ADVERTISEMENT

ಫೇಸ್‌ಬುಕ್‌ ನ್ಯಾಯಾಧೀಶರು!

ಒಂದು ಮಾತು

ಶಾರ್ವರಿ
Published 9 ಏಪ್ರಿಲ್ 2015, 19:30 IST
Last Updated 9 ಏಪ್ರಿಲ್ 2015, 19:30 IST

ಅಭಿವ್ಯಕ್ತಿ ಸ್ವಾತಂತ್ರ್ಯದ ಗಡಿರೇಖೆಗಳು ಅಳಿಸಿಹೋದರೆ ಏನಾಗುತ್ತದೆ? ಎಂಬ ಪ್ರಶ್ನೆಗೆ ಒಂದೇ ಮಾತಿನಲ್ಲಿ ‘ಫೇಸ್‌ಬುಕ್‌ ನೋಡಿ’ ಎಂದು ಉತ್ತರಿಸಬಹುದು. ಅಭಿಪ್ರಾಯ ಲಗತ್ತಿಸುವ ನೆಪದಲ್ಲಿ ಹಲಗೆಯ ಮೇಲೆ ಎಲ್ಲವನ್ನೂ ಇನ್‌ಸ್ಟಂಟ್‌ ಆಗಿ ವ್ಯಾಖ್ಯಾನಿಸುವ, ಅಷ್ಟೇ ಸುಲಭಕ್ಕೆ ನಿರ್ಣಯಿಸುವ ‘ನ್ಯಾಯಾಧೀಶ’ರು ಫೇಸ್‌ಬುಕ್‌ನಲ್ಲಿ ಬೇಕಾದಷ್ಟು ಸಿಗುತ್ತಾರೆ.

ಜಗದ ಅಣುರೇಣು ತೃಣ ಕಾಷ್ಠಗಳನ್ನು ತಮ್ಮ ಅತ್ಯಪೂರ್ವ ವ್ಯಾಖ್ಯಾನಗಳ ಒರಳುಕಲ್ಲಿನಲ್ಲಿ ಹಾಕಿ ರುಬ್ಬಿ ಚಿಂದಿ ಚಿತ್ರಾನ್ನ ಮಾಡುವ ಪಾಕಪ್ರವೀಣರ ಬಾಣಲೆಗೆ ಪ್ರತಿ ವಾರ ಬಿಡುಗಡೆಯಾಗುವ ಸಿನಿಮಾಗಳು ಮುಖ್ಯ ಪದಾರ್ಥ. ಕಡಿಮೆ ಶಬ್ದದಲ್ಲಿ ಹೆಚ್ಚು ವಿಷಯ ಹೇಳುವುದು ಅಂತಾರಲ್ಲಾ. ಅದು ಹೇಗೆ ಎಂದು ತಿಳಿದುಕೊಳ್ಳಲು ನೀವು ಈ ಫೇಸ್‌ಬುಕ್‌ ಸಿನಿಪ್ರವೀಣರ ಚಿತ್ರವಿಮರ್ಶೆಯನ್ನು ಗಮನಿಸಲೇ ಬೇಕು.

ಎರಡೂವರೆ ತಾಸಿನ ಚಿತ್ರದ ಹಣೆಬರಹ ವನ್ನು ಬರೀ ಎರಡೂವರೆ ಸಾಲಿನಲ್ಲಿ ಬರೆದು ಚಚ್ಚಿ ಬಿಸಾಕಬಲ್ಲರು ಎಂದರೆ ಅವರ ಪದಸಂಪತ್ತಿನ ಬಗ್ಗೆ, ನ್ಯಾಯ ನಿರ್ಣಯ ತಾಕತ್ತಿನ ಬಗ್ಗೆ ಬೆರಗುಗೊಳ್ಳದೇ ಇರಲು ಸಾಧ್ಯವೇ? ಕೆಲವರಂತೂ ಎಷ್ಟು ಮುಂದಾಲೋಚನಾ ಮತಿಗಳಾಗಿರುತ್ತಾರೆ ಎಂದರೆ, ಸಿನಿಮಾ  ನೋಡುವ ಮೊದಲೇ ನೋಡಿದ ಮೇಲೆ ಏನು ಬರೆಯಬೇಕು ಎಂಬುದನ್ನು ನಿರ್ಧರಿಸಿಬಿಟ್ಟಿರುತ್ತಾರೆ!

ಹೀಗೆ ಈ ಫೇಸ್‌ಬುಕ್‌ ನ್ಯಾಯಾದೀಶರು ತಮ್ಮ  ಕೀಪ್ಯಾಡಿನ ಮೇಲೆ ಸುತ್ತಿಗೆಯೋಪಾದಿ ಯಲ್ಲಿ ಬೆರಳುಗಳನ್ನು ಕುಟ್ಟಿ ಕುಟ್ಟಿ ಜಡ್ಜ್‌ಮೆಂಟ್‌ ಅನ್ನು ತಮ್ಮ ಖಾತೆಯ ಗೋಡೆಯ ಮೇಲೆ ಸುವರ್ಣಾಕ್ಷರಗಳಲ್ಲಿ ಕೆತ್ತಿ ಮುಗಿಸಿದರೆಂದರೆ ಸಿನಿಮಾದ ಹಣೆಬರಹ ನಿರ್ಧಾರವಾಯ್ತು ಎಂತಲೇ ಅರ್ಥ. 

ಈ ಸ್ಟೇಟಸ್‌ ಲಗತ್ತಾಗಿದ್ದೇ, ದೇವಸ್ಥಾನದ ಎದುರು ಒಡೆದ ಕಾಯಿಗೆ ಮುಕುರುವ ಹಾಗೆ ಇನ್ನೊಂದಿಷ್ಟು ಅಕೌಂಟಿಗರು ಮುತ್ತಿ ಮುತ್ತಿ ಆ ಎರಡೂವರೆ ಸಾಲನ್ನೇ ಹಿಂಜಿ ಗುಂಜಿ, ಜಗ್ಗಿ ಮುರಿದು ಜಾಲಾಡಿಬಿಡುತ್ತಾರೆ. ಈ ಚರ್ಚೆ ಹೊಗಳಿಕೆಯ ಹಾದಿಯಲ್ಲಿ ಸಾಗಿದರೆ ಸಿನಿಮಾ ಕನ್ನಡ ಚಿತ್ರರಂಗದ ದಿಕ್ಕನ್ನೇ ಬದಲಾಯಿಸಬಲ್ಲ ಅತ್ಯದ್ಭುತವೆಂದೂ, ಟೀಕೆಯ ದಾರಿ ಹಿಡಿದರೆ ಇಂಥ ಕಳಪೆ ಸಿನಿಮಾ ನೋಡುವುದು ಶಿಕ್ಷಾರ್ಹ ಅಪರಾಧವೆಂದೂ ಫರ್ಮಾನು ಹೊರಡಿಸಲಾಗುತ್ತದೆ.

ಒಟ್ಟಾರೆ ಶುಕ್ರವಾರ ಸಂಜೆಯ ಹೊತ್ತಿಗೆ ಸಮಾರಾಧನೆ ಮಾಡಿದ ಶಾಂತಿಯಲ್ಲಿ ನಿರ್ಣಾಯಕ ಮಹಾಪ್ರಭುಗಳು ಮುಂದಿನ ಚಿತ್ರವನ್ನು ರುಬ್ಬಲು ಒರಳುಕಲ್ಲನ್ನೂ, ಬೇಯಿಸಲು ಕಾವಲಿಯನ್ನೂ ತಯಾರಿಸುವ ಕಾರ್ಯದಲ್ಲಿ ಮಗ್ನರಾಗುತ್ತಾರೆ. ಎಷ್ಟೆಂದರೂ ಪ್ರೇಕ್ಷಕ ಮಹಾಪ್ರಭುಗಳಿಗೆ ಮಾರ್ಗದರ್ಶನ ಮಾಡುವುದೇ ಅವರ ಪರಮಾದ್ಯ ಹಕ್ಕು ಕರ್ತವ್ಯವಲ್ಲವೇ?

ಸಿನಿಮಾದ ಯಾವುದೋ ಒಂದು ಪಾಯಿಂಟು, ಯಾವುದೋ ಹಾಡಿನ ಒಂದು ಸಾಲು, ಒಂದು ದೃಶ್ಯದಲ್ಲಿನ ಸಂಭಾಷಣೆ, ಕೊನೆಗೆ ನಾಯಕಿ ಹಾಕಿರುವ ಚಡ್ಡಿಯನ್ನೂ ತಮ್ಮ ನೋಟದ ನಿಕಷಕ್ಕೆ ಹಚ್ಚಿ ಇಡೀ ಚಿತ್ರದ ಬಗ್ಗೆ ನಿರ್ಣಯಿಸಬಲ್ಲ ಅದ್ಭುತ ಪ್ರಚಂಡರನ್ನು ಅಪ್ಪಿತಪ್ಪಿಯೂ ಪ್ರಶ್ನಿಸುವಂತಿಲ್ಲ. ಪ್ರಶ್ನಿಸಿದಿರೋ ನೀವು ಅವರ ನುಡಿಖಡ್ಗದ ಝಳಪಿಗೆ ಸಿಕ್ಕು ತತ್ತರಿಸಬೇಕಾದೀತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.