ADVERTISEMENT

ಹಿಂದಿಗೆ ಮಣೆ : ಕೋಮಲ್ ಆಕ್ಷೇಪಣೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2011, 19:30 IST
Last Updated 25 ಆಗಸ್ಟ್ 2011, 19:30 IST
ಹಿಂದಿಗೆ ಮಣೆ : ಕೋಮಲ್ ಆಕ್ಷೇಪಣೆ
ಹಿಂದಿಗೆ ಮಣೆ : ಕೋಮಲ್ ಆಕ್ಷೇಪಣೆ   

`ಆಡಿಯೊ ಹಿಟ್ ಆಗುತ್ತಿಲ್ಲ. ಸಿ.ಡಿ ಕ್ಯಾಸೆಟ್‌ಗಳನ್ನು ಯಾರೂ ಕೊಳ್ಳುತ್ತಿಲ್ಲ. ತುಂಬಾ ಲಾಸ್ ಆಗುತ್ತಿದೆ ಎನ್ನುವ ಆಡಿಯೊ ಕಂಪೆನಿ ಮಾಲೀಕರು ಹೊಸ ಮನೆ ಗೃಹಪ್ರವೇಶ ಮಾಡುತ್ತಲೇ ಇದ್ದಾರೆ.~ ಆಡಿಯೊ ಸಂಸ್ಥೆಗಳ ಮಾಲೀಕರ ಮೇಲೆ ನಟ ಕೋಮಲ್ ಗುಡುಗಿದ್ದು ಹೀಗೆ.

ಎಫ್‌ಎಂ ವಾಹಿನಿಗಳಲ್ಲಿ ತಮ್ಮ ಸಂಗೀತ ನಿರ್ದೇಶನದ ಕನ್ನಡ ಚಿತ್ರಗೀತೆಗಳ ಕಡೆಗಣನೆ ಕುರಿತಂತೆ ಇತ್ತೀಚೆಗೆ ವಿ.ಮನೋಹರ್ ತೋಡಿಕೊಂಡ ಅಳಲಿಗೆ ಕೋಮಲ್ ಕೂಡ ದನಿಗೂಡಿಸಿದರು. ಈ ಅನುಭವ ತಮಗೂ ಆಗಿದೆ ಎಂದ ಕೋಮಲ್ ಎಫ್‌ಎಂ ವಾಹಿನಿಗಳತ್ತ ಕೋಪ ವ್ಯಕ್ತಪಡಿಸಿದರು. `ಮರ್ಯಾದೆ ರಾಮಣ್ಣ~ ಚಿತ್ರದ ಹಾಡುಗಳನ್ನು ಎಫ್‌ಎಂಗಳಿಗೆ ನೀಡಿ ಎರಡು ವಾರ ಕಳೆದರೂ ಅವು ಪ್ರಸಾರವಾಗಿಲ್ಲ. ತಾವೇ ಸ್ವತಃ ಕೇಳಿಕೊಂಡರೂ ತಮ್ಮ ಚಿತ್ರದ ಹಾಡುಗಳನ್ನು ಪ್ರಸಾರ ಮಾಡುತ್ತಿಲ್ಲ. ಎಫ್‌ಎಂ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸಿದ್ದೂ ಆಯಿತು. ಪ್ರಯೋಜನವಾಗಲಿಲ್ಲ ಎಂದು ಕೋಮಲ್ ಅನುಭವ ಬಿಚ್ಚಿಟ್ಟರು.

`ಜನ ಇಷ್ಟಪಡುವ ಹಾಡುಗಳನ್ನು ಎಫ್‌ಎಂಗಳು ಪ್ರಸಾರ ಮಾಡುತ್ತಿಲ್ಲ. ಕೇಳಲಾರದಂತಹ ಹಾಡುಗಳನ್ನು ಪದೇ ಪದೇ ಕೇಳಿಸುತ್ತಾರೆ. ಅವರಿಗೆ ಆದಾಯ ಬೇಕಷ್ಟೆ. ಕನ್ನಡ ಹಾಡೊಂದಕ್ಕೆ ಒಂದು ಬಾರಿ ಪ್ರಸಾರ ಮಾಡಲು 1200 ರೂ ಕೇಳುತ್ತಾರೆ.

ಕರ್ನಾಟಕದಲ್ಲಿರುವ ಹಿಂದಿ ಎಫ್‌ಎಂಗಳು ತಿಂಗಳಿಗೆ ಐದು ಕೋಟಿ ರೂ ಆದಾಯ ಗಳಿಸುವಾಗ ಒಂದು ಕೋಟಿ ಆದಾಯ ಬರುವ ಕನ್ನಡದ ಎಫ್‌ಎಂಗಳೂ ಹಿಂದಿಯತ್ತ ಮುಖಮಾಡುತ್ತಿವೆ. ಹಿಂದಿ ಚಿತ್ರಗೀತೆಗಳನ್ನು ಪ್ರಸಾರ ಮಾಡಿದರೆ ಜಾಹೀರಾತು ಹೆಚ್ಚಿಗೆ ಬರುತ್ತಿವೆ. ಹೀಗಾಗಿ ಎಲ್ಲಾ ಖಾಸಗಿ ಎಫ್‌ಎಂಗಳೂ ಹಿಂದಿ ಚಿತ್ರಗೀತೆಗಳತ್ತ ಒಲವು ತೋರುತ್ತಿವೆ ಎಂದು ಕೋಮಲ್ ಎಫ್‌ಎಂಗಳಲ್ಲಿ ಕನ್ನಡ ಚಿತ್ರಗೀತೆಗಳ ನಿರ್ಲಕ್ಷ್ಯಕ್ಕೆ ಕಾರಣವನ್ನು ತೆರೆದಿಟ್ಟರು.

ರೇಡಿಯೋ ಜನರನ್ನು ತಲುಪುವ ಸುಲಭ ಮಾಧ್ಯಮ. ಹಾಡುಗಳನ್ನು ಪದೇ ಪದೇ ಜನರು ಕೇಳುತ್ತಿದ್ದರೆ ತಾನೆ ಅದು ಅವರ ಮನಸ್ಸನ್ನು ಹೊಕ್ಕುವುದು. ಹಾಡು ಹಿಡಿಸಿದರೆ ಬಹುತೇಕ ಚಿತ್ರ ಗೆದ್ದಂತೆಯೇ ಎನ್ನುತ್ತಾರೆ ಕೋಮಲ್.

ಇದಾದ ಬಳಿಕ ಅವರ ಮಾತು ಮತ್ತೆ ಆಡಿಯೊ ಸಂಸ್ಥೆಗಳತ್ತ ಹೊರಳಿತು. ಕನ್ನಡ ಹಾಡುಗಳಿಗೆ ಮಾರುಕಟ್ಟೆ ಇಲ್ಲ ಎಂದು ಆಡಿಯೊ ಸಂಸ್ಥೆ ಮಾಲೀಕರು ಸಬೂಬು ಹೇಳುತ್ತಾರೆ. ಆಡಿಯೊ ಫ್ಲಾಫ್ ಎನ್ನುತ್ತಾರೆ. ಆದರೆ `ಕಳ್ ಮಂಜ~ಚಿತ್ರದ ಸಿ.ಡಿಗಳನ್ನು ಲಂಡನ್‌ನ ಮನೆಗಳಲ್ಲಿ ನೋಡಿದ್ದೇೆ. ಕನ್ನಡಿಗರು ಇರುವ ಕಡೆಯೆಲ್ಲ ಕನ್ನಡ ಹಾಡುಗಳಿಗೆ ಮಾರುಕಟ್ಟೆ ಇದೆ. ಅದಕ್ಕೆ ಉತ್ತೇಜನ ನೀಡುವ ಇಚ್ಛಾಶಕ್ತಿ ಆಡಿಯೊ ಸಂಸ್ಥೆಗಳಿಗಿಲ್ಲ.

ಕೆಲವರು ಮಾತ್ರ ನೈಜ ಕಾಳಜಿ ಹೊಂದಿದ್ದಾರೆ. ಹಾಡುಗಳು ಗೆದ್ದರೂ ನಷ್ಟವಾಗಿದೆ ಎಂದು ಸುಳ್ಳು ಸಾರುತ್ತಿದ್ದಾರೆ ಎಂಬುದು ಕೋಮಲ್ ಆರೋಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.