ADVERTISEMENT

ಮನಃಶಾಸ್ತ್ರಜ್ಞನಿಗೆ ಆತ್ಮದ ಕಾಟ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2018, 19:30 IST
Last Updated 5 ಏಪ್ರಿಲ್ 2018, 19:30 IST
ಶುಭಾ ಪೂಂಜ
ಶುಭಾ ಪೂಂಜ   

‘ಮನುಷ್ಯನ ಅಸ್ತಿತ್ವ, ಬದುಕಿನ ಜಿಜ್ಞಾಸೆ, ಗೊಂದಲ ನನಗೆ ಕಾಡಿತು. ಇದನ್ನು ಜನರಿಗೆ ಹೇಳಬೇಕೆನಿಸಿತು. ಗೀತೆ ರಚನೆಕಾರನಾದ ನನ್ನಲ್ಲಿ ಸ್ವಗತಗಳಿವೆ. ಅವುಗಳಿಗೆ ‘ಜಯಮಹಲ್‌’ನಲ್ಲಿ ದೃಶ್ಯ ರೂಪ ಸಿಕ್ಕಿದೆ’ ಎಂದು ಮಾತಿಗಿಳಿದರು ನಿರ್ದೇಶಕ ಹೃದಯ ಶಿವ.

ಅವರೇ ಕಥೆ, ಚಿತ್ರಕಥೆ, ಸಂಭಾಷಣೆ, ಗೀತರಚನೆ ಮಾಡಿರುವ ‘ಜಯಮಹಲ್‌’ ಚಿತ್ರ ಈ ವಾರ(ಏಪ್ರಿಲ್‌ 6ರಂದು) ತೆರೆ ಕಾಣುತ್ತಿದೆ. ಈ ಕುರಿತು ಮಾಹಿತಿ ಹಂಚಿಕೊಳ್ಳಲು ಚಿತ್ರತಂಡ ಸುದ್ದಿಗೋಷ್ಠಿ ಕರೆದಿತ್ತು. ಇದು ಹಾರರ್‌ ಸಿನಿಮಾ. ತಮಿಳುನಾಡಿನ ಪಳನಿಯಲ್ಲಿ ಸೆಟ್‌ ಹಾಕಿ ಚಿತ್ರೀಕರಣ ನಡೆಸಲಾಗಿದೆ. ಶೂಟಿಂಗ್‌ ವೇಳೆಯೂ ವಿಚಿತ್ರ ಅನುಭವಗಳಾದ ಬಗ್ಗೆ ಚಿತ್ರತಂಡ ಹೇಳಿಕೊಂಡಿತು.

‘ಜಯಮಹಲ್‌ ಎಂದರೆ ಅರಮನೆ. ಇಲ್ಲಿ ಮಾತಂಗಿ ಎಂಬ ರಾಣಿಯ ಆತ್ಮ ಇರುತ್ತದೆ. ಈ ಆತ್ಮ ಮನಃಶಾಸ್ತ್ರಜ್ಞನೊಳಗೆ ಸೇರಿಕೊಳ್ಳುತ್ತದೆ. ಆಗ ಏನೆಲ್ಲಾ ಅವಾಂತರ ಸೃಷ್ಟಿಯಾಗುತ್ತವೆ ಎನ್ನುವುದೇ ಚಿತ್ರದ ಕಥಾವಸ್ತು. ಮನರಂಜನೆ ನೀಡುವುದಷ್ಟೆ ಸಿನಿಮಾದ ಉದ್ದೇಶ’ ಎಂದರು ಹೃದಯ ಶಿವ.

ADVERTISEMENT

ನೀನಾಸಂ ಅಶ್ವಥ್‌ ಎರಡು ವಿಭಿನ್ನ ಶೇಡ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮೂಲಕ ಪೂರ್ಣ ಪ್ರಮಾಣದ ನಾಯಕ ನಟರಾಗುತ್ತಿರುವ ಖುಷಿ ಅವರ ಮೊಗದಲ್ಲಿತ್ತು. ನಟಿ ಶುಭಾ ಪೂಂಜ ಅವರದು ಗೃಹಿಣಿ ಪಾತ್ರವಂತೆ. ಎಂ. ರೇಣುಕ ಸ್ವರೂಪ್‌ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಡಿ. ನಾಗಾರ್ಜುನ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರದ ಮೂರು ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜಿಸಿದ್ದಾರೆ. ಜೊತೆಗೆ, ಹಿನ್ನೆಲೆ ಸಂಗೀತ ಕೂಡ ನೀಡಿದ್ದಾರೆ. ತಮಿಳಿನಲ್ಲಿಯೂ ಸಿನಿಮಾ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.