ADVERTISEMENT

ಲೇಡಿ ಸಿಂಗಂ

ತಥಕು ಬಳಕು

ಪ್ರಜಾವಾಣಿ ವಿಶೇಷ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST

ಮಾ  ನಿಟರ್ ಮುಂದೆ ನಿರ್ದೇಶಕ ಸೌಮಿಕ್ ಸೆನ್. ಅನತಿ ದೂರದಲ್ಲಿ ಗುಲಾಬಿ ಬಣ್ಣದ ಸೀರೆಗಳು, ಮೇಲ್ಭಾಗದಲ್ಲಿ ಒಂದು ಸೆಣಬಿನ ಮೇಲು ಉಡುಗೆ ಹಾಕಿಕೊಂಡ ವನಿತೆಯರು. ದೂರದಿಂದ ಕಂಡರೆ ಎಲ್ಲರೂ ಒಂದೇ ಎಂಬಂಥ ನೋಟ. ಮುಂಬೈನ ದೊಡ್ಡ ಮೈದಾನ. ಬಿಸಿಲು, ದೂಳು. ಹಾಗಾಗಿ ಅವರೆಲ್ಲಾ ಮುಖವನ್ನು ಬಿಳಿ ವಸ್ತ್ರಗಳಿಂದ ಮುಚ್ಚಿಕೊಂಡಿದ್ದರು. ಸೌಮಿಕ್ ಸೆನ್ ‘ರೆಡಿ’ ಎನ್ನುತ್ತಿದ್ದಂತೆ ಅವರೆಲ್ಲಾ ಮೈದಾನದ ಮುಖ್ಯ ಭಾಗದಲ್ಲಿ ಜಮೆಯಾಗುತ್ತಿದ್ದರು.
ಗುಲಾಬಿ ಬಣ್ಣದ ಸೀರೆ ಉಟ್ಟಿದ್ದ ವನಿತೆಯರೆಲ್ಲಾ ಮುಖದ ಮೇಲಿನ ಬಿಳಿ ವಸ್ತ್ರ ಬಿಚ್ಚಿ, ಶಾಟ್‌ಗೆ ಸನ್ನದ್ಧರಾದಂತೆ ಆ ಗುಂಪಿನಲ್ಲಿದ್ದ ಒಬ್ಬ ವನಿತೆಯಿಂದ ಗುಲಾಬಿ ನಗೆ. ಅವರೇ ಮಾಧುರಿ ದೀಕ್ಷಿತ್.

ಒಂದು ಕಾಲದಲ್ಲಿ ತಮ್ಮ ನೃತ್ಯ, ಭಾವಾಭಿನಯದ ಮೂಲಕ ಸಂಚಲನ ಮೂಡಿಸಿದ್ದ ಮಾಧುರಿ ಈಗ ಸಾಹಸ ಸನ್ನಿವೇಶಗಳನ್ನು ನಿಭಾಯಿಸುವ ಸವಾಲಿಗೆ ಎದೆಗೊಟ್ಟು ಸೈ ಎನ್ನಿಸಿಕೊಂಡಿದ್ದಾರೆ.

ಈ ವಯಸ್ಸಿನಲ್ಲಿ ಸಾಹಸ ದೃಶ್ಯಗಳನ್ನು ನಿಭಾಯಿಸುವುದು ಕಷ್ಟವಾಗಲಿಲ್ಲವೇ ಎಂದು ಒಬ್ಬ ಸುದ್ದಿಮಿತ್ರ ಕೇಳಿದ್ದೇ ಮಾಧುರಿ ಮೊದಲಿಗೆ ಹುಬ್ಬು ಹಾರಿಸಿದರು. ‘ಸಲ್ಮಾನ್ ಖಾನ್ ಅಥವಾ ಅಮಿತಾಭ್ ಜೀ ಅವರನ್ನು ಇಂಥ ಪ್ರಶ್ನೆ ಕೇಳುವಿರಾ? ಅವರು ಪುರುಷರು ಎಂಬ ಕಾರಣಕ್ಕೆ ಯಾವ ವಯಸ್ಸಿನಲ್ಲಿ ಬೇಕಾದರೂ ಸಾಹಸ ಮಾಡಬಹುದು ಎಂದು ಭಾವಿಸಿರುತ್ತೀರಿ. ನಾನು ಮಹಿಳೆ. ಹಾಗಾಗಿ ಸಾಹಸ ಮಾಡುವುದು ಕಷ್ಟ ಎಂಬುದು ನಿಮ್ಮ ಊಹೆ. ಇಷ್ಟಕ್ಕೂ ನಿಮ್ಮ ಊಹೆ ತಪ್ಪು’ ಎಂದು ಹದವಾದ ಖಾರ ಬೆರೆಸಿದಂಥ ಪ್ರತಿಕ್ರಿಯೆಯನ್ನು ಮಾಧುರಿ ಕೊಟ್ಟರು.

ಸೌಮಿಕ್ ಸೆನ್ ಚೊಚ್ಚಿಲ ಚಿತ್ರದಲ್ಲೇ ಮಾಧುರಿ, ಜೂಹಿ ತರಹದ ಅನುಭವಿ ನಟಿಯರನ್ನು ಅಭಿನಯಿಸಲು ಒಪ್ಪಿಸಿರುವುದು ಬಿ–ಟೌನ್‌ನಲ್ಲಿ ಸುದ್ದಿಯಾಗಿತ್ತು. ಸಂಪತ್ ಪಾಲ್ ಎಂಬುವರು ನಿಜ ಬದುಕಿನಲ್ಲಿ ಗುಲಾಬಿ ಗ್ಯಾಂಗ್ ಮೂಲಕ ಹೋರಾಟ ಮಾಡಿದ ಕಥಾನಕವನ್ನೇ ಸೌಮಿಕ್ ಸಿನಿಮಾ ಮಾಡುತ್ತಿದ್ದಾರೆ ಎಂಬ ಅಭಿಪ್ರಾಯವಿತ್ತು. ಆದರೆ ಅದನ್ನು ಸಾರಾಸಗಟಾಗಿ ನಿರಾಕರಿಸುವ ಈ ಯುವ ನಿರ್ದೇಶಕ, ತಮ್ಮ ಚಿತ್ರವನ್ನು ‘ಇಂಗ್ಲೋರಿಯಸ್ ಬಾಸ್ಟರ್ಡ್ಸ್’ ಚಿತ್ರಕ್ಕೆ ಹೋಲಿಸಿಕೊಳ್ಳುತ್ತಾರೆ. ಗುಲಾಬಿ ಬಣ್ಣದ ಸೀರೆ ಉಟ್ಟ ನೀರೆಯರ ಗ್ಯಾಂಗ್ ಎಂಬುದನ್ನು ಹೊರತುಪಡಿಸಿ ಸಂಪತ್ ಪಾಲ್ ಹೋರಾಟಕ್ಕೂ ತಮ್ಮ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲ ಎಂಬುದು ಸೌಮಿಕ್ ಸ್ಪಷ್ಟನೆ.

ಮಾಧುರಿ ಗುಲಾಬಿ ಗ್ಯಾಂಗ್ ಚಿತ್ರಕ್ಕೆಂದೇ ಪ್ರತಿ ಸಾಹಸ ದೃಶ್ಯಕ್ಕೂ ಮುನ್ನ ಒಂದು ವಾರ ದೈಹಿಕವಾಗಿ ಸಿದ್ಧರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಅವರು ಟೇಕ್ವಾಂಡೋ ಕಲಿತಿದ್ದೂ ಈಗ ನೆರವಿಗೆ ಬಂದಿದೆ. ಚಿತ್ರದಲ್ಲಿ ಜೂಹಿ ಚಾವ್ಲಾ ಭ್ರಷ್ಟ ರಾಜಕಾರಣಿಯ ಪಾತ್ರ ನಿರ್ವಹಿಸಿದ್ದು, ಸೌಮಿಕ್ ಪ್ರಕಾರ ಅದು ಅವರ ಜೀವಮಾನದ ಮರೆಯಲಾಗದ ಪಾತ್ರ.

‘ಮಾಧುರಿಯನ್ನು ಲೇಡಿ ಸಿಂಗಂ ಆಗಿ ತೋರಿಸಿರುವ ಸೌಮಿಕ್ ಜನ ನೋಡುವಂಥ ಮಹಿಳಾ ಚಿತ್ರವನ್ನು ಮಾಡಬೇಕು ಎಂಬ ನಿರ್ಧಾರದಿಂದಲೇ ಇಂಥ ವಿಷಯ ಎತ್ತಿಕೊಂಡಿದ್ದಾರೆ. ನಾಯಕರಷ್ಟೇ ಆಕ್ಷನ್ ಚಿತ್ರಗಳನ್ನು ಮಾಡಬಲ್ಲರು ಎಂಬ ಅಭಿಪ್ರಾಯ ತಪ್ಪು. ಮಾಧುರಿ ನಮ್ಮ ಚಿತ್ರದಲ್ಲಿ ಲೇಡಿ ಸಿಂಗಂ ಇದ್ದಂತೆ. ಅವರು ಮೇಲಕ್ಕೆ ಎಗರಿ ರೌಡಿಗಳಿಗೆ ಹೊಡೆದಿದ್ದಾರೆ. ನಿಂತ ನೆಲದಿಂದ ಚಿಮ್ಮಿ, ಲಾರಿ ಮೇಲೆ ನಿಂತ ರೌಡಿಗೆ ಬೆವರಿಳಿಸಿದ್ದಾರೆ. ಸಾಹಸ ನಿರ್ದೇಶಕ ಪರ್ವೇಜ್, ಮಾಧುರಿ ಅವರಿಂದ ಎಷ್ಟೆಲ್ಲಾ ಸಾಧ್ಯವೋ ಅಷ್ಟೂ ಸಾಹಸ ತೆಗೆಸಿದ್ದಾರೆ. ಹಳೆ ಮಾಧುರಿಯ ಹೊಸ ಮಾದರಿಗಾಗಿ ನಮ್ಮ ಸಿನಿಮಾ ನೋಡಿ’ ಎಂದು ಸೌಮಿಕ್ ಆಹ್ವಾನ ನೀಡುತ್ತಾರೆ.

ಮಾಧುರಿ ಹಗ್ಗ ಕಟ್ಟಿ ಮೇಲಕ್ಕೆ ಎಳೆಯುವ ಸಾಹಸ ದೃಶ್ಯಗಳ ಭಾಗವಾದಾಗ ಮೊದಮೊದಲು ಅವರಿಗೆ ಆದದ್ದು ಭಯ. ಆಮೇಲೆ ಥ್ರಿಲ್. ‘ನಾನು ಮೊದಲು ಎಂದೂ ಅಷ್ಟು ಎತ್ತರಕ್ಕೆ ಚಿಮ್ಮುವಂಥ ಸನ್ನಿವೇಶಗಳನ್ನು ನಿಭಾಯಿಸಿರಲಿಲ್ಲ. ಸೊಂಟ, ಕಂಕುಳಿಗೆ ರೋಪ್ ಹಾಕಿ ಮೇಲಕ್ಕೆ ಎತ್ತುವ ದೃಶ್ಯಕ್ಕೆ ಎಲ್ಲಾ ಸಿದ್ಧರಾಗಿದ್ದರು. ಅಷ್ಟು ಎತ್ತರದ ಲಾರಿಯತ್ತ ಚಿಮ್ಮುವುದು ನನಗೆ ಆತಂಕದ ಅನುಭವವೇ ಆಗಿತ್ತು. ಕೊನೆಗೂ ನಿರ್ದೇಶಕರ ಇಚ್ಛೆಯಂತೆ ಆ ಶಾಟ್ ಮೂಡಿಬಂದಾಗ ಹೆಮ್ಮೆ ಎನಿಸಿತು. ನೃತ್ಯಕ್ಕೂ ಸಾಹಸಕ್ಕೂ ಲಯದಲ್ಲಿ ಒಂದು ಸಂಬಂಧ ಇರುತ್ತದೆ. ನಾವು ಎರಡರಲ್ಲೂ ಸಂಪೂರ್ಣವಾಗಿ ಒಪ್ಪಿಸಿಕೊಳ್ಳದೇ ಇದ್ದರೆ ಅಪಘಾತ ಆಗುವ ಸಂಭವವೇ ಹೆಚ್ಚು. ಹಾಗಾಗಿ ನೃತ್ಯಕ್ಕೆ ಅರ್ಪಿಸಿಕೊಂಡಂತೆ ಸಾಹಸಕ್ಕೂ ಒಪ್ಪಿಸಿಕೊಂಡೆ’ ಎಂಬುದು ಮಾಧುರಿ ಪ್ರತಿಕ್ರಿಯೆ.
‘ಗುಲಾಬಿ ನೋಡಿ, ಮಾಧುರಿ ಹೀಗೂ ಇದ್ದಾರೆ ಎಂಬುದನ್ನು ಅರಿಯಿರಿ’ ಎಂದು ಆತ್ಮವಿಶ್ವಾಸದಿಂದ ಹೇಳಿಕೊಳ್ಳುವಷ್ಟು ಮಾಧುರಿ ಖುಷಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.