ADVERTISEMENT

ಸಕಲೇಶಪುರದಲ್ಲಿ ಜಿಂಕೆ ಮರಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 19:30 IST
Last Updated 19 ಏಪ್ರಿಲ್ 2012, 19:30 IST

ಯೋಗೀಶ್ ನಾಯಕರಾಗಿ ನಟಿಸಿರುವ ಹೊಸ ಚಿತ್ರ `ಜಿಂಕೆ ಮರಿ~ 15 ದಿನಗಳ ಚಿತ್ರೀಕರಣವನ್ನು ಸಕಲೇಶಪುರದಲ್ಲಿ ಮುಗಿಸಿದೆ. `ರಣ~ ಚಿತ್ರದ ನಾಯಕಿಯರಲ್ಲಿ ಒಬ್ಬರಾದ ಸೋನಿಯಾ ಗೌಡ ಯೋಗೀಶ್‌ಗೆ ಜೋಡಿಯಾಗಿದ್ದಾರೆ. `ಜಿಂಕೆ ಮರೀನಾ..~ ಎಂದು ಹಾಡಿ ಕುಣಿದಿದ್ದ ಯೋಗೀಶ್ ಈಗ ಅದೇ ಹಾಡಿನ ಶೀರ್ಷಿಕೆಯುಳ್ಳ ಚಿತ್ರದಲ್ಲಿ ನಟಿಸುತ್ತಿರುವುದು ವಿಶೇಷ.

9 ಟು 12 ಎಂಬ ಸಿನಿಮಾ ನಿರ್ಮಿಸಿದ್ದ ಮಹೇಶ್ ಬಾಳೆಕುಂದ್ರಿ `ಜಿಂಕೆ ಮರಿ~ ನಿರ್ಮಿಸುತ್ತಿದ್ದಾರೆ. ತೆಲುಗಿನ `ಬಿಂದಾಸ್~ ಚಿತ್ರದ ಸ್ಫೂರ್ತಿ ಪಡೆದ ಚಿತ್ರವಿದು. ಪಾತ್ರವೊಂದರಲ್ಲಿ ಅಭಿನಯಿಸಿರುವ ನಿರ್ಮಾಪಕರು `ಮರುಭೂಮಿಯಾಗಿದೆ ನಿನ್ನ ಮನಸ್ಸು~ ಹಾಡನ್ನೂ ಹಾಡಿದ್ದಾರೆ.

ವಿಜಯ್ ಗುಜ್ಜಾರ್, ಬುಕ್ಕಾಪಟ್ಟಣ ವಾಸು ಮುಂತಾದವರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದಿದ್ದ ಕೆ.ಪಿ.ನವೀನ್‌ಕುಮಾರ್ ಮೊದಲ ಬಾರಿಗೆ ಸ್ವತಂತ್ರವಾಗಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸಾಯಿ ಕಾರ್ತಿಕ್ ಸ್ವರ ಸಂಯೋಜನೆ, ವೀನಸ್ ಮೂರ್ತಿ ಛಾಯಾಗ್ರಹಣ ಚಿತ್ರಕ್ಕಿದೆ.
 
ಒಂದನೇ ಹಂತದ ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ ಮೇ ಮೊದಲ ವಾರದಿಂದ ದ್ವಿತೀಯ ಹಂತದ ಚಿತ್ರೀಕರಣ ನಡೆಸಲಿದೆ. ಅವಿನಾಶ್, ಶರತ್ ಲೋಹಿತಾಶ್ವ, ಶೋಭರಾಜ್, ರಮೇಶ್ ಭಟ್, ಜೈಜಗದೀಶ್, ಹರೀಶ್ ರಾಯ್, ಅಚ್ಯುತರಾವ್, ಶರಣ್, ಬುಲೆಟ್ ಪ್ರಕಾಶ್ ತಾರಾಗಣದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.