
ಪುಷ್ಪರಾಜ್ ಕಥೆ ಬರೆದು ನಿರ್ದೇಶಿಸಿರುವ ‘1979’ ಚಿತ್ರದ ಪೋಸ್ಟರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ‘ಆ ದಿನಗಳು’ ಖ್ಯಾತಿಯ ಚೇತನ್, ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದರು. ಬಿ.ಎಂ.ಶ್ರೀನಿವಾಸ್ ಬೀರಮಾನಹಳ್ಳಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
‘1904ರಿಂದ 1979ರವರೆಗೆ ಪಶ್ಚಿಮ ಬಂಗಾಳದಲ್ಲಿ ನಡೆದ ಸತ್ಯ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಹೆಣೆದ ಕಥೆಯಿದು. ಒಂದಷ್ಟು ಅಂಶಗಳನ್ನು ಕಮರ್ಷಿಯಲ್ ರೂಪದಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ. ನಿರಾಶ್ರಿತ ಒಂದು ಸಮುದಾಯದವರು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಯಾವ ರೀತಿ ಹೋರಾಟ ಮಾಡುತ್ತಾರೆ? ಅಲ್ಲಿನ ದಬ್ಬಾಳಿಕೆ ವಿರುದ್ದ ಕ್ರಾಂತಿ ಹೇಗೆ ಶುರುವಾಗುತ್ತದೆ ಎಂಬುದೇ ಚಿತ್ರದ ತಿರುಳು’ ಎಂದರು ನಿರ್ದೇಶಕ.
ಅಜ್ಜು, ಪ್ರಾಣ್ವಿ, ಸುಜಿತ್, ಅಮೃತ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ದುರ್ಗಾ, ಪ್ರೀತಿ, ತಕ್ಷಾರಾಮ್, ನಿರಂಜನ್, ಧನುಷ್ ಮುಂತಾದವರು ಚಿತ್ರದಲ್ಲಿದ್ದಾರೆ. ಜಸ್ವಂತ್ ಪಸುಪುಲೇಟಿ ಸಂಗೀತ, ಚಲಾಕಿ ಚರಣ್ ಛಾಯಾಚಿತ್ರಗ್ರಹಣ, ವಸಂತ್ ಸಂಕಲನ ಚಿತ್ರಕ್ಕಿದೆ. ಕೋಲಾರ, ತೇರಳ್ಳಿ, ಯರಗೋಳ ಮುಂತಾದೆಡೆ ಚಿತ್ರೀಕರಿಸಲಾಗಿದೆ.
‘ನಿರಾಶ್ರಿತರ ಕಥೆಗಳು ಕನ್ನಡದಲ್ಲಿ ಹೆಚ್ಚು ಬಂದಿಲ್ಲದಿರಬಹುದು. ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿವೆ. ಈ ಕಾಲದಲ್ಲಿ ಪ್ಯಾನ್ ಇಂಡಿಯಾ ಕಥೆಗಳನ್ನು ಕರ್ನಾಟಕಕ್ಕೆ ತಂದು, ಇತಿಹಾಸದಲ್ಲಿ ಮುಚ್ಚಿ ಹಾಕಿರುವ ವಿಷಯಗಳನ್ನು ಜನತೆಗೆ ಪರಿಚಿಯಿಸುವ ಈ ತಂಡದ ಶ್ರಮ ನಿಜಕ್ಕೂ ಶ್ಲಾಘನೀಯವಾಗಿದೆ’ ಎಂದರು ನಟ ಚೇತನ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.