ADVERTISEMENT

‘ಯುವ ಆರ್‌ಎಂಎಸ್‌’ನ ಹೊಸ ಕಿರುಚಿತ್ರ ‘ಗುರೂಜಿ’

ಕೆ.ಕೆ ಗಂಗಾಧರನ್
Published 26 ಜನವರಿ 2017, 19:30 IST
Last Updated 26 ಜನವರಿ 2017, 19:30 IST
‘ಗುರೂಜಿ’ ಕಿರುಚಿತ್ರದ ದೃಶ್ಯ
‘ಗುರೂಜಿ’ ಕಿರುಚಿತ್ರದ ದೃಶ್ಯ   

‘ಆರ್‌ಎಂಎಸ್‌’ ಎಂಬುದು ‘ರೈಲ್ವೇ ಮೇಲ್ ಸರ್ವೀಸ್’ನ ಸಂಕ್ಷಿಪ್ತ ರೂಪ. ಹೆಸರಿನಲ್ಲಿ ‘ರೈಲು’ ಇದ್ದರೂ ಇದು ಅಪ್ಪಟ ‘ಅಂಚೆ ಇಲಾಖೆ’ಯ ಸುಪರ್ದಿಗೆ ಬರುವ ವಿಭಾಗ. ದೇಶದ ವಿವಿಧೆಡೆಗಳಿಂದ ಬರುವ ಅಂಚೆ ಪತ್ರಗಳನ್ನು, ಭಾಂಗಿಗಳನ್ನು (ಪಾರ್ಸೆಲ್ ಇತ್ಯಾದಿ) ವಿಂಗಡಿಸಿ ಆಯಾ ಊರಿಗೆ ತಲುಪಿಸುವ ಹೊಣೆಗಾರಿಕೆ ಇಲ್ಲಿರುವ ನೌಕರರದ್ದು. ‘ನಾಳೆ ಮಾಡಿದರಾಯಿತು’ ಎನ್ನುವ ಮಾತೇ ಇಲ್ಲಿಲ್ಲ. ದಿನದ 24 ಗಂಟೆಗಳು ಈ ಕಚೇರಿಯ ಕೆಲಸ ನಡೆಯುತ್ತಿರುತ್ತದೆ.

ನಾಲ್ಕು ವರ್ಷಗಳ ಹಿಂದೆ ‘ಆರ್‌ಎಂಎಸ್‌’ನ ನೌಕರರಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಮುಖ್ಯವಾಹಿನಿಗೆ ತರಬೇಕೆಂಬ ಹಂಬಲವುಳ್ಳ ‘ಯುವ ‘ಆರ್‌ಎಂಎಸ್‌’ ಎಂಬ ನೌಕರರ ತಂಡವೊಂದು ರೂಪುಗೊಂಡಿದೆ. ಈ ತಂಡದ ಮುಂಚೂಣಿಯಲ್ಲಿ ಇರುವವರು – ಜಿ. ಪ್ರಶಾಂತ್ ಮತ್ತು ಜಿ.ಎನ್. ವೆಂಕಟೇಶ್.

ಪ್ರಶಾಂತ್ ಕಿರುತೆರೆಯ ಧಾರಾವಾಹಿಗಳಲ್ಲಿ ಸಹ ನಿರ್ದೇಶಕರಾಗಿ ಕಾರ್ಯನಿರ್ವಹಿಸಿರುವ ಅನುಭವಿ. ವೆಂಕಟೇಶ್ ಹಿರಿತೆರೆಯಲ್ಲಿ ಸಹನಿರ್ದೇಶಕರಾಗಿದ್ದ ‘ಗೊಟ್ಟಿಗೆರೆ ನಾಗರಾಜ್’ ಅವರ ಪುತ್ರ. ಇವರಿಬ್ಬರ ಅನುಭವದ ಹಿನ್ನಲೆಯಲ್ಲಿ 2014ರಲ್ಲಿ ‘ಯುವ ಆರ್‌ಎಂಎಸ್‌’ ತಂಡ ‘ನಿಮ್ಮ ನಡೆ – ಯಾವ ಕಡೆ’ ಎಂಬ ಕಿರುಚಿತ್ರ ನಿರ್ಮಿಸಿತ್ತು. ಇದೀಗ ಈ ತಂಡ ‘ಗುರೂಜಿ’ ಎನ್ನುವ ಕಿರುಚಿತ್ರ ರೂಪಿಸಿದೆ.

‘ಗುರೂಜಿ’ ಕಿರುಚಿತ್ರದ ಅವಧಿ 23 ನಿಮಿಷ. ‘ಮೂಢನಂಬಿಕೆಯೆಂಬ ಸಾಮಾಜಿಕ ಪಿಡುಗಿನಿಂದ ಜನಸಾಮಾನ್ಯರನ್ನು ಮುಕ್ತಗೊಳಿಸಲು ಸಾಧ್ಯವೆ’ ಎನ್ನುವ ಪ್ರಶ್ನೆಯನ್ನು ‘ಗುರೂಜಿ’ ನೋಡುಗರಲ್ಲಿ ಉಂಟುಮಾಡುತ್ತದೆ.

‘ಆರ್‌ಎಂಎಸ್‌’ ನೌಕರರಾದ ಬಿ.ಜಿ. ಮಂಜುಳ, ಸಿ. ಭಾಸ್ಕರ್, ನಾಗಲಿಂಗಪ್ಪ ಚನ್ನಬಸಪ್ಪನವರ್, ಕೆ.ಆರ್. ಶೇಖರ್ ಮಂಜುನಾಥ್, ಎಂ. ಸರ್ದಾರ್. ಜಿ.ಎನ್. ವೆಂಕಟೇಶ್, ವೈ. ಬಸವರಾಜು, ಬಿ.ಎಸ್. ಚೇತನ್, ಎಸ್. ಲಕ್ಷ್ಮಿ, ಮುಂತಾದವರು ನಟಿಸಿರುವ ಈ ಕಿರುಚಿತ್ರದ ಕಥೆ ಮತ್ತು ನಿರ್ದೇಶನ ಪ್ರಶಾಂತ್ ಅವರದು. ಎಲ್.ಎಂ.ಮುರಳಿ ಛಾಯಾಗ್ರಹಣ, ಕಿಶೋರ್ ಸಂಕಲನ ಚಿತ್ರಕ್ಕಿದೆ. ಇದರ ನಿರ್ಮಾಣ ವೆಚ್ಚವನ್ನೆಲ್ಲ ‘ಯುವ ಆರ್ಎಂಎಸ್’ ಬಳಗವೇ ವಹಿಸಿಕೊಂಡಿದೆ.

ತೆಳು ಹಾಸ್ಯವೂ ಬೆರೆತ ಈ ಕಿರುಚಿತ್ರವನ್ನು goo.gl/6tegMa ಕೊಂಡಿ ಬಳಸಿ ಅಂತರ್ಜಾಲದಲ್ಲಿ ನೋಡಬಹುದು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.