಬಾರಿಗೆ ಚಿತ್ರದಲ್ಲಿ ಸೂಫಿ ಸಂಗೀತ ಬಳಸಿಕೊಳ್ಳಲಾಗಿದೆಯಂತೆ.

ದೇವದಾಸನಿಗೆ ನಶೆ ಏರಿಸುವ ನಾಯಕಿಯರಾದ ಸೌಂದರ್ಯ ಜಯಮಾಲಾ ಮತ್ತು ನಟಿ ನೇಹಾ ಪಾಟೀಲ್ ಅವರ ಮಾತುಗಳಲ್ಲಿ ಸಂಭ್ರಮ ತುಳುಕುತ್ತಿತ್ತು. ನಿರ್ಮಾಪಕರಾದ ಕೃಷ್ಣದೇವೇಗೌಡ ಹನುಮಂತಪ್ಪ, ಮುಖ್ತಾರ್, ನಟ ರವಿಶಂಕರ್ ಗೌಡ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.