ADVERTISEMENT

ರಮಣ ರಮಣಿ ಪ್ರೇಮ ಸಲ್ಲಾಪ!

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 19:30 IST
Last Updated 15 ಮಾರ್ಚ್ 2018, 19:30 IST
ರಜತ ಲಕ್ಷ್ಮಿ
ರಜತ ಲಕ್ಷ್ಮಿ   

‘ಹಿಂದಿನ ಸಿನಿಮಾಗಳ ಸೋಲಿನಿಂದ ಪಾಠ ಕಲಿತಿದ್ದೇನೆ. ಈ ಸಲ ಅವುಗಳನ್ನು ತಿದ್ದಿಕೊಂಡು ಶತಾಯ ಗತಾಯ ಜಯಭೇರಿ ಬಾರಿಸಿಯೇ ಬಾರಿಸುತ್ತೇವೆ’ ಹೀಗೆಂದು ಪ್ರತಿಜ್ಞೆ ಮಾಡಿದರು ಅಭಿರಾಮ್‌.

ತಾವು ನಾಯಕನಾಗಿ ನಟಿಸಿದ್ದ ಹಿಂದಿನ ಎರಡು ಸಿನಿಮಾಗಳ ಸೋಲನ್ನು ಮೆಟ್ಟಿನಿಲ್ಲುವ ಹಂಬಲ ಮತ್ತು ‘ರಮಣ ರಮಣಿ’ ಸಿನಿಮಾ ಗೆದ್ದೇ ಗೆಲ್ಲುತ್ತದೆ ಎಂಬ ವಿಶ್ವಾಸ ಎರಡೂ ಅವರ ಮಾತಿನಲ್ಲಿ ಎದ್ದು ಕಾಣುತ್ತಿತ್ತು.

ವೆಸ್ಲೇ ಬ್ರೌನ್‌ ಅವರು ನಿರ್ದೇಶಿಸುತ್ತಿರುವ ಈ ಚಿತ್ರದ ಕುರಿತು ಮಾಹಿತಿ ಹಂಚಿಕೊಳ್ಳಲು ತಂಡ ಪತ್ರಿಕಾಗೋಷ್ಠಿ ಕರೆದಿತ್ತು. ‘ಐ ಲವ್‌ ಯೂ ಎನ್ನುವುದು ಈಗ ಕಾಮನ್‌ ಶಬ್ದವಾಗಿದೆ. ಆದರೆ, ಅದಕ್ಕೆ ಇರುವ ಗಾಢವಾದ ಅರ್ಥ, ಅದರಲ್ಲಿನ ಭಾವನೆಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದೇ ಇಲ್ಲ. ಅದನ್ನು ಹೇಳುವ ಪ್ರಯತ್ನ ಮಾಡಿದ್ದೇವೆ’ ಎಂದರು ಅಭಿರಾಮ್‌.

ADVERTISEMENT

‘ಚಿತ್ರದ ನಾಯಕ, ನಾಯಕಿಯ ಹೆಸರೇ ಶೀರ್ಷಿಕೆಯನ್ನಾಗಿ ಇರಿಸಿದ್ದರೂ ಅದಕ್ಕೂ ಮೀರಿದ ಹಲವು ಬಗೆಗಳಲ್ಲಿ ಇದು ಕಥೆಗೆ ಹೊಂದಿಕೊಳ್ಳುತ್ತವೆ’ ಎನ್ನುವುದು ವೆಸ್ಲೇ ಅವರ ವ್ಯಾಖ್ಯಾನ. ಹುಡುಗ, ಹುಡುಗಿ ಪ್ರೇಮದ ಜತೆಗೆ ತಂದೆ, ಮಗಳ ಬಾಂಧವ್ಯವನ್ನೂ ಅವರು ಕಥೆಯಲ್ಲಿ ಬೆಸೆದಿದ್ದಾರಂತೆ.

‘ಇದೊಂದು ಮ್ಯೂಸಿಕಲ್‌ ರೊಮ್ಯಾಂಟಿಕ್‌ ಕಥೆ. ಭಾವನೆಗಳಿಗೆ ಹೆಚ್ಚು ಒತ್ತುಕೊಟ್ಟಿರುವ ಪ್ರೇಮಕಾವ್ಯ. ಈಗಾಗಲೇ, ಇಪ್ಪತ್ತರಷ್ಟು ಚಿತ್ರೀಕರಣ ಮುಗಿದಿದೆ. ಶಿವಮೊಗ್ಗದಲ್ಲಿ ಒಂದು ಹಾಡಿನ ಚಿತ್ರೀಕರಣ ಮಾಡಿದ್ದೇವೆ. ಇನ್ನೊಂದು ಹಾಡನ್ನು ಸ್ವಿಟ್ಜರ್ಲೆಂಡ್‌ನಲ್ಲಿ ಚಿತ್ರೀಕರಿಸುವ ಯೋಚನೆ ಇದೆ. ಉಳಿದಂತೆ ಮಂಗಳೂರು, ಮಡಿಕೇರಿ, ಸಕಲೇಶಪುರ, ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡುತ್ತೇವೆ’ ಎಂದು ನಿರ್ದೇಶಕರು ವಿವರಿಸಿದರು.

‘ಇದೊಂದು ಭಿನ್ನವಾದ ಪ್ರೇಮಕಥೆ’ ಎಂದಷ್ಟೇ ಹೇಳಿ ಮಾತು ಮುಗಿಸಿದರು ನಾಯಕಿ ರಜತಲಕ್ಷ್ಮಿ. ಜೋಯಲ್‌ ಮತ್ತು ಅಭಿಲಾಷ್‌ ಈ ಚಿತ್ರದ ಐದು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಜಯಂತ ಕಾಯ್ಕಿಣಿ, ವಿ. ನಾಗೇಂದ್ರಪ್ರಸಾದ್‌, ಗೌಸ್‌ ಪೀರ್‌ ಹಾಡುಗಳನ್ನು ಬರೆದಿದ್ದಾರೆ.

ಸಿನಿಮಾ ನೋಡುವ ವ್ಯಾಮೋಹದ ಕಾರಣದಿಂದಲೇ ಒಳ್ಳೆಯ ಸಿನಿಮಾ ನಿರ್ಮಾಣ ಮಾಡಬೇಕು ಎಂಬ ಅಭಿರುಚಿಯನ್ನೂ ಹುಟ್ಟಿಸಿಕೊಂಡಿರುವ ಸಿ. ಜಯರಾಮ್‌ ‘ರಮಣ ರಮಣಿ’ಗೆ ಹಣದ ಬೆಂಬಲ ನೀಡಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿಯನ್ನೂ ನಿರ್ದೇಶಕರೇ ಹೊತ್ತುಕೊಂಡಿದ್ದಾರೆ. ಜತಿನ್‌, ಪದ್ಮಜಾ ರಾವ್‌, ಶರತ್‌ ಲೋಹಿತಾಶ್ವ, ಕುರಿ ಪ್ರತಾಪ್‌ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.