ಈ ಚಿತ್ರಕ್ಕೆ ನಾಯಕನೂ ಇಲ್ಲ, ನಾಯಕಿಯೂ ಇಲ್ಲ. ನಿರ್ದೇಶಕರ ಪ್ರಕಾರ ನಟಿಸಿರುವ ಕಲಾವಿದರೆಲ್ಲರೂ ನಾಯಕ-ನಾಯಕಿಯರು. ಕಲಾವಿದರ ಬಣ್ಣದ ಬದುಕಿನ ಕಥೆ-ವ್ಯಥೆಗೆ ಒಂದಷ್ಟು ಹಾಸ್ಯ ಬೆರಸಿ ಚಿತ್ರ ಮಾಡಿದ್ದಾರೆ ನಿರ್ದೇಶಕ ವಿ. ರಾಮರಾವ್ ಪುಟಾಣೆ. ಅದರಲ್ಲಿ ಮಾಧುರ್ಯಭರಿತ ಹಾಡುಗಳನ್ನೂ ಅಡಕ ಮಾಡಿದ್ದಾರೆ. ಈ ಹಾಡುಗಳ ಧ್ವನಿಮುದ್ರಿಕೆಯ ಬಿಡುಗಡೆ ಸಮಾರಂಭದಲ್ಲಿ ಅವರು ಬಣ್ಣದ ಕನಸುಗಳನ್ನು ಬಿಚ್ಚಿಟ್ಟರು.
`ಈ ಬಣ್ಣ ಲೋಕದಲಿ~ ರಂಗಭೂಮಿ ಕಲಾವಿದರು ಬೆಳ್ಳಿ ಪರದೆ ಮೇಲೆ ಕಾಣಿಸಿಕೊಂಡಿರುವ ಚಿತ್ರ. ರಮೇಶ್ ಭಟ್, ರಮೇಶ್ ಪಂಡಿತ್, ಬಿರಾದಾರ್, ಸುರೇಶ್, ರೇಖಾದಾಸ್, ವೀಣಾ ಸುಂದರ್ ಮುಂತಾದ ಪಳಗಿದ ಕಲಾವಿದರ ದಂಡು ಚಿತ್ರದಲ್ಲಿದೆ.
ಕಿರುತೆರೆ ಹಾಗೂ ಚಿತ್ರ ಕಲಾವಿದರ ಬದುಕಿನ ಕಥೆಯನ್ನಿಟ್ಟುಕೊಂಡು ಚಿತ್ರ ಮಾಡಲು ನಿರ್ದೇಶಕ ರಾಮರಾವ್ ಅವರಿಗೆ ನಿರ್ಮಾಪಕ ಜಿ.ವಿ. ನರಸಿಂಹಮೂರ್ತಿ ಅವರೇ ಪ್ರೇರಣೆಯಂತೆ. ರಂಗಭೂಮಿ ಹಿನ್ನೆಲೆಯುಳ್ಳ ಅವರಿಬ್ಬರದು 35 ವರ್ಷಗಳ ಗೆಳೆತನ. ಚಿತ್ರದ ಹಾಡುಗಳನ್ನು ನಿರ್ಮಾಪಕರೇ ರಚಿಸಿದ್ದಾರೆ.
ಸಂಗೀತ ನಿರ್ದೇಶಕ ದಿನೇಶ್ ಅವರಿಗಿದು ಮೊದಲ ಚಿತ್ರ. ಹಂಸಲೇಖ ಬಳಿ ಮೂರು ವರ್ಷ ಕೆಲಸ ಮಾಡಿರುವ ಅವರು ಅನೇಕ ಧಾರಾವಾಹಿ, ನಾಟಕಗಳಲ್ಲಿ ಕೀಬೋರ್ಡ್ ವಾದಕರಾಗಿ ಅನುಭವ ಪಡೆದವರು. ಹಾಡುಗಳು ಚೆನ್ನಾಗಿ ಬಂದಿವೆ ಎಂಬ ಖುಷಿ ಅವರಲ್ಲಿತ್ತು.ಇದು ನಿಜಕ್ಕೂ ವಿಭಿನ್ನ ಚಿತ್ರ ಎಂದರು ರಮೇಶ್ ಭಟ್. ಈ ಚಿತ್ರದಲ್ಲಿ ನಾಯಕ-ನಾಯಕಿ ಇಲ್ಲ, ಆಕ್ಷನ್ ಇಲ್ಲ, ಆರ್ಭಟ, ಅದ್ದೂರಿ ಇಲ್ಲ.
ನಿರ್ದೇಶಕ ಮತ್ತು ನಿರ್ಮಾಪಕರೇ ನಾಯಕರು ಎನ್ನುವುದು ಅವರ ವಿಶ್ಲೇಷಣೆ. ಈ ಚಿತ್ರ ಮರೆಯಲ್ಲಿದ್ದ ರಂಗಭೂಮಿ ಕಲಾವಿದರಿಗೆ ವೇದಿಕೆ ಒದಗಿಸಿದೆ ಎಂದು ನಿರ್ದೇಶಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.