ADVERTISEMENT

...ಲವ್ನಲ್ಲಿ ಬಿದ್ದವರು

​ಪ್ರಜಾವಾಣಿ ವಾರ್ತೆ
Published 21 ಜೂನ್ 2012, 19:30 IST
Last Updated 21 ಜೂನ್ 2012, 19:30 IST
...ಲವ್ನಲ್ಲಿ ಬಿದ್ದವರು
...ಲವ್ನಲ್ಲಿ ಬಿದ್ದವರು   

`ಐಯಾಮ್ ಇನ್ ಲವ್~ ಚಿತ್ರೀಕರಣ ಪೂರ್ಣಗೊಳಿಸಿದ ಸಂತಸದಲ್ಲಿದ್ದರು ನಿರ್ದೇಶಕ ನಂದಕುಮಾರ್. ಸಹಜವಾಗಿಯೇ ಮಾತು ಚಿತ್ರೀಕರಣದತ್ತ ಹೊರಳಿತು. ಮಾರ್ಚ್ 26ರಂದು ಅವರು ಶೂಟಿಂಗ್ ಆರಂಭಿಸಿದ್ದರು. ನಿರ್ಮಾಪಕರಿಗೆ ಕೊಟ್ಟ ಮಾತಿನಂತೆ ಒಟ್ಟು ಮೂವತ್ತೊಂದು ದಿನಗಳಲ್ಲಿ ಚಿತ್ರೀಕರಣ ಪೂರೈಸಿದ್ದರು.

ನಾಯಕಿಗಾಗಿ ನಾಯಕ ತ್ಯಾಗ ಮಾಡುವ ಕೊನೆಯ ದೃಶ್ಯ ಅತ್ಯಂತ ಆಪ್ತವಾಗಿ ಭಾವುಕವಾಗಿ ಮೂಡಿ ಬಂದಿದೆಯಂತೆ.ಈಗ ಅವರ ಮುಂದಿರುವುದು ಪ್ರೇಕ್ಷಕರೆಡೆಗೆ ಚಿತ್ರವನ್ನು ಕೊಂಡೊಯ್ಯುವ ಕೆಲಸ. `ಜನರ ಪ್ರತಿಕ್ರಿಯೆ ಪಡೆಯುವುದು ಅವರ ಮನಮುಟ್ಟುವುದು ಮುಖ್ಯ.
 
ಚಿತ್ರದಲ್ಲಿ ಐದು ಹಾಡುಗಳಿದ್ದು ಉತ್ತಮ ಸಂಗೀತ ನೀಡುವಲ್ಲಿಯೂ ಗೆದ್ದಿದ್ದೇವೆ. ಪಿ.ಕೆ.ಎಚ್ ದಾಸ್ ಅವರ ಕ್ಯಾಮೆರಾ ಕೈಚಳಕ ದೃಶ್ಯಕಾವ್ಯವನ್ನೇ ಸೃಷ್ಟಿಸಿದೆ~ ಎಂದರು. ಜತೆಗೆ ಚಿತ್ರತಂಡವನ್ನು ಮನಸಾರೆ ಶ್ಲಾಘಿಸಿದರು.

ಚಿತ್ರದ ಕ್ಲೈಮ್ಯಾಕ್ಸ್ ಬಗ್ಗೆ ಐದಾರು ರೀತಿಯ ಚರ್ಚೆಗಳು ನಡೆದವಂತೆ. ಆದರೆ ಅದರಲ್ಲಿ ಉತ್ತಮ ಕ್ಲೈಮ್ಯಾಕ್ಸ್ ನೀಡಿದ್ದು ನಿರ್ದೇಶಕರ ಪುತ್ರ ಕಿರಣ್‌ಕುಮಾರ್. ನಟ ಧರ್ಮ ಅವರದು ಚಿತ್ರದಲ್ಲಿ ನಾಯಕಿಯ ಅಣ್ಣನ ಪಾತ್ರ.

ಚಿತ್ರ ಬಿಡುಗಡೆಗೂ ಮುನ್ನವೇ ಹೊಸಬರನ್ನು ನಿರ್ದೇಶಕರು ಹೊಗಳುತ್ತಿರುವುದು ಅವರೊಳಗೆ ಪುಳಕ ಹುಟ್ಟುಹಾಕಿತ್ತು. ಸಾಯಿಕಾರ್ತಿಕ್ ಅವರು ನಿರೀಕ್ಷೆಗೂ ಮೀರಿ ಮನೋಮೂರ್ತಿ, ಹರಿಕೃಷ್ಣ ಅವರ ಎತ್ತರಕ್ಕೇರಿ ಸಂಗೀತ ನೀಡಿದ್ದಾರೆ ಎಂಬ ಮೆಚ್ಚುಗೆಯ ಮಾತು ಅವರಿಂದ.

ಆದರೆ ಈ ಶ್ಲಾಘನೆಯನ್ನು ಸಾಯಿ ಕಾರ್ತಿಕ್ ನಿರ್ದೇಶಕರಿಗೆ ಮರಳಿಸಿದ್ದರು. ನಂದಕುಮಾರ್ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರಿಂದಲೇ ಹಾಡುಗಳು ಉತ್ತಮವಾಗಿ ಮೂಡಿ ಬರಲು ಸಾಧ್ಯವಾಯಿತು ಎಂದ ಅವರು ತಮ್ಮ ಕೆಲಸ ಜನಮನ ಗೆಲ್ಲಲಿದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದರು.

ನಂತರ ಸರದಿಯ ಮೇಲೆ ಧನ್ಯವಾದ ಅರ್ಪಣೆ ಕಾರ್ಯ ಆರಂಭವಾಯಿತು. ನಾಯಕ ನಟ ಮಹೇಶ್ `ತಂದೆಯ ಸ್ಥಾನದಲ್ಲಿ ನಿಂತು ನಿರ್ದೇಶಕರು ಮಾರ್ಗದರ್ಶನ ಮಾಡಿದ್ದಾರೆ. ಕೇರಳದಲ್ಲಿ ಹಾಡುಗಳ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಅಲ್ಲಿನ ಜನರೂ ಸಂಗೀತವನ್ನು ಗುನುಗುತ್ತಿದ್ದುದು ವಿಶೇಷವಾಗಿ ಕಂಡಿತು~ ಎಂದರು.

ನಾಯಕಿಯರಾದ ಕಾವ್ಯ ಹಾಗೂ ನೇಹಾ ಅವರಿಗೆ ಅಭಿನಯ ಮೊದಲ ಅನುಭವ. ಮಾಡೆಲಿಂಗ್ ಹಿನ್ನೆಲೆಯಿಂದ ಬಂದ ಕಾವ್ಯ ಅವರಿಗೆ ಕ್ಯಾಮೆರಾ ಎದುರಿಸುವುದು ಕಷ್ಟವಾಗಲಿಲ್ಲವಂತೆ. ನೇಹಾ ಅವರಿಗೆ ಮೊದಮೊದಲು ಭಯವಾದರೂ ನಂತರ ಒಗ್ಗಿಕೊಂಡರಂತೆ.

ಜ್ಯೂನಿಯರ್ ರಂಗಾಯಣ ರಘು (ಕೊಟ್ರೇಶ್) ಹಾಗೂ ರಂಗನಾಥ್ ನಾಯಕನ ಸ್ನೇಹಿತರಾಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿರ್ಮಾಪಕಿ ಲಲಿತಾ ಚೆನ್ನೇಗೌಡ ಈ ಸಂದರ್ಭದಲ್ಲಿ ಹಾಜರಿದ್ದರು. ಚಿತ್ರದ ಸಂಕಲನಕಾರ್ಯ ಮುಂದುವರಿಯುತ್ತಿದ್ದು ಬರುವ ವಾರದಲ್ಲಿ ಡಬ್ಬಿಂಗ್ ಕಾರ್ಯ ಆರಂಭವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.