ಮನೋಹರ ಕೆ. ನಿರ್ದೇಶನದ, ಪೃಥ್ವಿ ಕೊಣನೂರು ನಿರ್ಮಾಣದ ‘ಮಿಕ್ಕ ಬಣ್ಣದ ಹಕ್ಕಿ’ ಸಿನಿಮಾ ಪ್ರಥಮ ಬಹುಮಾನ ಪಡೆಯಿತು.
ಬೆಂಗಳೂರು: 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಈ ಬಾರಿ ತುಳು ಭಾಷೆಯ ಚಿತ್ರಗಳು ಪ್ರಾಬಲ್ಯ ಮೆರೆದವು. ಒಟ್ಟು ಮೂರು ಪ್ರಶಸ್ತಿಗಳ ಪೈಕಿ ಎರಡು ಪ್ರಶಸ್ತಿಗಳನ್ನು ತುಳು ಚಿತ್ರಗಳೇ ಬಾಚಿಕೊಂಡವು.
ಮನೋಹರ ಕೆ. ನಿರ್ದೇಶನದ, ಪೃಥ್ವಿ ಕೊಣನೂರು ನಿರ್ಮಿಸಿದ ‘ಮಿಕ್ಕ ಬಣ್ಣದ ಹಕ್ಕಿ’ ಸಿನಿಮಾ ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು.
ತುಳು ಚಿತ್ರಗಳಾದ ಸಂತೋಷ್ ಮಾಡ ನಿರ್ದೇಶನದ, ಸುರೇಶ್ ಕೆ. ನಿರ್ಮಾಣದ ‘ಪಿದಾಯಿ’ ಹಾಗೂ ಅನೀಶ್ ಪೂಜಾರಿ ನಿರ್ದೇಶನದ, ರಾಘವೇಂದ್ರ ಕೆ. ನಿರ್ಮಾಣದ ‘ದಸ್ಕತ್’ ಸಿನಿಮಾಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದವು. ವಿಜೇತ ಸಿನಿಮಾಗಳಿಗೆ ಕ್ರಮವಾಗಿ ₹10, ₹5 ಹಾಗೂ ₹2 ಲಕ್ಷ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ಕೃಷ್ಣೇಗೌಡ ಅವರು ನಿರ್ದೇಶಿಸಿದ ‘ಲಚ್ಚಿ’ ನೆಟ್‌ಪ್ಯಾಕ್ ಜ್ಯೂರಿ ಪ್ರಶಸ್ತಿಗೆ ಭಾಜನವಾಯಿತು.
ಕನ್ನಡ ಸಿನಿಮಾ ಸ್ಪರ್ಧಾ ವಿಭಾಗದಲ್ಲಿ ಒಟ್ಟು ಹದಿನಾಲ್ಕು ಸಿನಿಮಾಗಳು ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದವು. ಎರಡು ತುಳು ಸಿನಿಮಾಗಳು ಪ್ರಶಸ್ತಿ ಪಡೆದಿರುವುದು ಇದೇ ಮೊದಲು ಎನ್ನುತ್ತಾರೆ ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್.
ವಾರ್ತಾ ಇಲಾಖೆಯ ಸುಲೋಚನಾ ಸಭಾಂಗಣದಲ್ಲಿ ಶನಿವಾರ ನಡೆದ ಚಿತ್ರೋತ್ಸವದ ಸಮಾರೋಪ ಸಮಾರಂಭದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್, ನಟಿ ಅರುಂಧತಿ ನಾಗ್, ನಟ, ಚಿತ್ರೋತ್ಸವದ ರಾಯಭಾರಿ ಕಿಶೋರ್ ಕುಮಾರ್ ಜಿ. ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧುಕೋಕಿಲ ವಿಜೇತರಿಗೆ ಬಹುಮಾನ ವಿತರಣೆ ಮಾಡಿದರು.
ಭಾರತೀಯ ಚಿತ್ರಗಳನ್ನು ಪ್ರತಿನಿಧಿಸುವ ‘ಚಿತ್ರಭಾರತಿ’ ಸ್ಪರ್ಧಾ ವಿಭಾಗದಲ್ಲಿ ಅರಣ್ಯ ಸಹಾಯ್ ನಿರ್ದೇಶನದ ‘ಹ್ಯೂಮನ್ಸ್ ಇನ್ ದಿ ಲೂಪ್’ ಹಿಂದಿ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಅರ್ಫಾಜ್ ಅಯುಬ್ ನಿರ್ದೇಶನದ ಮಲಯಾಳ ಸಿನಿಮಾ ‘ಲೆವೆಲ್ ಕ್ರಾಸ್’ ದ್ವಿತೀಯ ಹಾಗೂ ಅಭಿಲಾಷ್ ಶರ್ಮಾ ನಿರ್ದೇಶನದ ಮಗಹೀ ಭಾಷೆಯ ಸಿನಿಮಾ ‘ಸ್ವಾಹ’ ತೃತೀಯ ಅತ್ಯುತ್ತಮ ಚಿತ್ರ ಬಹುಮಾನ ಪಡೆಯಿತು. ‘ಏಷಿಯನ್ ಸಿನಿಮಾ’ ಸ್ಪರ್ಧಾ ವಿಭಾಗದಲ್ಲಿ ರಾಹಾ ಆಮೀರ್‌ಫಾಝ್ಲಿ ಹಾಗೂ ಅಲಿರೆಝಾ ಘಸೆಮಿ ನಿರ್ದೇಶನದ ‘ಇನ್ ದಿ ಲ್ಯಾಂಡ್ ಆಫ್ ಬ್ರದರ್ಸ್’ ಸಿನಿಮಾ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆಯಿತು. ಎರಾನ್ ರಿಕ್ಲಿಸ್ ನಿರ್ದೇಶನದ ‘ರೀಡಿಂಗ್ ಲೊಲಿಟ ಇನ್ ಟೆಹ್ರಾನ್’ ಚಿತ್ರ ಹಾಗೂ ಮಕ್‌ಸುದ್ ಹುಸೈನ್ ನಿರ್ದೇಶನದ ‘ಸಭಾ’ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದವು.
‘ಈ ವರ್ಷದ ಚಿತ್ರೋತ್ಸವದಲ್ಲಿ ಶೇ 30 ರಿಂದ 40 ವೀಕ್ಷಕರು ಹೆಚ್ಚು ಭಾಗವಹಿಸಿದ್ದಾರೆ. ನೇರವಾಗಿ ಹೇಳುವುದು ನಮ್ಮ ಒಳ್ಳೆಯದಕ್ಕೆ. ಮುಂದೆ ಹೊಗಳಿ, ಹಿಂದೆ ತೆಗಳುವುದು ಅಪಾಯಕಾರಿ. ಇದನ್ನು ನಮ್ಮ ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು’ ಎಂದರು ಸಾಧುಕೋಕಿಲ.
ಸಿದ್ದರಾಮಯ್ಯನಂಥ ನಾಯಕರು ಅವಶ್ಯಕ: ‘ರಾಜ್‌ಕುಮಾರ್ ಅವರ ಹೆಸರು ಕೇವಲ ಚಪ್ಪಾಳೆಗಷ್ಟೇ ಸೀಮಿತವಾಗುತ್ತಿದೆ. ಅವರ ಆದರ್ಶಗಳನ್ನು ನೋಡಬೇಕಿದೆ. ‘ಬೇಡರ ಕಣ್ಣಪ್ಪ’ ದೇವರಿಗೆ ತನ್ನ ಆಹಾರವಾದ ಮಾಂಸ ಕೊಟ್ಟವನು. ಭಕ್ತಿಯನ್ನು ಹೇಳುತ್ತಲೇ ಧರ್ಮದ ಸರಿ ತಪ್ಪುಗಳನ್ನು ಕಣ್ಣಪ್ಪ ಒರೆಗೆ ಹಚ್ಚಿ, ಕಟ್ಟಾ ಸಂಪ್ರದಾಯಸ್ತರು ಸ್ವಇಚ್ಛೆಯಿಂದ ಇವನು ಸರಿ ಅನ್ನುವ ರೀತಿ ಸಮಾನತೆಗೆ ಮುಖ ಮಾಡಲು ದೂಡಿದ ನಾಯಕ ಕಣ್ಣಪ್ಪ. ‘ಮಾಂಸ ತಿಂದು ನಾನು ದೇವಸ್ಥಾನಕ್ಕೆ ಹೋಗುತ್ತೇನೆ. ಏನು ತಪ್ಪು? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಟ್ಟಿತನದ ಹೇಳಿಕೆ ನೀಡಿದ್ದರು. ಸತ್ಯವನ್ನು ಧೈರ್ಯವಾಗಿ ಹೇಳುವುದಕ್ಕೆ, ನಮ್ಮ ಮೂಢನಂಬಿಕೆಗಳನ್ನು ಒರೆಗೆ ಹಚ್ಚಿ ತಿದ್ದುವುದಕ್ಕೆ ಈ ಥರದ ನಾಯಕರು ತುಂಬಾ ಅವಶ್ಯಕ’ ಎಂದು ನಟ ಕಿಶೋರ್ ಹೇಳಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಾರ್ಯದರ್ಶಿ ಬಿ.ಬಿ.ಕಾವೇರಿ, ಇಲಾಖೆಯ ಆಯುಕ್ತ ಹೇಮಂತ್ ಎಂ. ನಿಂಬಾಳ್ಕರ್, ಚಿತ್ರೋತ್ಸವದ ಕಲಾತ್ಮಕ ನಿರ್ದೇಶಕ ಎನ್.ವಿದ್ಯಾಶಂಕರ್ ಉಪಸ್ಥಿತರಿದ್ದರು.
ಸಣ್ಣ ಬಜೆಟ್ ಸಿನಿಮಾಗಳಿಗೆ ಸೂಕ್ತ ರೀತಿಯಲ್ಲಿ ಚಿತ್ರಮಂದಿರಗಳು ದೊರೆಯಬೇಕಿದೆ. ಆಯಾ ಮಾತೃಭಾಷೆಯಲ್ಲಿ ನಿರ್ಮಾಣವಾಗುವ ಸಿನಿಮಾಗಳಿಗೂ ಅದಕ್ಕೇ ಆದ ವೇದಿಕೆ ಹಾಗೂ ಸ್ಫೂರ್ತಿ ತುಂಬುವ ಕೆಲಸವನ್ನು ಸರ್ಕಾರಗಳು ಮಾಡಬೇಕು.
–ಸಂತೋಷ್ ಲಾಡ್ ಕಾರ್ಮಿಕ ಸಚಿವ
ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರು ತಂತ್ರಜ್ಞರ ಇತಿಹಾಸ ಕೃತಿಗಳ ಮೂಲಕ ಶಾಶ್ವತವಾಗಬೇಕು. ಅವರ ಬಗ್ಗೆ ಪಠ್ಯ ಡಿಜಿಟಲ್ ಗ್ರಂಥಾಲಯ ಆಗಬೇಕು. ಸ್ಮಾರಕ ನಿರ್ಮಾಣ ರಸ್ತೆಗೆ ಹೆಸರಿಟ್ಟರೆ ಅವು ಸ್ಥಾವರವಾಗುತ್ತದೆ. ಆದರೆ ಜಂಗಮಕ್ಕಳಿವಿಲ್ಲ.
–ಕಿಶೋರ್ ನಟ
ಶಬಾನಾ ಆಜ್ಮಿಗೆ ಜೀವಮಾನ ಸಾಧನೆ ಪ್ರಶಸ್ತಿ
ಬಹುಭಾಷಾ ನಟಿ ಶಬಾನಾ ಆಜ್ಮಿ ಅವರು ಈ ವರ್ಷದ ಜೀವಮಾನ ಸಾಧನೆ ಪ್ರಶಸ್ತಿಗೆ ಭಾಜನರಾದರು. ಅವರ ಪರವಾಗಿ ನಟಿ ಅರುಂಧತಿ ನಾಗ್ ಪ್ರಶಸ್ತಿ ಸ್ವೀಕರಿಸಿದರು. 70ರ ದಶಕದಲ್ಲಿ ‘ಕನ್ನೇಶ್ವರ ರಾಮ’ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ್ದ ಶಬಾನಾ ಅವರು ದಕ್ಷಿಣ ಭಾರತದ ಚಿತ್ರಗಳು ಹಾಗೂ ಹಿಂದಿ ಭಾಷೆಯ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಸುಮಾರು 50 ವರ್ಷಗಳ ಅವರ ಕಲಾಸೇವೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ಪೃಥ್ವಿ ಕೊಣನೂರು ಸ್ಫೂರ್ತಿ
ಪೃಥ್ವಿ ಕೊಣನೂರು ಅವರ ‘ರೈಲ್ವೆ ಚಿಲ್ಡ್ರನ್’ನಿಂದ ನನ್ನ ಸಿನಿಪಯಣ ಆರಂಭವಾಯಿತು. ನಟನಿಂದ ನಿರ್ದೇಶಕನಾದೆ. ‘ಹದಿನೇಳೆಂಟು’ ಚಿತ್ರದಲ್ಲಿ ಸಹಾಯಕ ನಿರ್ದೇಶಕನಾಗಿದ್ದೆ. ಅವರು ನನಗೆ ಸ್ಫೂರ್ತಿ. ಹಲವು ಅಂತರರಾಷ್ಟ್ರೀಯ ಚಿತ್ರೋತ್ಸವಗಳಿಗೆ ಸಿನಿಮಾಗಳು ಹೋದರೂ ಇಲ್ಲಿ ಬಂದ ಪ್ರಶಸ್ತಿ ಎಲ್ಲವುದಕ್ಕಿಂತ ಮಿಗಿಲು. ನನ್ನ ಈ ಸಿನಿಮಾ ರಾಜ್ಯದ ಎಲ್ಲಾ ಶಾಲಾ ಮಕ್ಕಳನ್ನು ತಲುಪಬೇಕು. ನಾನು ಆರ್.ಸಿ. ಕಾಲೇಜಿನಲ್ಲಿ ಎಂ.ಕಾಂ ಓದುತ್ತಿದ್ದೇನೆ ಮುಂದೆ ಸಿನಿಮಾ ಬರವಣಿಗೆ ಹಾಗೂ ನಟನೆ ಮುಂದುವರಿಸಲಿದ್ದೇನೆ.
–ಮನೋಹರ ಕೆ., ‘ಮಿಕ್ಕಬಣ್ಣದ ಹಕ್ಕಿ’ ನಿರ್ದೇಶಕ
***
ತುಳು ಸಿನಿಮಾಗಳಿಗೆ ಸ್ಫೂರ್ತಿ
ತುಳು ಚಿತ್ರರಂಗಕ್ಕೆ 50 ವರ್ಷ ತುಂಬಿದೆ. ಇಷ್ಟು ವರ್ಷಗಳಲ್ಲಿ ತುಳು ಚಿತ್ರರಂಗದ ಅದ್ಭುತ ಸಾಧನೆ ಇದು. ಬೆಂಗಳೂರು ಚಿತ್ರೋತ್ಸವವು ನಮಗೆ ಬೆಂಬಲವಾಗಿ ನಿಂತಿದೆ. ಮಹಿಳಾ ಸಬಲೀಕರಣದ ಕುರಿತ ನಮ್ಮ ಸಿನಿಮಾಗೆ ಮಹಿಳಾ ದಿನಾಚರಣೆ ಸಂದರ್ಭದಲ್ಲೇ ಪ್ರಶಸ್ತಿ ಬಂದಿದೆ. ಮತ್ತಷ್ಟು ಒಳ್ಳೆಯ ವಿಷಯಗಳಿರುವ ತುಳು ಸಿನಿಮಾಗಳು ಬರಲು ಈ ಪ್ರಶಸ್ತಿ ಸಹಾಯವಾಗಲಿದೆ.
–ಸಂತೋಷ್ ಮಾಡ ‘ಪಿದಾಯಿ’ ನಿರ್ದೇಶಕ
***
ಸಿನಿಮಾಗೆ ಭಾಷೆಯ ಗಡಿ ಇಲ್ಲ ನಾವು ಪ್ರಶಸ್ತಿಯನ್ನು ನಿರೀಕ್ಷಿಸಿದ್ದೆವು. ಆರು ವರ್ಷದ ಸಿನಿಪಯಣದಲ್ಲಿ ಇದು ನಮ್ಮ ಮೊದಲ ತುಳು ಸಿನಿಮಾ. ಚಿತ್ರೋತ್ಸವದಲ್ಲಿ ಸಿನಿಮಾ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. ಸಿನಿಮಾಗೆ ಭಾಷೆಯ ಗಡಿ ಇಲ್ಲ. ಜನರು ಅದನ್ನು ಭಾವನಾತ್ಮಕವಾಗಿ ನೋಡುತ್ತಾರೆ ಎನ್ನುವುದಕ್ಕೆ ತುಳು ಸಿನಿಮಾಗಳಿಗೆ ಸಿಕ್ಕಿರುವ ಪ್ರಶಸ್ತಿಯೇ ಸಾಕ್ಷಿ.
–ಅನೀಶ್ ಪೂಜಾರಿ ‘ದಸ್ಕತ್’ ನಿರ್ದೇಶಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.