ಹಿತವಾದ ಮಳೆಯಲ್ಲಿ ತೋಯ್ದು ಬಂದು ಸವಿ ನೆನಪುಗಳನ್ನು ಚಪ್ಪರಿಸುವಂತೆ ಮಾತಿಗೆ ಕೂತಿತ್ತು `ರೋಮಿಯೊ~ ಬಳಗ.
ಅದು ಸಂತೋಷಕೂಟ. ಯಶಸ್ಸಿನ ನೇವರಿಕೆಯಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದು `ರೋಮಿಯೊ~ ಚಿತ್ರದ ವಿತರಕ ಕೆ. ಮಂಜು. ಅವರು ಮುಂದಿಟ್ಟ ಲೆಕ್ಕಾಚಾರ- `ಮೊದಲ ವಾರ ಚಿತ್ರ ತೆರೆಕಂಡಿದ್ದು ಎಂಬತ್ತು ಚಿತ್ರಮಂದಿರಗಳಲ್ಲಿ. ಒಟ್ಟಾರೆ ಗಳಿಕೆ 2.70 ಕೋಟಿ ರೂಪಾಯಿ. ಥಿಯೇಟರ್ ಬಾಡಿಗೆ ತೆಗೆದಿಟ್ಟರೆ ನಿರ್ಮಾಪಕರ ಪಾಲು 1.96 ಕೋಟಿ ರೂಪಾಯಿ~.
ತೆಲುಗಿನ ರಾಜಮೌಳಿ ನಿರ್ದೇಶನದ `ಈಗ~ ಚಿತ್ರದ ಭರ್ಜರಿ ಪ್ರದರ್ಶನದ ನಡುವೆಯೂ `ರೋಮಿಯೊ~ ಚಾರ್ಮ್ ಕಳೆದುಕೊಂಡಿಲ್ಲ, ಎರಡನೇ ವಾರವೂ ಗಳಿಕೆ ಏರುಮುಖದಲ್ಲೇ ಇದೆ ಎಂದ ಮಂಜು ಅವರ ಮಾತುಗಳಲ್ಲಿ ಲಾಭದ ವಾಸನೆಯಿತ್ತು.
ಇನ್ನೆರಡು ವಾರಗಳಲ್ಲಿ ನಿರ್ಮಾಪಕರ ಬಂಡವಾಳ ವಾಪಸ್ಸಾಗಲಿದೆ ಎನ್ನುವ ಆಶಾವಾದ ವ್ಯಕ್ತಪಡಿಸಿದ ಅವರು, ಮೊದಲ ವಾರಕ್ಕಿಂತಲೂ ಎರಡನೇ ವಾರ ಚಿತ್ರಮಂದಿರಗಳನ್ನು ಹೆಚ್ಚಿಸಿದ್ದಾರಂತೆ.
ಸಂತಸದ ಸಂದರ್ಭದಲ್ಲೊಂದು ಅಪಸ್ವರವೂ ವ್ಯಕ್ತವಾಯಿತು. ಕನ್ನಡ ಚಿತ್ರಗಳಿಗೆ ಆದ್ಯತೆ ಕೊಡದಿರುವ ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳ ಬಗ್ಗೆ ಮಂಜು ಕಿಡಿ ಕಾರಿದರು. ಗಣೇಶ್ ಅವರಂಥ ನಟನ ಚಿತ್ರಗಳ ಪ್ರದರ್ಶನಕ್ಕೇ ಮಲಿಫ್ಲೆಕ್ಸ್‌ಗಳು ಹಿಂದೇಟು ಹೊಡೆಯುತ್ತವೆ.
ನಮ್ಮ ಸಂಪನ್ಮೂಲಗಳನ್ನು ಬಳಸಿಕೊಂಡು ಪರಭಾಷಾ ಚಿತ್ರಗಳಿಗೆ ಮಣೆ ಹಾಕುವ ಪ್ರವೃತ್ತಿಗೆ ತಡೆ ಹಾಕಬೇಕು ಎಂದರು. `ರೋಮಿಯೊ~ಗೆ ಇನ್ನೂ ಹೆಚ್ಚಿನ ಥಿಯೇಟರ್‌ಗಳು ಸಿಕ್ಕಿದ್ದರೆ ಮೊದಲ ವಾರದ ಗಳಿಕೆ ಇನ್ನೂ ಐವತ್ತು ಲಕ್ಷ ಹೆಚ್ಚುತ್ತಿತ್ತು ಎನ್ನುವ ಲೆಕ್ಕಾಚಾರ ಅವರದು.
ನಾಯಕ ನಟ ಗಣೇಶ್ ಮಾತುಗಳಲ್ಲೂ `ರೋಮಿಯೊ~ ಗೆಲುವಿನ ಸಂಭ್ರಮವಿತ್ತು. ಒಳ್ಳೆಯ ಚಿತ್ರ ರೂಪಿಸಿದ್ದಕ್ಕಾಗಿ ನಿರ್ದೇಶಕ ಪಿ.ಸಿ. ಶೇಖರ್ ಅವರನ್ನು ಅಭಿನಂದಿಸಿದ ಅವರು, ನಿರ್ದೇಶಕರನ್ನು ಮನೆಗೆ ಕರೆದು ಕಡಲೇಬೀಜ ಹೆಚ್ಚಾಗಿದ್ದ ಪುಳಿಯೋಗರೆ ಪಾರ್ಟಿ ಕೊಟ್ಟರಂತೆ. ಸಿನಿಮಾದ ಗೆಲುವು ಮತ್ತಷ್ಟು ದೊಡ್ಡದಾದರೆ ಪರಮಾನ್ನವನ್ನೇ ಅವರು ಬಡಿಸಬಹುದೇನೊ?
ನಿರ್ದೇಶಕ ಶೇಖರ್‌ಗೆ ತಮ್ಮ ಚಿತ್ರವನ್ನು ಪ್ರೇಕ್ಷಕರು ಮೆಚ್ಚಿಕೊಂಡ ಬಗ್ಗೆ ಸಮಾಧಾನವಿದೆ. ಈ ವರ್ಷ ಮತ್ತೊಂದು ಕನ್ನಡ ಚಿತ್ರ ನಿರ್ಮಿಸುವ ಪ್ರಯತ್ನದಲ್ಲಿ ಅವರಿದ್ದಾರಂತೆ. ಕಡಿಮೆ ಮಾತಿನಲ್ಲೇ ಸಂತೋಷ ವ್ಯಕ್ತಪಡಿಸಿದ ನಿರ್ಮಾಪಕರಾದ ರಮೇಶ್ ಕುಮಾರ್ ಮತ್ತು ನವೀನ್ ಸಂತೋಷಕೂಟದ ಉಸ್ತುವಾರಿ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.