ADVERTISEMENT

ಹರಿಪ್ರಿಯಾ ವಿರುದ್ಧ ವಾಣಿಜ್ಯ ಮಂಡಳಿಗೆ ಸೂಜಿದಾರ ಚಿತ್ರತಂಡ ದೂರು

ನಟಿ– ನಿರ್ದೇಶಕರ ನಡುವಿನ ಸಂಘರ್ಷ ಬಹಿರಂಗ

​ಪ್ರಜಾವಾಣಿ ವಾರ್ತೆ
Published 16 ಮೇ 2019, 14:37 IST
Last Updated 16 ಮೇ 2019, 14:37 IST
ಹರಿಪ್ರಿಯಾ
ಹರಿಪ್ರಿಯಾ    

ಬೆಂಗಳೂರು: ನಟಿ ಹರಿಪ್ರಿಯಾ ಮತ್ತು ‘ಸೂಜಿದಾರ’ ಸಿನಿಮಾ ನಿರ್ದೇಶಕ ಮೌನೇಶ್‌ ಬಡಿಗೇರ್ ನಡುವೆ ಉದ್ಭವಿಸಿರುವಸಂಘರ್ಷ ಈಗ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಯ ಮೆಟ್ಟಿಲು ಹತ್ತಿದೆ.

‘ಸೂಜಿದಾರ’ ಸಿನಿಮಾದ ಡಿಗ್ಲಾಮರ್‌ ‘ಪ‍ದ್ಮಾ’ ಪಾತ್ರದಲ್ಲಿ ಅಭಿನಯಿಸಿದ್ದ ಹರಿಪ್ರಿಯಾ ಅವರು, ಸಾಮಾಜಿಕ ಜಾಲತಾಣದಲ್ಲಿ ಸಿನಿಮಾ ಬಗ್ಗೆ ಹಂಚಿಕೊಂಡಿದ್ದ ಬರಹ ವೈರಲ್‌ ಆಗಿತ್ತು.

ಇದರಿಂದ ಕೆರಳಿರುವ ಚಿತ್ರದ ನಿರ್ದೇಶಕ, ರಂಗಕರ್ಮಿ ಮೌನೇಶ್‌ ಬಡಿಗೇರ್‌, ನಿರ್ಮಾಪಕರಾದ ಸಚ್ಚೀಂದ್ರನಾಥ್‌ ನಾಯಕ್‌, ಅಭಿಜಿತ್‌ ಕೊಟೆಗಾರ್‌ ಅವರು ಗುರುವಾರ ಮಂಡಳಿಯ ಅಧ್ಯಕ್ಷ ಎ.ಎಸ್‌.ಚಿನ್ನೇಗೌಡ ಮತ್ತು ಉಪಾಧ್ಯಕ್ಷ ಭಾ.ಮಾ. ಹರೀಶ್‌ ಅವರನ್ನು ಭೇಟಿಯಾಗಿ, ಹರಿಪ್ರಿಯಾ ವಿರುದ್ಧ ಕ್ರಮಕೈಗೊಳ್ಳುವಂತೆ ದೂರು ಸಲ್ಲಿಸಿದ್ದಾರೆ.

ADVERTISEMENT

ಸೂಜಿದಾರ ಸಿನಿಮಾ ಮೇ 10ರಂದು ರಾಜ್ಯದಾದ್ಯಂತ ಬಿಡುಗಡೆಯಾಗಿ, ಪ್ರೇಕ್ಷಕರಿಂದ ಮತ್ತು ಮಾಧ್ಯಮಗಳಿಂದ ಉತ್ತಮ ವಿಮರ್ಶೆ ಹಾಗೂ ಪ್ರಶಂಸೆ ಗಳಿಸಿದ್ದು, ಸಿನಿಮಾ ಪ್ರದರ್ಶನ ಸಾಗಿದೆ. ಕನ್ನಡದ ಹೊಸ ಬಗೆಯ ಸಂವೇದನಾಶೀಲ ಚಿತ್ರದ ಎಲ್ಲ ವಿಭಾಗಗಳ ಬಗ್ಗೆ, ಎಲ್ಲ ಕಲಾವಿದರ ಅಭಿನಯದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರದ ನಾಯಕಿ ಹರಿಪ್ರಿಯಾ ಅವರು, ಸಿನಿಮಾ ಬಿಡುಗಡೆಯಾಗಿ ಮೂರೇ ದಿನಕ್ಕೆ ‘ನಿರ್ದೇಶಕರು ನನಗೆ ಹೇಳಿದ ಕಥೆಯೇ ಬೇರೆ, ತೆರೆಯ ಮೇಲೆ ನೋಡುತ್ತಿರುವುದೇ ಬೇರೆ, ಹಾಗಾಗಿ ನನ್ನ ಅಭಿಮಾನಿಗಳು ನನ್ನ ಅಭಿಮಾನಿಗಳು ನನ್ನನ್ನು ಕ್ಷಮಿಸಬೇಕು’ ಎಂಬ ಹೇಳಿಕೆಯನ್ನು ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಡಾಟರ್‌ ಆಫ್‌ ಪಾರ್ವತಮ್ಮ ಚಿತ್ರದ ಸುದ್ದಿಗೋಷ್ಠಿಯಲ್ಲಿ ನೀಡಿದ್ದಾರೆ. ಇದರಿಂದಾಗಿ ಇಡೀ ಚಿತ್ರತಂಡ ಮುಜುಗರಕ್ಕೀಡಾಗಿದೆ. ಚಿತ್ರದ ಗಳಿಕೆ ಮೇಲೂ ಪರಿಣಾಮ ಬೀರುತ್ತಿದೆ. ಅನೇಕರು ‘ಚಿತ್ರದ ನಾಯಕಿಯೇ ಚಿತ್ರ ಚೆನ್ನಾಗಿಲ್ಲ ಎಂದಿರುವಾಗ ನಾವು ಯಾಕೆ ಸಿನಿಮಾ ನೋಡಬೇಕು’ ಎಂದು ಕೇಳುತ್ತಿದ್ದಾರೆ’ ಎಂದು ಚಿತ್ರ ತಂಡ ದೂರಿನಲ್ಲಿ ಆರೋಪಿಸಿದೆ.

ಚಿತ್ರೀಕರಣಕ್ಕೂ ಮೊದಲೇ ಹರಿಪ್ರಿಯಾ ಅವರಿಗೆ ಸಿನಿಮಾದ ಸಂಪೂರ್ಣ ಕಥೆ ಹೇಳಲಾಗಿತ್ತು. ಸ್ಕ್ರಿಪ್ಟ್‌ ಸಹ ನೀಡಲಾಗಿತ್ತು. ಆಗ ಯಾವುದೇ ಚಕಾರ ಎತ್ತದೆ ಒಪ್ಪಿಕೊಂಡಿದ್ದರು. ಈಗ ಅವರ ನಟನೆಯ ಜತೆಗೆ ಉಳಿದ ಕಲಾವಿದರ ನಟನೆಯ ಬಗ್ಗೆಯೂ ಪ್ರಶಂಸೆ ಬರುತ್ತಿರುವುದು ಅವರ ಅಹಂಗೆ ಪೆಟ್ಟು ಬಿದ್ದಂತಾಗಿ, ಇಂತಹ ಹೇಳಿಕೆ ನೀಡುತ್ತಿದ್ದಾರೆ. ಇದರಿಂದಾಗಿ ಸಿನಿಮಾದಲ್ಲಿ ಅಭಿನಯಿಸಿರುವ ಹಲವು ಪ್ರತಿಭಾವಂತಹ ಕೌಶಲಕ್ಕೂ ಅವಮರ್ಯಾದೆ ಮಾಡಿದಂತಾಗಿದೆ. ಇದಿಷ್ಟೆ ಅಲ್ಲದೇ, ಹರಿಪ್ರಿಯಾ ಅವರು ಸಿನಿಮಾದ ಯಾವ ಪ್ರಚಾರ ಕಾರ್ಯಗಳಲ್ಲೂ ಸಕ್ರಿಯರಾಗಿ ಸಹಕರಿಸಲಿಲ್ಲ. ನಿರ್ದೇಶಕರು, ನಿರ್ಮಾಪಕರ ಮೊಬೈಲ್‌ ಕರೆಗಳನ್ನು ಸ್ವೀಕರಿಸದೆ ಸಿನಿಮಾ ಬಿಡುಗಡೆ ವಿಳಂಬವಾಗುವುದಕ್ಕೂ ಕಾರಣರಾಗಿದ್ದಾರೆ ಎಂದು ದೂರಿದ್ದಾರೆ.

ಹರಿಪ್ರಿಯಾ ಅವರ ಈ ನಡವಳಿಕೆ ಸಿನಿಮಾ ನೋಡುವ ಪ್ರೇಕ್ಷಕ ವರ್ಗದ ಮೇಲೆ ಹಾಗೂ ಸಿನಿಮಾದ ಗಳಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ನಟಿಯ ಮೇಲೆ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ನಿರ್ಮಾಪಕರಿಗೆ ಆಗುತ್ತಿರುವ ನಷ್ಟ ಭರಿಸಬೇಕು. ನಿರ್ದೇಶಕರ ಮೇಲೆ ಅನ್ಯತಾ ಆಪಾದನೆ ಮಾಡಿರುವುದಕ್ಕೂ ತಕ್ಕ ಕ್ರಮ ತೆಗೆದುಕೊಳ್ಳಬೇಕು ಎಂದು ಚಿತ್ರ ತಂಡವು, ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ಮನವಿ ಮಾಡಿದೆ.

ಹರಿಪ್ರಿಯಾ ಅಸಮಾಧಾನ

‘ಚಿತ್ರ ಪ್ರಚಾರಕ್ಕೂ ನನ್ನ ಹೆಸರನ್ನೇ ಬಳಸಿಕೊಂಡರು. ಈಗ ನೆಗೆಟಿವ್‌ ಪಬ್ಲಿಸಿಟಿ ಮಾಡುತ್ತಾ, ಸಿನಿಮಾ ಮಾರ್ಕೆಟಿಂಗ್‌ ಮಾಡಿಕೊಳ್ಳುತ್ತಿದ್ದಾರೆ. ಮಾಡಲಿ ಬಿಡಿ’ ಎಂದು ‘ಸೂಜಿದಾರ’ ಚಿತ್ರದ ನಾಯಕಿಹರಿಪ್ರಿಯಾ ಬೇಸರ ವ್ಯಕ್ತಪಡಿಸಿದ್ದಾರೆ.

‘ನಿರ್ದೇಶಕರು ತನಗೆ ಇಷ್ಟಬಂದಂತೆ ಸಿನಿಮಾ ಮಾಡುತ್ತೇನೆ ಎಂದಿದ್ದರೆ ನಾನು ಈ ಸಿನಿಮಾ ಒಪ್ಪಿಕೊಳ್ಳುತ್ತಿರಲಿಲ್ಲ. ಸಿನಿಮಾ ನೋಡಿದಾಗ ನನಗೆ ನಿಜಕ್ಕೂ ಶಾಕ್‌ ಆಯಿತು. ನನಗೆ ಹೇಳಿದಷ್ಟೇ ಕಥೆ ಇಟ್ಟುಕೊಂಡು ಸಿನಿಮಾ ಮಾಡಿದ್ದರೆ, ಇಂದು ಖಂಡಿತಾ ಸೂಪರ್‌ಹಿಟ್‌ ಆಗುತ್ತಿತ್ತು. ಅವರಿಗೂ ಹಣ ಬರುತ್ತಿತ್ತು. ಸಿನಿಮಾ ಸೋತರು, ಗೆದ್ದರೂ ಅದು ನನ್ನದೇ ಸಿನಿಮಾ. ನನಗೆಸೋಲು, ಗೆಲುವು ಹೊಸದಲ್ಲ. ಪ್ರೇಕ್ಷಕರು ಬೇಸರ ಮಾಡಿಕೊಂಡಾಗ ಅವರಿಗೆ ಕ್ಷಮೆ ಕೇಳುವ ಕರ್ತವ್ಯ ನನ್ನದೇ ಆಗಿರುತ್ತದೆ. ಸಮರ್ಥನೆ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ತಪ್ಪನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ, ಆ ತಪ್ಪು ಯಾರದ್ದು ಎಂದು ಹೇಳಬೇಕು. ಹಾಗಾಗಿಯೇ ನಾನು ಏನು ಹೇಳಬೇಕಿತ್ತೋ ಅದನ್ನು ಮುಕ್ತವಾಗಿ ಮತ್ತು ಧೈರ್ಯವಾಗಿ ಫೇಸ್‌ಬುಕ್‌ನಲ್ಲಿ ಹಾಕಿದ್ದೇನೆ’ ಎಂದು ಪ್ರಜಾವಾಣಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ನಿರ್ದೇಶಕರು ‘ನಾವು ರಂಗಭೂಮಿಯಿಂದ ಬಂದವರು. ಇದೊಂದು ನಾಯಕಿ ಪ್ರಧಾನ ಸಿನಿಮಾ. ಇದನ್ನು ನೀವೇ ಮಾಡಿದರೆ, ಸಿನಿಮಾ ಹೆಚ್ಚು ಜನರಿಗೆ ತಲುಪುತ್ತದೆ. ಅಲ್ಲದೆ, ಹಣಕಾಸು ತೊಂದರೆ ಇದೆ. ಹಾಗಾಗಿ ಹೆಚ್ಚು ಹಣ ಕೊಡಲು ನಮ್ಮಿಂದ ಆಗುವುದಿಲ್ಲ’ ಎಂದಿದ್ದರು. ನಾನು ವಾಣಿಜ್ಯ ಸಿನಿಮಾಕ್ಕೆ ಪಡೆಯುವ ಸಂಭಾವನೆಯಲ್ಲಿ ಕಾಲು ಭಾಗವನ್ನೂ ಪಡೆದುಕೊಂಡಿಲ್ಲ. ಅವರಿಗೆ ಸಹಾಯ ಮಾಡಲು ಸಿನಿಮಾ ಒಪ್ಪಿಕೊಂಡೇ. ಈ ಸಹಾಯದ ಜತೆಗೆ ನನ್ನ ಸ್ವಾರ್ಥವೂ ಇತ್ತು. ಏಕೆಂದರೆ, ನಾನು ಒಳ್ಳೆಯ ಪಾತ್ರದ ಹುಡುಕಾಟದಲ್ಲಿ ಇದ್ದೆ. ಒಂದು ಪ್ರಯೋಗಾತ್ಮಕ ಸಿನಿಮಾ ಮಾಡಿದಂತಾಗುತ್ತದೆ ಎಂದು ನಟಿಸಿದೆ’ ಎಂದು ಹೇಳಿದ್ದಾರೆ.

‘ನಿರ್ದೇಶಕರಕಚೇರಿಯಲ್ಲಿ ನಾನು, ನಿರ್ದೇಶಕರು, ಹೀರೋ ಮತ್ತು ಕ್ಯಾಮೆರಾಮನ್‌ ಮೂರು ದಿನಗಳ ಕಾಲ ಚಿತ್ರದ ಇಡೀ ಸ್ಕ್ರಿಪ್ಟ್‌ ರೀಡಿಂಗ್‌ ಮಾಡಿದ್ದೇವೆ. ಫೋಟೊಶೂಟ್‌ ಕೂಡ ಮಾಡಲಾಗಿತ್ತು. ಅವುಗಳನ್ನು ಬೇಕಾದರೆ ಮಾಧ್ಯಮಗಳಿಗೆ ನೀಡುತ್ತೇನೆ. ಆದರೆ, ಈಗ ನನಗೆ ಹೇಳದೆ ಇರುವ ಕಥೆಯ ಪಾತ್ರಗಳೆಲ್ಲವೂ ಸಿನಿಮಾದಲ್ಲಿ ಕಾಣಿಸುತ್ತಿವೆ. ನನಗೆ ಗೊತ್ತಿಲ್ಲದ ಕಥೆ ಸಿನಿಮಾದಲ್ಲಿ ಕಾಣಿಸುತ್ತಿದೆ. ನನ್ನದೇ ಚಿತ್ರತಂಡವೆಂದು ಮೂರು ದಿನಗಳ ಕಾಲ ವರ್ಕ್‌ಶಾಪ್‌ನಲ್ಲಿ ತೊಡಗಿಸಿಕೊಂಡಿದ್ದೆ. ಹೀಗಿರುವಾಗ ಚಿತ್ರಕಥೆ, ಪಾತ್ರಗಳು ಬದಲಿಸುವಾಗ ನನ್ನೊಂದಿಗೂ ಚರ್ಚೆ ಮಾಡಬೇಕಿತ್ತಲ್ಲವೇ’ ಎಂದು ಹರಿಪ್ರಿಯಾಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.