ADVERTISEMENT

`ಬುದ್ಧು' ದ್ವಿಪಾತ್ರ!

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2013, 19:59 IST
Last Updated 7 ಫೆಬ್ರುವರಿ 2013, 19:59 IST
ಗುರುವೇಂದ್ರ ಶೆಟ್ಟಿ
ಗುರುವೇಂದ್ರ ಶೆಟ್ಟಿ   

ನಿರ್ಮಾಣದ ಹೊಣೆ ಹೊತ್ತುಕೊಂಡು ಸಿನಿಮಾ ಅಂಗಳದಲ್ಲಿ ಓಡಾಡಿದ್ದ ವರದಾ ರೆಡ್ಡಿ ಸ್ವತಃ ಅದೃಷ್ಟ ಪರೀಕ್ಷೆಗೆ ಒಳಪಡುತ್ತಿದ್ದಾರೆ. ಇದು ಎರಡು ಬಗೆಯ ಪರೀಕ್ಷೆ. ಬಂಡವಾಳ ಹೂಡುವ ಎಂದಿನ ಕಾಯಕದ ಜೊತೆಗೆ ಬಣ್ಣವನ್ನೂ ಹಚ್ಚುತ್ತಿದ್ದಾರೆ ಅವರು. `ಬುದ್ಧು' ಅವರ ಹೊಸ ಚಿತ್ರ. `ನೀನ್ಯಾರೆ' ಮತ್ತು `ನನ್ನೆದೆಯ ಹಾಡು' ಎಂಬ ಎರಡು ಚಿತ್ರಗಳನ್ನು ನಿರ್ಮಿಸಿದ್ದ ಅವರು ನಾಯಕನ ಪೋಷಾಕು ಧರಿಸುತ್ತಿರುವುದು ಮಾತ್ರವಲ್ಲ, ಬೇರೆ ಹೆಸರಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನಿರ್ಮಾಪಕರಾಗಿ ವರದಾ ರೆಡ್ಡಿ, ನಾಯಕನಾಗಿ ವರ್ಧನ್. ಈ `ಬುದ್ಧು'ವಿಗೆ ಜೋಡಿಯಾಗಿರುವವರು ಪ್ರಣೀತಾ. ನಿರ್ದೇಶನದ ಜವಾಬ್ದಾರಿ ಗುರುವೇಂದ್ರ ಶೆಟ್ಟಿ ಅವರದು. `ನನ್ನೆದೆಯ ಹಾಡು' ಇದೇ ಜೋಡಿಯ ಚಿತ್ರ.

ನಾಯಕ ಇಲ್ಲಿ `ಬುದ್ಧು'ವಾಗಿರುವುದು ಆತನ ಪೋಷಕರು ಮತ್ತು ಗೆಳತಿಗೆ. ಇದು ಸಂಪೂರ್ಣ ಮತ್ತು ವಾಸ್ತವಕ್ಕೆ ಹತ್ತಿರವಾಗಿರುವ ಯುವ ಮನಸ್ಸುಗಳ ಕೇಂದ್ರಿತ ಚಿತ್ರ ಎನ್ನುವುದು ನಿರ್ದೇಶಕರ ಬಣ್ಣನೆ. ಒಂದು ವರ್ಷಕ್ಕೂ ಅಧಿಕ ಕಾಲ ಅವರು ಚಿತ್ರಕಥೆಯನ್ನು ಹೆಣೆಯುವುದರಲ್ಲಿ ತೊಡಗಿದ್ದರಂತೆ.

ADVERTISEMENT

ಯುವಜನರ ಕನಸು ಮತ್ತು ಭಾವನೆಗಳು ಬದಲಾಗುತ್ತಿರುತ್ತದೆ, ಆದರೆ ಪೋಷಕರು ತಮ್ಮ ಮಕ್ಕಳ ಕುರಿತು ಕಾಣುವ ಕನಸು ಬದಲಾಗುವುದಿಲ್ಲ. ಈ ಕನಸು ಮಕ್ಕಳ ಬಾಲ್ಯವನ್ನು ಓದಿನಲ್ಲಿ ಮುಳುಗಿಸುತ್ತದೆ. ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಂಡು ಅದನ್ನು ಪೂರೈಸುವ ಕರ್ತವ್ಯ ಪೋಷಕರದ್ದಾಗಿರುತ್ತದೆ ಎಂದು ಕಥಾಹಂದರದ ಒಳಹೊಕ್ಕರು ಗುರುವೇಂದ್ರ ಶೆಟ್ಟಿ.

ನಟಿಸಬೇಕೇ ಅಥವಾ ನಿರ್ಮಾಪಕನಾಗಿದ್ದರೆ ಸಾಕೇ ಎಂಬ ಬಗ್ಗೆ ಮತ್ತೆ ಮತ್ತೆ ಯೋಚಿಸಿ ಕೊನೆಗೂ ನಟನೆಗೆ ಇಳಿಯುವ ನಿರ್ಧಾರ ಮಾಡಿದವರು ವರ್ಧನ್. ಕ್ಯಾಮೆರಾ ಎದುರಿಸುವ ಮುನ್ನ ಅವರು ಅಭಿನಯದ ತರಬೇತಿಯನ್ನೂ ಪಡೆದಿದ್ದಾರಂತೆ.

ಚಿತ್ರದ ಮುಹೂರ್ತಕ್ಕೆ ಆಗಮಿಸಿದ್ದ ನಿರ್ದೇಶಕ ಯೋಗರಾಜ್ ಭಟ್ ಚಿತ್ರತಂಡಕ್ಕೆ ಶುಭ ಹಾರೈಸಿದರು. `ಬುದ್ಧು'ವಿಗಾಗಿ ಅವರು ಹಾಡೊಂದನ್ನು ಹೊಸೆಯಲಿದ್ದಾರೆ.

ವಿ. ಮನೋಹರ್, ಜಯಂತ ಕಾಯ್ಕಿಣಿ ಮತ್ತು ಗುರುವೇಂದ್ರ ಸಿಂಗ್ ಸಾಹಿತ್ಯವೂ ಚಿತ್ರಕ್ಕಿದೆ. ಹಲವು ಸಂಗೀತ ನಿರ್ದೇಶಕರ ಬಳಿ ಕೆಲಸ ಮಾಡಿದ್ದ ಅರುಣ್ ಆ್ಯಂಡ್ರ್ಯೂಸ್ ಸ್ವತಂತ್ರವಾಗಿ ಸ್ವರ ಸಂಯೋಜನೆ ಮಾಡುವ ಅವಕಾಶ ಪಡೆದಿದ್ದಾರೆ. ಎರಡು ಹಾಡುಗಳ ಚಿತ್ರೀಕರಣಕ್ಕಾಗಿ ಹೊರದೇಶಕ್ಕೆ ಹಾರುವ ಇರಾದೆ ನಿರ್ಮಾಪಕ ಹಾಗೂ ನಟ ವರ್ಧನ್‌ರದ್ದು.  
             

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.