ADVERTISEMENT

ಬಲ್ಲವರಿಂದ ಎಲ್ಲವ ಕಲಿತು...

ಪ್ರಜಾವಾಣಿ ವಿಶೇಷ
Published 10 ಡಿಸೆಂಬರ್ 2012, 21:01 IST
Last Updated 10 ಡಿಸೆಂಬರ್ 2012, 21:01 IST

ಇತ್ತೀಚೆಗೆ ರಿಯಾಲಿಟಿ ಶೋಗಳ ಕಾಟ ಹೆಚ್ಚಾಗುತ್ತಿದೆ ಎಂಬುದು ಹಲವರ ಅಭಿಪ್ರಾಯ. ಆದರೆ ಪ್ರತಿಭೆಯ ಅನಾವರಣಕ್ಕೆ ನಮಗೆ ಇನ್ನೆಲ್ಲಿ ಉತ್ತಮ ವೇದಿಕೆ ದೊರೆಯುತ್ತದೆ ಎಂಬುದು ಬದುಕು ಬದಲಾಯಿಸಿಕೊಂಡವರ ದೃಢನುಡಿ.

`ಸಾರೆಗಮಪ', `ವಾಯ್ಸ ಆಫ್ ಬೆಂಗಳೂರು', `ಎದೆ ತುಂಬಿ ಹಾಡುವೆನು' ಮುಂತಾದ ಹತ್ತಾರು ವೇದಿಕೆಗಳು ಪ್ರತಿಭಾನ್ವಿತ ಗಾಯಕ-ಗಾಯಕಿಯರನ್ನು ಅನ್ವೇಷಿಸಿದೆ. ಆ ಮೂಲಕ ಬಡವಾಗುತ್ತಿದ್ದ ಕನ್ನಡ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಹೊಸ ಪ್ರತಿಭೆಗಳನ್ನು ಪರಿಚಯಿಸಿದೆ. `ರಿಯಾಲಿಟಿ ಶೋಗಳ ಮೂಲಕವೇ ಬದುಕು ಬದಲಾಯಿತು' ಎನ್ನುವುದು ಅವಕಾಶ ಗಿಟ್ಟಿಸಿಕೊಂಡವರ ಮಾತು. ಇದುವರೆಗೆ ಸುಮಾರು 50 ಸಿನಿಮಾಗಳ 60ಕ್ಕೂ ಹೆಚ್ಚು ಗೀತೆಗಳಿಗೆ ದನಿಯಾದ ಸುಪ್ರಿಯಾ ಕೂಡ ರಿಯಾಲಿಟಿ ಶೋನಿಂದಾಗಿಯೇ ಸಂಗೀತ ಸಂಯೋಜಕರ ಕಣ್ಣಿಗೆ ಬಿದ್ದವರು.

`ಸಂಗೀತದ ಕುಟುಂಬದ ನಾನು ತಾತ ಮುನಿವೆಂಕಟಪ್ಪ ಅವರಿಂದ ಕರ್ನಾಟಕ ಸಂಗೀತ ಕಲಿತೆ. ಮಂಜುಳಾ ಗುರುರಾಜ್ ನನ್ನ ಗುರು. ಹಿನ್ನೆಲೆ ಗಾಯಕಿಯಾಗಬೇಕು, ಸಂಗೀತ ನಿರ್ದೇಶನ ಮಾಡಬೇಕೆಂಬ ಕನಸು ಕಾಣುತ್ತಿದ್ದೆ. ಆದರೆ ಅದಕ್ಕೆ ನಡೆಯಬೇಕಾದ ದಾರಿ ಯಾವುದು? ಯಾರನ್ನು ವಿಚಾರಿಸಬೇಕು ಎಂಬ ಬಗ್ಗೆ ನನಗೆ ಯಾವ ಕಲ್ಪನೆಯೂ ಇರಲಿಲ್ಲ. ಕಾಲೇಜಿನಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದೆ ಅಷ್ಟೆ' ಎಂದು ಹಳೆಯ ದಿನಗಳನ್ನು ನೆನಪಿಸಿಕೊಂಡರು ಸುಪ್ರಿಯಾ.

`ಟೈಮ್ಸ ಯೂತ್ ನನ್ನ ಪ್ರತಿಭೆಗೆ ಮೊದಲು ವೇದಿಕೆ ನೀಡಿದ್ದು. ಆಗ `ಆಪ್ ಜೈಸಾ ಕೋಯಿ' ಎಂಬ ಆಲ್ಬಂನಲ್ಲಿ `ಜಬ್ ಕೈಸಿ ತರಫ್ ದಿಲ್' ಹಾಡನ್ನು `ಟೈಮ್ಸ ಮ್ಯೂಸಿಕ್'ನವರು ಹಾಡಿಸಿದರು. ಅಲ್ಲಿಂದ ಪ್ರಾರಂಭಿಸಿ ಭಾಗವಹಿಸಿದ ಎಲ್ಲಾ ರಿಯಾಲಿಟಿ ಶೋಗಳಲ್ಲಿ ಗೆದ್ದ ಖುಷಿ ನನಗೆ. ಗರುಡಾ ಮಾಲ್ ಆಯೋಜಿಸಿದ್ದ `ವಾಯ್ಸ ಆಫ್ ಬೆಂಗಳೂರು', `ಜೀ ಕನ್ನಡ ಸಾರೆಗಮಪ', ಆಸ್ಟ್ರೇಲಿಯಾದ ಎಎನ್‌ಜಡ್ ಬ್ಯಾಂಕ್ ನಡೆಸಿದ್ದ `ಬ್ರೇಕ್‌ಔಟ್ ಫೆಸ್ಟಿವಲ್'ಗಳಲ್ಲಿ ವಿಜೇತಳಾದೆ. ತಾಜ್‌ಮಹಲ್ ಸಿನಿಮಾದ `ಹೂವಂಥ ಪ್ರೀತಿ ತುಂಬಿ' ನನ್ನ ಮೊದಲ ಹಾಡು. ಸ್ಪರ್ಧೆ ಮುಗಿಸಿಕೊಂಡು ಸ್ಟುಡಿಯೋಕ್ಕೆ ಹೋಗಿ ರೆಕಾರ್ಡಿಂಗ್ ಮುಗಿಸುವ ಹೊತ್ತಿಗೆ ಮಧ್ಯರಾತ್ರಿ ಆಗಿತ್ತು. ಆಗ ನನಗಾದ ಆನಂದವನ್ನು ಬಣ್ಣಿಸಲು ಸಾಧ್ಯವಿಲ್ಲ' ಎನ್ನುವ ಕಾಡಿಗೆ ಹಚ್ಚಿದ ಸುಪ್ರಿಯಾ ಕಣ್ಣುಗಳಲ್ಲಿ ಯಶಸ್ಸಿನ ಸಮಾಧಾನ.

`ಆಗ ನನ್ನದು ತೀರಾ ಸಾಧಾರಣ ಬದುಕು. ಆತ್ಮವಿಶ್ವಾಸದ ಕೊರತೆ, ಸಭಾ ಕಂಪನದ ಭಯ, ಇಲ್ಲಿಗೆ ನಾನು ತಕ್ಕವಳೇ ಎಂಬ ಪ್ರಶ್ನೆ ಕಾಡುತ್ತಲೇ ಇತ್ತು. ಎಲ್ಲಿ ನಿಂತು ಹೇಗೆ ಮಾತಾಡಬೇಕು ಎಂಬುದೂ ಗೊತ್ತಿರಲಿಲ್ಲ. ಆಡಿಶನ್‌ಗೆ ಹೋದಾಗ ಆತಂಕದಲ್ಲಿ ಬೆವರುತ್ತಿದ್ದೆ. ಕ್ಯಾಮೆರಾ ಕಂಡರೆ ಮೈಯೆಲ್ಲಾ ತಣ್ಣಗಾಗುತ್ತಿತ್ತು. ಭಾಷಾ ಸಮಸ್ಯೆಯೂ ಕಾಡದೆ ಬಿಡಲಿಲ್ಲ. ಈಗ ಇವೆಲ್ಲದರಿಂದ ವಿಮುಕ್ತಳಾಗಿದ್ದೇನೆ. ಹಾಡಿನ ದೃಢತೆಯೊಂದಿಗೆ ಮಾತಿನ ಕಲೆಯನ್ನೂ ಕಲಿತದ್ದು ರಿಯಾಲಿಟಿ ಶೋಗಳಿಂದಲೇ'.

`ಕನ್ನಡ ಸಿನಿಮಾ ಕ್ಷೇತ್ರದಲ್ಲಿ ಕನ್ನಡಿಗರಿಗಿಂತ ಬೇರೆಯವರಿಗೇ ಹೆಚ್ಚು ಅವಕಾಶ ಇದೆ ಎಂಬ ಕೂಗು ಇದ್ದೇ ಇದೆ. ಆದರೆ ಸಂಗೀತ ನಿರ್ದೇಶಕ ಒಬ್ಬ ಹಾಡುಗಾರನನ್ನು ಆಯ್ಕೆ ಮಾಡುತ್ತಾನೆ ಎಂದರೆ ಅವನಲ್ಲಿರುವ ಯಾವುದೋ ಪಾಸಿಟಿವ್ ಗುಣ ಇಷ್ಟವಾಗಿದೆ ಎಂದೇ ಅರ್ಥ. ಹೀಗಾಗಿ ನಾವು ಕೊರಗುವ ಬದಲು ಬಲ್ಲವರಿಂದ ಉತ್ತಮವಾದುದನ್ನು ಕಲಿಯಲು ತವಕಿಸುತ್ತಿರಬೇಕು. ಆ ಮಟ್ಟಕ್ಕೆ ನಾವು ಬೆಳೆದಾಗ ಅವಕಾಶಗಳು ತಾಂತಾವೇ ಬರುತ್ತವೆ...' ಸುಪ್ರಿಯಾ ವಾದ ಮುಂದಿಟ್ಟರು.

`ಪ್ರತಿಭಾ ಪ್ರದರ್ಶನಕ್ಕೆ ರಿಯಾಲಿಟಿ ಶೋಗಳು ವೇದಿಕೆಯಾಗುತ್ತವಷ್ಟೆ. ಆದರೆ ಮುಂದಿನ ಯಶಸ್ಸಿನ ಬದುಕನ್ನು ಹೆಣೆದುಕೊಳ್ಳುವವರು ನಾವೇ' ಎನ್ನುವ ಸುಪ್ರಿಯಾ ಹಾಡಿರುವ `ಬಂಗಾರಿ ಗಗನಚುಕ್ಕಿ', `ನೆರಳು ಅರ್ಥ', `ಜಯಮ್ಮನ ಮಗ' ಮುಂತಾದ ಸಿನಿಮಾ ಹಾಡುಗಳು ಇನ್ನೂ ತೆರೆ ಕಾಣಬೇಕಿವೆ.

`ಎಲ್ಲರನ್ನೂ ಸ್ಟಾರ್ಟಿಂಗ್ ಟ್ರಬಲ್ ಕಾಡುತ್ತದೆ. ಆದರೆ ಆತ್ಮವಿಶ್ವಾಸಿಂದ ಮುಂದೆ ಹೋಗಬೇಕು' ಎನ್ನುವ ಇವರಿಗೆ ಹರಿಹರನ್, ರಾಜೇಶ್ ಕೃಷ್ಣನ್, ಕುನಾಲ್ ಗಾಂಜಾವಾಲಾ, ಕಾರ್ತಿಕ್ ಮುಂತಾದವರೊಂದಿಗೆ ದನಿಗೂಡಿಸಿರುವ ಖುಷಿ. ಎಲ್ಲಾ ಸಂಗೀತ ನಿರ್ದೇಶಕರು ಅವರವರ ವಿಶಿಷ್ಟ ಸಾಮರ್ಥ್ಯದಿಂದ ಮೆಚ್ಚುಗೆಯಾಗುತ್ತಾರಂತೆ. ಅವರ ಹಾಡು ಕೇಳಿ ಫೇಸ್‌ಬುಕ್‌ನಲ್ಲಿ ಬರುವ ಉತ್ತರ ಕಂಡು ಅವರಿಗೆ ಹಿಡಿಸಲಾರದಷ್ಟು ಸಂತೋಷ ಆಗಿದೆಯಂತೆ. ಅವರೆಲ್ಲರಿಗೂ ಪ್ರತ್ಯುತ್ತರ ಬರೆಯುವುದು ಅವರ ದಿನಚರಿಯ ಭಾಗ.

ಅಂದಹಾಗೆ ಸುಪ್ರಿಯಾ ಸ್ನೇಹಿತರೊಬ್ಬರ ಆಲ್ಬಂಗೆ ಸಂಗೀತ ಸಂಯೋಜನೆ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಸಂಗೀತವೇ ಅವರ ಬದುಕು. ಸಂಗೀತ ಕಲಿಸುವ ಹುರುಪಿದ್ದರೂ ಸಮಯ ಸಾಕಾಗುತ್ತಿಲ್ಲ. ಎಲ್ಲಾ ಭಾಷೆಗಳಲ್ಲಿ ಹಿನ್ನೆಲೆ ಗಾಯಕಿಯಾಗುವ ಆಸೆಯೊಂದಿಗೆ ಅವರೇ ರಚಿಸಿ ಸಂಯೋಜಿಸುವ ಹಾಡುಗಳನ್ನು ವಿಶ್ವದ ನಾನಾ ವೇದಿಕೆಗಳಲ್ಲಿ ಹಾಡಿ ಸೈ ಎನಿಸಿಕೊಳ್ಳಬೇಕೆಂಬ ಮಹದಾಸೆ ಸುಪ್ರಿಯಾ ರೈ ಅವರದ್ದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT