ADVERTISEMENT

ಹೊಸ ಶೈಲಿಯ ಟುಮ್ರಿ ಫಂಕ್

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2012, 19:30 IST
Last Updated 26 ಏಪ್ರಿಲ್ 2012, 19:30 IST

ಐದು ದಶಕಗಳಿಂದ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ತೊಡಗಿಕೊಂಡಿರುವ ಖ್ಯಾತ ಗಾಯಕ ಅಜಯ್ ಪೊಹಂಕರ್ ತಮ್ಮ ನೂತನ ಆಲ್ಬಂ ಬಿಡುಗಡೆ ಮಾಡಿದ್ದಾರೆ. ಅದರಲ್ಲಿ ಅವರ ಪುತ್ರ ಅಭಿಜಿತ್ ಪೊಹಂಕರ್ ಗಾಯಕನಾಗಿ ಪರಿಚಯವಾಗಿರುವುದೇ ಅಲ್ಲದೇ ಹಾಡುಗಳಿಗೆ ಹೊಸ ರೀತಿಯಲ್ಲಿ ರಾಗ ಸಂಯೋಜನೆ ಮಾಡಿರುವುದು ವಿಶೇಷ.

ಇತ್ತೀಚೆಗೆ `ಟುಮ್ರಿ ಫಂಕ್~ ಹೆಸರಿನ ಪೊಹಂಕರ್ ಅವರ ಮ್ಯೂಸಿಕ್ ಆಲ್ಬಂ ಬಿಡುಗಡೆಯಾಯಿತು. ಚಿತ್ರ ಸಾಹಿತಿ ಮತ್ತು ನಾಟಕಕಾರ ಪ್ರಸೂನ್ ಜೋಶಿ ಸೀಡಿಗಳನ್ನು ಬಿಡುಗಡೆ ಮಾಡಿ ಶುಭ ಹಾರೈಸಿದರು. ಸಮಾರಂಭದಲ್ಲಿ ಪಂಕಜ್ ಉದಾಸ್, ಮಿಲಿಂದ್ ಗುನಜಿ ಮುಂತಾದವರು ಹಾಜರಿದ್ದರು.

ಸಮಕಾಲೀನ ಸಂಗೀತದ ಶೈಲಿಗೆ ಸಾಂಪ್ರದಾಯಿಕ ಟುಮ್ರಿಯನ್ನು ಬೆರೆಸಿರುವ ಪ್ರಯೋಗ ಈ ಹಾಡುಗಳಲ್ಲಿ ಇದೆ. ಅಭಿಜಿತ್ ಒಂದು ಹಾಡು ಹಾಡುವ ಮೂಲಕ ಗಾಯಕ ಲೋಕಕ್ಕೆ ಪ್ರವೇಶ ಪಡೆದಿದ್ದಾರೆ. ಅವರದೇ ರಾಗ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಹಾಡುಗಳು ಯುವಜನರನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಮಾಡಿರುವ ಪ್ರಯೋಗ ಎನ್ನಲಾಗಿದೆ.

`ನಾನು ಸಮಕಾಲೀನ ಶೈಲಿ ಮತ್ತು ಸಾಂಪ್ರದಾಯಿಕ ಟುಮ್ರಿಯನ್ನು ಬೆರೆಸಬೇಕೆಂದು ಬಯಸಿದಾಗ ತಂದೆ ಸಹಕರಿಸಿದರು. ಅದರಿಂದಲೇ ಕೇಳುಗರಿಗೆ ಹಿತವಾದ ಮತ್ತು ತಾಜಾ ರಾಗಗಳಿಂದ ಕೂಡಿದ ಆಲ್ಬಂ ಹೊರಬರಲು ಸಾಧ್ಯವಾಯಿತು~ ಎಂದಿದ್ದಾರೆ ಅಭಿಜಿತ್.

ಸೀಡಿಯಲ್ಲಿ `ನೈನಾ ಮೊರೆ..~ ಎಂಬ ಉಸ್ತಾದ್ ಬಡೇ ಗುಲಾಂ ಅಲಿ ಖಾನ್ ಹಾಡಿರುವ ಹಾಡನ್ನು ಸೇರಿಸಲಾಗಿದೆ. ಏಳು ಹಾಡುಗಳಲ್ಲಿ ಐದು ಹಾಡುಗಳನ್ನು ಅಜಯ್ ಹಾಡಿದ್ದಾರೆ. `ಈ ಸೀಡಿಯಲ್ಲಿ ತಂದೆ- ಮಗನ ಸಮಾಗಮ ಹೊಸ ರೀತಿಯಲ್ಲಿ ಆಗಿದೆ~ ಎಂಬುದು ಅಜಯ್ ಪೊಹಂಕರ್ ಉವಾಚ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.